ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ| ಕೊರೋನಾ 2ನೇ ಅಲೆ ಮೋದಿ ನಿರ್ಮಿತ ದುರಂತ: ದೀದಿ!

ಬಾಲೂರ್‌ಘಾಟ್‌ (ಏ.22)): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೊರೋನಾ 2ನೇ ಅಲೆ ಮೋದಿ ನಿರ್ಮಿತ ದುರಂತ ಎಂದು ಆರೋಪಿಸಿದ್ದಾರೆ.

ದೇಶದಲ್ಲಿ ಉತ್ಪಾದನೆ ಆದ ಶೇ.65ರಷ್ಟುಲಸಿಕೆಗಳನ್ನು ಈಗಾಗಲೇ ರಫ್ತು ಮಾಡಲಾಗಿದೆ. ಕೇಂದ್ರ ಸರ್ಕಾರದ ವೈಫಲ್ಯದಿಂದಾಗಿ ದೇಶದಲ್ಲಿ ಕೊರೋನಾ ಉಲ್ಬಣಗೊಂಡಿದೆ. ಒಂದು ವೇಳೆ ಕೊರೋನಾ ನಿಯಂತ್ರಣಕ್ಕೆ ವೈದ್ಯಕೀಯ ಸಾಮಗ್ರಿಗಳನ್ನು ಪೂರೈಸಲು ಸಾಧ್ಯವಾಗದೇ ಇದ್ದರೆ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ ಲಾಕ್‌ಡೌನ್‌ ಮಾಡುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದಾರೆ.

ಕೊರೋನಾ ನಿಗ್ರಹದಲ್ಲಿ ಮೋದಿ ವೈಫಲ್ಯ: ಪ್ರಿಯಾಂಕಾ

ಕೊರೋನಾ ಎರಡನೇ ಅಲೆ ಎದುರಿಸಲು ಕೇಂದ್ರ ಸರ್ಕಾರ ಸಿದ್ಧತೆಯನ್ನೇ ಮಾಡಿಕೊಂಡಿಲ್ಲ ಎಂದು ಟೀಕಿಸಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ದೇಶದ ಲಸಿಕಾ ತಂತ್ರಗಾರಿಕೆ ಭಯಾನಕ ವೈಫಲ್ಯ ಅನುಭವಿಸಿದೆ. ತನ್ನ ಈ ತಪ್ಪಿಗೆ ಕೇಂದ್ರ ಸರ್ಕಾರ ಮಾಜಿ ಪ್ರಧಾನಿ ಜವಾಹರ ಲಾಲ್‌ ಅವರನ್ನು ದೂಷಿಸಬಾರದು. ಏಕೆಂದರೆ ಪ್ರಧಾನಿಯಾಗಿರುವವರು ನರೇಂದ್ರ ಮೋದಿ ಎಂದು ವ್ಯಂಗ್ಯವಾಡಿದ್ದಾರೆ.

ಭಾರತೀಯರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಮೊದಲು ಆದ್ಯತೆ ನೀಡಬೇಕಾಗಿತ್ತು. ಉತ್ತರಪ್ರದೇಶದಲ್ಲಿ 22 ಕೋಟಿ ಜನರಿದ್ದಾರೆ. ಈವರೆಗೆ ಕೇವಲ 1 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಕೇಂದ್ರ ಸರ್ಕಾರ ಜನವರಿಯಿಂದ ಮಾಚ್‌ರ್‍ ಅವಧಿಯಲ್ಲಿ 6 ಕೋಟಿ ಲಸಿಕೆಗಳನ್ನು ಪ್ರಚಾರಕ್ಕಾಗಿ ವಿದೇಶಗಳಿಗೆ ರಫ್ತು ಮಾಡಿ ಫೋಟೋ ತೆಗೆಸಿಕೊಂಡಿದೆ. ಆದರೆ ಇದೇ ಅವಧಿಯಲ್ಲಿ ಕೇವಲ ಮೂರರಿಂದ ನಾಲ್ಕು ಕೋಟಿ ಭಾರತೀಯರಿಗಷ್ಟೇ ಲಸಿಕೆ ಸಿಕ್ಕಿದೆ ಎಂದು ಕಿಡಿಕಾರಿದ್ದಾರೆ.