ಲಖನೌ [ಡಿ.27]: ಉತ್ತರಪ್ರದೇಶದಲ್ಲಿ ಇತ್ತೀಚೆಗೆ ನಡೆದ ಪೌರತ್ವ ವಿರೋಧಿ ಹಿಂಸಾಚಾರ ಪ್ರಕರಣ ಸಂಬಂಧ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ಇನ್ನೂ ನಾಲ್ವರನ್ನು ಮೇರಠ್‌ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಇದರೊಂದಿಗೆ 19 ಜನರನ್ನು ಬಲಿ ಪಡೆದ ಹಿಂಸಾಚಾರ ಪ್ರಕರಣದಲ್ಲಿ ಪಿಎಫ್‌ಐ ಮತ್ತು ಅದರ ರಾಜಕೀಯ ಮುಖವಾಣಿ ಎಸ್‌ಡಿಪಿಐ (ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ)ನ ಒಟ್ಟು 25 ಸದಸ್ಯರನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿದಂತಾಗಿದೆ. ಜೊತೆಗೆ, ಮಸೂದೆ ವಿರುದ್ಧ ರಾಜ್ಯದಲ್ಲಿ ಏಕಾಏಕಿ ರೂಪುಗೊಂಡ ಪ್ರತಿಭಟನೆ ಮತ್ತು ನಂತರ ನಡೆದ ಹಿಂಸಾಚಾರದಲ್ಲಿ ಪಿಎಫ್‌ಐನ ಕೈವಾಡದ ಬಗ್ಗೆ ಇನ್ನಷ್ಟುಸಾಕ್ಷ್ಯ ಸಿಕ್ಕಂತೆ ಆಗಿದೆ.

ಗುರುವಾರ ಬಂಧಿತರಾದವರನ್ನು ಎಸ್‌ಡಿಐಪಿನ ರಾಜ್ಯಾಧ್ಯಕ್ಷ ನೂರ್‌ ಹಸನ್‌, ಆತನ ಕಾರು ಚಾಲಕ ಅಬ್ದುಲ್‌ ಮೊಯಿದ್‌, ಅಜ್ಮಲ್‌ ಮತ್ತು ಜಾವೇದ್‌ ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದಷ್ಟೇ ಲಖನೌದಲ್ಲಿ ಪಿಎಫ್‌ಐನ ಅಧ್ಯಕ್ಷ ವಸೀಂ ಅಹಮದ್‌, ಖಜಾಂಚಿ ನದೀಂ ಅಲಿ ಮತ್ತು ವಿಭಾಗೀಯ ಅಧ್ಯಕ್ಷ ಅಶ್ಫಾಕ್‌ರನ್ನು ಬಂಧಿಸಲಾಗಿತ್ತು.

ಈ ಬಗ್ಗೆ ಮಾಹಿತಿ ನೀಡಿರುವ ಮೇರಠ್‌ನ ಎಸ್‌ಎಸ್‌ಪಿ ಅಜಯ್‌ ಸಾಹ್ನಿ, ಖಚಿತ ಮಾಹಿತಿ ಮೇರೆಗೆ ಎಸ್‌ಡಿಐಪಿನ ರಾಜ್ಯಾಧ್ಯಕ್ಷ ನೂರ್‌ ಹಸನ್‌ ಮತ್ತು ಅಬ್ದುಲ್‌ ಮೊಯಿದ್‌ರನ್ನು ನಗರದ ನೌಚಾಂದಿ ಪ್ರದೇಶದಿಂದ ಮತ್ತು ಅಜ್ಮಲ್‌ ಹಾಗೂ ಜಾವೇದ್‌ರನ್ನು ಲಿಸಾಡಿ ಗೇಟ್‌ ಪ್ರದೇಶದಲ್ಲಿ ಬಂಧಿಸಲಾಗಿದೆ. ಇದೇ ವೇಳೆ ನಗರದಲ್ಲಿ ಎಸ್‌ಡಿಪಿಐ ಕಚೇರಿ ಮೇಲೂ ದಾಳಿ ನಡೆಸಲಾಗಿದ್ದು, ಅಲ್ಲಿ ಪೌರತ್ವ ಕಾಯ್ದೆ ವಿರೋಧಿಸುವ ಬರಹಗಳು, ಬ್ಯಾನರ್‌ಗಳು, ಪ್ರಚೋದನಾಕಾರಿ ಪುಸ್ತಕಗಳು ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಬಂಧಿತ ನಾಲ್ವರ ವಿರುದ್ಧ ಗುಂಪುಗಳ ನಡುವೆ ದ್ವೇಷ ಹಬ್ಬಿಸಿದ, ಕಾನೂನು ಬಾಹಿರವಾಗಿ ಗುಂಪುಗೂಡಿದ್ದ, ಸರ್ಕಾರಿ ಅಧಿಕಾರಿಗಳ ಸೇವೆಗೆ ಅಡ್ಡಿಪಡಿಸಿದ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ.

ವಾರದಿಂದ ಪೋಷಕರ ಕಾಣದೆ ಪರಿತಪಿಸುತ್ತಿದ್ದಾಳೆ ಐರಾ...

ಕಳೆದ ವಾರ ಮೇರಠ್‌ನಲ್ಲಿ ನಡೆದ ಪೌರತ್ವ ವಿರೋಧಿ ಹಿಂಸಾಚಾರದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಉಳಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಇನ್ನೂ 17 ಜನ ಸಾವನ್ನಪ್ಪಿದ್ದರು.

ಯುಪಿ ಹಿಂಸಾಚಾರದಲ್ಲಿ ಕೇರಳ ಮೂಲದ ಸಂಘಟನೆಯ ಕೈವಾಡದ ಬಗ್ಗೆ ಕೆಲ ದಿನಗಳ ಹಿಂದೆ ಯುಪಿ ಉಪಮುಖ್ಯಮಂತ್ರಿ ದಿನೇಶ್‌ ಶರ್ಮಾ ಸುಳಿವು ನೀಡಿದ್ದರು. ಅದರ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಸಂಘಟನೆಯ ನಾಯಕರ ಮೇಲೆ ಕಣ್ಣಿಟ್ಟಿದ್ದ ರಾಜ್ಯ ಪೊಲೀಸರು, ಹಿಂಸೆಗೆ ಪ್ರಚೋದನೆ ನೀಡಿದ ಹಲವರನ್ನು ಒಬ್ಬರಾದ ಬಳಿಕ ಒಬ್ಬರಂತೆ ಬಂಧಿಸುತ್ತಿದ್ದಾರೆ.