ಲಿಂಗಭೇದ ಆರೋಪ, ಲೋಗೋ ಬದಲಿಸಲು ಸ್ಕಾಚ್ ಬ್ರೈಟ್ ನಿರ್ಧಾರ!
ಅಮೆರಿಕದಲ್ಲಿ ಕಪ್ಪು ವರ್ಣೀಯನ ಮೇಲಿನ ದೌರ್ಜನ್ಯ ಖಂಡಿಸಿ ನಡೆದ ಪ್ರತಿಭಟನೆ ಬಳಿಕ ಬಹುತೇಕ ಎಲ್ಲಾ ದೇಶದಲ್ಲಿ ಈ ಕುರಿತು ಜಾಗೃತಿ ಮೂಡುತ್ತಿದೆ. ಜನಾಂಗೀಯ ನಿಂದನೆ, ವರ್ಣಭೇದ, ಲಿಂಗಭೇದ ಸೇರಿದಂತೆ ಯಾವುದೇ ಅಸಮಾನತೆಗೆ ಆಸ್ಪದ ನೀಡಲು ಯಾರೂ ಅವಕಾಶ ನೀಡುತ್ತಿಲ್ಲ. ಇದೇ ಆರೋಪದಡಿ ಭಾರತದಲ್ಲಿ ಫೇರ್ ಅಂಡ್ ಲವ್ಲಿ ಕಂಪನಿ ಬಳಿಕ ಇದೀಗ ಸ್ಕಾಚ್ ಬ್ರೈಟ್ ಕಂಪನಿ ಹೆಸರು ಬದಲಾಯಿಸುತ್ತಿದೆ.
ನವದೆಹಲಿ(ಜು.17): ವರ್ಣಭೇದ ಆರೋಪದಡಿ ಭಾರತದ ಹಿಂದೂಸ್ತಾನ್ ಲಿವರ್ ಕಂಪನಿ ತನ್ನ ಫೇರ್ ಅಂಡ್ ಲವ್ಲಿ ಹೆಸರನ್ನು ಬದಲಿಸಿದೆ. ಇದೀಗ ಫೇರ್ ಅಂಡ್ ಲವ್ಲಿ ತನ್ನ ಹೆಸರನ್ನು ಗ್ಲೋ ಅಂಡ್ ಲವ್ಲಿ ಎಂದು ಬದಲಾಯಿಸಿಕೊಂಡಿದೆ. ಇದೀಗ ಭಾರತದಲ್ಲಿ ಮನೆ ಮಾತಾಗಿರುವ ಸ್ಕಾಚ್ ಬ್ರೈಟ್ ಕಂಪನಿ ತನ್ನ ಲೋಗೋ ಬದಲಾಯಿಸಲು ಮುಂದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಆಂದೋಲನ ಆರಂಭವಾದ ಬೆನ್ನಲ್ಲೇ ಕಂಪನಿ ಲೋಗೋ ಬದಲಾಯಿಸುವುದಾಗಿ ಸ್ಪಷ್ಟಪಡಿಸಿದೆ.
ಫೇರ್ ಆ್ಯಂಡ್ ಲವ್ಲಿ ಇನ್ನು ‘ಗ್ಲೋ ಆ್ಯಂಡ್ ಲವ್ಲಿ’
ಅಮೆರಿಕ ಮೂಲದ 3M ಕಂಪನಿ ಭಾರತದಲ್ಲಿ ಸ್ಕಾಟ್ ಬ್ರೈಟ್ ಹೆಸರಿನಡಿ, ಶೌಚಾಲಯ ಶುಚಿ ಮಾಡುವ ಬ್ರಶ್, ಪಾತ್ರೆ ಶುಚಿಗೊಳಿಸುವ ಬ್ರಶ್, ಮನೆಯ ನೆಲ ಕ್ಲೀನ್ ಮಾಡುವ ಸೇರಿದಂತೆ ಹಲವು ಶುಚಿತ್ವಕ್ಕೆ ಬಳಸುವ ಬ್ರಶ್ ತಯಾರಿಸಿ ಮಾರಾಟ ಮಾಡುತ್ತಿದೆ. ಆದರೆ ಸ್ಕಾಚ್ ಬ್ರೈಟ್ ಕಂಪನಿಯ ಲೋಗೋವಿನಲ್ಲಿ ಮಹಿಳೆಯ ಚಿತ್ರವಿದೆ. ಇಷ್ಟೇ ಅಲ್ಲ ಈ ಮಹಿಳೆ ಹಣೆಯಲ್ಲಿ ತಿಲಕವಿಟ್ಟಿರುವ ಈ ಲೋಗೋ ಬದಲಿಸಬೇಕು ಅನ್ನೋ ಒತ್ತಾಯ ಕೇಳಿ ಬಂದಿತ್ತು.
ಶ್ರೀನಿವಾಸನ್ ಅನ್ನೋ ವ್ಯಕ್ತಿ ಈ ಕುರಿತು ಕಂಪನಿಯ ಲಿಂಗಭೇದ ನೀತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.ಲೋಗೋ ಮಹಿಳೆಯನ್ನು ಗುರಿಯಾಗಿಸಿದೆ. ಶುಚಿತ್ವದ ಕೆಲಸ ಮಹಿಳೆಯರಿಗೆ ಮೀಸಲು ಅನ್ನೋ ಆರ್ಥದಲ್ಲಿದೆ. ಹೀಗಾಗಿ ಲೋಗೋ ಬದಲಿಸಬೇಕು ಅನ್ನೋ ಒತ್ತಾಯ ಕೇಳಿ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಆಂದೋಲ ಆರಂಭವಾಗುತ್ತಿದ್ದಂತೆ, ಇತ್ತ ಸ್ಕಾಚ್ ಬ್ರೈಟ್ ಕಂಪನಿ ಸ್ಪಷ್ಟನೆ ನೀಡಿದೆ.
ಒಂದೆರಡು ತಿಂಗಳಲ್ಲಿ ಕಂಪನಿ ಹೊಸ ಲೋಗೋ ಬಿಡುಗಡೆ ಮಾಡಲಿದೆ. ಒಂದು ಮನೆಯ ಶುಚಿತ್ವದಲ್ಲಿ ಎಲ್ಲರಿಗೂ ಪಾಲಿದೆ. ಇದು ಕೇವಲ ಮಹಿಳೆಯರಿಗೆ ಮಾತ್ರ ಮೀಸಲಾಗಿರುವ ಕೆಲಸವಲ್ಲ. ಹೊಸ ಲೋಗೋ ಎಲ್ಲಾ ಸಮಸ್ಯೆಗಳಿಗೆ ಉತ್ತರ ನೀಡಲಿದೆ ಎಂದು ಕಂಪನಿ ಹೇಳಿದೆ.