ನವದೆಹಲಿ(ಅ.27): ದೇಶದ ಮೊದಲ ಸೀಪ್ಲೇನ್‌ (ನೀರಿನ ಮೇಲೆ ಚಲಿಸುವ ವಿಮಾನ) ಸಂಚಾರ ಅ.31ರಂದು ಆರಂಭವಾಗಲಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸಾಬರ್‌ಮತಿ ರಿವರ್‌ಫ್ರಂಟ್‌ ಪ್ರದೇಶದಿಂದ 205 ಕಿ.ಮೀ. ದೂರದಲ್ಲಿರುವ ಕೆವಾಡಿಯಾ ಜಿಲ್ಲೆಯಲ್ಲಿನ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ ಏಕತಾ ಪ್ರತಿಮೆ ಇರುವ ಸ್ಥಳಕ್ಕೆ ಈ ಸಂಚಾರ ನಡೆಯಲಿದೆ. ಖಾಸಗಿ ವಲಯದ ಸ್ಪೈಸ್‌ ಜೆಟ್‌ ಸಂಸ್ಥೆ ಈಗಾಗಲೇ ಮಾಲ್ಡೀವ್‌್ಸನಿಂದ ಗುತ್ತಿಗೆ ಆಧಾರದಲ್ಲಿ ಒಂದು ಸೀಪ್ಲೇನ್‌ ಅನ್ನು ಪಡೆದುಕೊಂಡಿದ್ದು, ಅದು ಭಾನುವಾರವೇ ಮಾಲ್ಡೀವ್‌್ಸನಿಂದ ಕೊಚ್ಚಿಗೆ ಬಂದಿಳಿದು ಅಲ್ಲಿಂದ ಅಹಮದಾಬಾದ್‌ ತಲುಪಿದೆ.

ಪ್ರತಿ ಸೀಟಿಗೆ .5000

19 ಸೀಟುಗಳನ್ನು ಹೊಂದಿರುವ ಈ ವಿಮಾನದಲ್ಲಿ 12 ಪ್ರಯಾಣಿಕರು ಸಂಚರಿಸಬಹುದಾಗಿದೆ. ಒಬ್ಬ ಪ್ರಯಾಣಿಕರಿಗೆ ಅಂದಾಜು 5000 ರು. ದರ ವಿಧಿಸುವ ಸಾಧ್ಯತೆ ಇದೆ. ಈ ಹೊಸ ವಿಮಾನ ಸಂಚಾರವು ಸಾಬರ್‌ಮತಿ ರಿವರ್‌ಫ್ರಂಟ್‌ ಮತ್ತು ಏಕತಾಪ್ರತಿಮೆ ಸ್ಥಳದಲ್ಲಿನ ಪ್ರವಾಸೋದ್ಯಮವನ್ನು ಇನ್ನಷ್ಟುಅಭಿವೃದ್ಧಿಗೊಳಿಸಲಿದೆ ಎಂಬ ವಿಶ್ವಾಸವನ್ನು ಸರ್ಕಾರ ಹೊಂದಿದೆ.

ಕೇರಳ ಆರಂಭಿಸಿತ್ತು, ಹಾರಲಿಲ್ಲ!

2013ರಲ್ಲಿ ಕೇರಳ ಸರ್ಕಾರ ದೇಶದ ಮೊದಲ ಸೀ ಪ್ಲೇನ್‌ಗೆ ಚಾಲನೆ ನೀಡಿತ್ತು. ಆದರೆ ಮೀನುಗಾರರು ಹಾಗೂ ಎಡಪಕ್ಷಗಳ ವಿರೋಧದ ಹಿನ್ನೆಲೆಯಲ್ಲಿ ಉದ್ಘಾಟನಾ ಹಾರಾಟ ನಡೆಸಿದ್ದು ಬಿಟ್ಟರೆ, ಪ್ರಯಾಣಿಕರಿಗೆ ಸೇವೆ ಸಿಗಲಿಲ್ಲ. ಗುಜರಾತ್‌ನಲ್ಲಿ ಪೂರ್ಣ ಪ್ರಮಾಣದ ಸೇವೆ ಆರಂಭಿಸಲಾಗುತ್ತಿದೆ. ಹೀಗಾಗಿ ಇದನ್ನು ಭಾರತ ಮುಖ್ಯ ಭೂಖಂಡದ ಮೊದಲ ಸೀ ಪ್ಲೇನ್‌ ಎನ್ನಲಾಗುತ್ತಿದೆ.