ಅಮೃತಸರದಲ್ಲಿ ಭಯಾನಕ ಘಟನೆ: ಎನ್‌ಆರ್‌ಐಗೆ ಮನೆಯವರ ಮುಂದೆಯೇ ಗುಂಡಿಕ್ಕಿದ ದುಷ್ಕರ್ಮಿಗಳು
ಅಮೃತಸರದಲ್ಲಿ ಭಯಾನಕ ಘಟನೆಯೊಂದರಲ್ಲಿ, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮನೆಯವರ ಮುಂದೆಯೇ ಒಬ್ಬ ವ್ಯಕ್ತಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ವ್ಯಕ್ತಿ ತಿಂಗಳ ಹಿಂದಷ್ಟೇ ಅಮೆರಿಕಾದಿಂದ ಭಾರತಕ್ಕೆ ಬಂದಿದ್ದ ಎನ್‌ಆರ್‌ಐ ಎಂದು ತಿಳಿದು ಬಂದಿದೆ.
ಅಮೃತಸರ:ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಮನೆಯವರ ಮುಂದೆಯೇ ವ್ಯಕ್ತಿಯೊಬ್ಬರಿಗೆ ಗುಂಡಿಕ್ಕಿದಂತಹ ಆಘಾತಕಾರಿ ಘಟನೆ ಪಂಜಾಬ್‌ನ ಅಮೃತಸರದ ದಬುರ್ಜಿ ಗ್ರಾಮದಲ್ಲಿ ನಡೆದಿದ್ದು, ಅಲ್ಲಿನ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ದುಷ್ಕರ್ಮಿಗಳ ಗುಂಡೇಟು ತಾಗಿದ ವ್ಯಕ್ತಿ ಭಾರತ ಮೂಲದ ಅಮೆರಿಕಾ ಪ್ರಜೆಯಾಗಿದ್ದು, ತಿಂಗಳ ಹಿಂದಷ್ಟೇ ತಾಯ್ನೆಲಕ್ಕೆ ಆಗಮಿಸಿದ್ದರು. ಈ ಘಟನೆಯ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಬೈಕ್‌ನಲ್ಲಿ ಬಂದ ಟರ್ಬನ್ ತೊಟ್ಟ ವ್ಯಕ್ತಿಗಳಿಬ್ಬರು, ಅಮೆರಿಕಾ ಮೂಲದ ಅನಿವಾಸಿ ಭಾರತೀಯನ ಅಮೃತಸರದಲ್ಲಿರುವ ಮನೆಗೆ ಸಡನ್ ಆಗಿ ಆಗಮಿಸಿದ್ದು, ಆತನ ಮೇಲೆ ಮೂರು ಸುತ್ತು ಗುಂಡಿನ ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಹೀಗೆ ದುಷ್ಕರ್ಮಿಗಳ ಗುಂಡಿಕ್ಕಿದ ವ್ಯಕ್ತಿಯನ್ನು 43 ವರ್ಷದ ಸುಖ್‌ಚೈನ್ ಸಿಂಗ್ ಎಂದು ಗುರುತಿಸಲಾಗಿದೆ. ಘಟನೆ ನಡೆಯುವ ವೇಳೆ ಆತನ ತಾಯಿ ಹಾಗೂ ಮಗ ದುಷ್ಕರ್ಮಿಗಳ ಬಳಿ ಆತನನ್ನು ಬಿಟ್ಟು ಬಿಡುವಂತೆ ಅಳುತ್ತಾ ಕೇಳುವುದನ್ನು ಕಾಣಬಹುದು. ಆದರೂ ಕರುಣೆ ತೋರದ ದುಷ್ಕರ್ಮಿಗಳು ಆತನ ತಲೆ ಹಾಗೂ ಕತ್ತಿಗೆ ಗುಂಡಿಕ್ಕಿ ಸ್ಥಳದಿಂದ ಪರಾರಿಯಾಗಿದ್ದಾರೆ.
20 ವರ್ಷಗಳ ಬಳಿಕ ಜಪಾನ್ ಪುತ್ರ, ಪಂಜಾಬಿ ತಂದೆಯ ಮಿಲನ; ಅಪ್ಪನನ್ನ ಹುಡ್ಕೊಂಡು ಬಂದ ಮಗ
ಕೂಡಲೇ ಸುಖ್‌ಚೈನ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಕೂಡಲೇ ಆರೋಪಿಯನ್ನು ಬಂಧಿಸುವುದಾಗಿ ಪೊಲೀಸರು ಭರವಸೆ ನಿಡಿದ್ದಾರೆ. ಘಟನೆಯನ್ನು ಶಿರೋಮಣಿ ಅಕಾಲಿದಳ ಬದಾಲ್‌ನ ಅಧ್ಯಕ್ಷ ಸುಕ್ಬೀರ್ ಸಿಂಗ್ ಬಾದಲ್ ತೀವ್ರವಾಗಿ ಖಂಡಿಸಿದ್ದು, ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪಂಜಾಬ್‌ನ ಇಂದಿನ ಸ್ಥಿತಿಯನ್ನು ನೋಡುವುದಕ್ಕೆ ಬೇಸರವಾಗುತ್ತಿದೆ ಎಂದಿದ್ದಾರೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ಅವರು ದಬ್ರುಜಿಯಲ್ಲಿ ಇಂದು ಮುಂಜಾನೆ ಎನ್‌ಆರ್‌ಐ ಸೋದರ ಸುಖ್‌ಚೈನ್ ಸಿಂಗ್ ಅವರ ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಆತನ ತಾಯಿ ಹಾಗೂ ಏನೂ ಅರಿಯದ ಮುಗ್ಧ ಮಗು ದುಷ್ಕರ್ಮಿಗಳ ಬಳಿ ತಮ್ಮ ತಂದೆಯನ್ನು ಬಿಟ್ಟು ಬಿಡುವಂತೆ ಕೇಳಿಕೊಂಡರು ದುಷ್ಕರ್ಮಿಗಳು ಕರುಣೆ ತೋರಿಲ್ಲ, ಸಿಎಂ ಭಗ್ವಂತ್ ಮನ್ನಾ ಅವರೇ ನಿಮ್ಮ ಆಡಳಿತದಡಿಯಲ್ಲಿ ಪ್ರತಿದಿನವೂ ಒಂದಲ್ಲ ಒಂದು ಇಂತಹ ಘಟನೆಗಳು ನಡೆಯುತ್ತಿವೆ. ತಮ್ಮದೇ ಮನೆಯಲ್ಲಿ ಪಂಜಾಬಿಗಳಿಗೆ ಸುರಕ್ಷತೆ ಇಲ್ಲವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೇ ಘಟನೆಯ ಬಗ್ಗೆ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡುವಂತೆ ಅವರು ಆಗ್ರಹಿಸಿದ್ದಾರೆ.
ಅಮೃತ್‌ಪಾಲ್ ಸಿಂಗ್‌ನ ಜೈಲಲ್ಲಿಟ್ಟು ವಾಕ್ ಸ್ವಾತಂತ್ರ್ಯ ಹರಣ: ಖಲಿಸ್ತಾನಿ ಉಗ್ರನ ಪರ ಕಾಂಗ್ರೆಸ್ಸಿಗನ ಬ್ಯಾಟಿಂಗ್
ಘಟನೆಗೆ ಸಂಬಂಧಿಸಿದಂತೆ ಅಡಿಷನಲ್ ಡೆಪ್ಯುಟಿ ಕಮೀಷನರ್ ಆಫ್ ಪೊಲೀಸ್ ಹರ್ಪಾಲ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಮುಂಜಾನೆ 7.15ರ ಸುಮಾರಿಗೆ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣುವಂತೆ ಘಟನೆ ನಡೆಯುವ ವೇಳೆ ಗುಂಡೇಟು ತಗುಲಿಸಿಕೊಂಡ ವ್ಯಕ್ತಿ ಹಲ್ಲುಜ್ಜುತ್ತಿರುವುದು ಕಾಣಿಸುತ್ತಿದೆ. ಈ ವೇಳೆ ಗೇಟ್ ತೆರೆದು ಬಂದು ಒಳನುಗ್ಗಿದ್ದ ಇಬ್ಬರು ದುಷ್ಕರ್ಮಿಗಳು, ಸುಖ್‌ಚೈನ್ ಅವರ ಬಳಿ ಅಲ್ಲಿ ಪಾರ್ಕ್ ಮಾಡಿದ್ದ ಮರ್ಸಿಡಿಸ್ ಕಾರಿಗೆ ರಿಜಿಸ್ಟೇಷನ್ ಸರ್ಟಿಫಿಕೇಟ್ ಕೊಟ್ಟಿದ್ದು ಯಾರು ಎಂದು ಪ್ರಶ್ನೆ ಮಾಡುತ್ತಾರೆ. ಈ ವೇಳೆ ಇದನ್ನೆಲ್ಲಾ ಕೇಳುವುದಕ್ಕೆ ನೀವು ಯಾರು ಎಂದು ಸುಖ್ ಚೈನ್ ಅವರು ಕೇಳಿದ್ದು, ಇದರಿಂದ ಕುಪಿತಗೊಂಡ ದುಷ್ಕರ್ಮಿಗಳು ಕೂಡಲೇ ಒಳಗಿದ್ದ ಪಿಸ್ತೂಲ್ ತೆಗೆದು ಆತನ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಆತನನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ಅವರು ಅಲ್ಲಿಗೆ ಬಂದಿದ್ದರು. ಆದರೆ ಅವರಲ್ಲಿ ಒಂದು ಪಿಸ್ತೂಲ್ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಹರ್ಪಾಲ್ ಸಿಂಗ್ ಹೇಳಿದ್ದಾರೆ.