ಬರ್ಲಿನ್‌(ಮಾ.20): ವಿಶ್ವದಲ್ಲೇ ಮೊದಲ ಕೊರೋನಾ ಲಸಿಕೆ ಎಂಬ ಹಿರಿಮೆ ಹೊಂದಿರುವ ಬಯೋಎನ್‌ಟೆಕ್‌ ಸಂಸ್ಥೆ, ತನ್ನ ಮುಂದಿನ ಗುರಿ ಕ್ಯಾನ್ಸರ್‌ಗೆ ಪರಿಣಾಮಕಾರಿ ಔಷಧ ಕಂಡುಹಿಡಿಯುವುದು ಎಂದು ಹೇಳಿದೆ. ಜರ್ಮನಿಯ ಬಯೋಎನ್‌ಟೆಕ್‌ ಎಂಬ ಸಣ್ಣ ಸಂಸ್ಥೆ ಅಮೆರಿಕದ ಮಾಡೆÜರ್ನಾ ಸಂಸ್ಥೆ ಜೊತೆಗೂಡಿ ಮಾಡೆರ್ನಾ ಲಸಿಕೆ ಬಿಡುಗಡೆ ಮಾಡಿತ್ತು. ಬಯೋ ಎನ್‌ಟೆಕ್‌ ಕಂಪನಿಯ ಸ್ಥಾಪಕಿ ಮತ್ತು ವಿಜ್ಞಾನಿಯೂ ಆಗಿರುವ ಒಝ್ಲೆಮ್‌ ಟುರೆಸಿ ತಮ್ಮ ಸಂಸ್ಥೆಯ ಮುಂದಿನ ಗುರಿ ಕ್ಯಾನ್ಸರ್‌ಗೆ ಲಸಿಕೆ ಕಂಡು ಹಿಡಿಯುವುದಾಗಿದೆ ಎನ್ನುವ ಮೂಲಕ ಕೋಟ್ಯಂತರ ಕ್ಯಾನ್ಸರ್‌ ರೋಗಿಗಳಲ್ಲಿ, ಪೂರ್ಣ ಗುಣಮುಖರಾಗುವ ಹೊಸ ಭರವಸೆ ಮೂಡಿಸಿದ್ದಾರೆ.

ಮೂಲತಃ ಬಯೋಎನ್‌ಟೆಕ್‌ ಕಾನ್ಸರ್‌ಗೆ ಲಸಿಕೆಯನ್ನು ಅಭಿವೃದ್ಧಿ ಪಡೆಸುವ ಉದ್ದೇಶದಿಂದಲೇ ಸ್ಥಾಪಿತವಾದ ಸಂಸ್ಥೆಯಾಗಿತ್ತು. ಆದರೆ ದಿಢೀರನೆ ಕೊರೋನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಾನು ಅಭಿವೃದ್ಧಿಪಡಿಸಿದ್ದ ಹೊಸ ಲಸಿಕಾ ವಿಧಾನವನ್ನೇ ಬಳಸಿಕೊಂಡು ಕೊರೋನಾ ಲಸಿಕೆ ಅಭಿವೃದ್ಧಿಪಡಿಸಿ ಯಶಸ್ವಿಯಾಗಿತ್ತು. ಹೀಗಾಗಿ ಈ ಯಶಸ್ಸನ್ನೇ ಕ್ಯಾನ್ಸರ್‌ ವಿಷಯದಲ್ಲೂ ಸಾಧಿಸುವ ವಿಶ್ವಾಸವನ್ನು ಒಝ್ಲೆಮ್‌ ವ್ಯಕ್ತಪಡಿಸಿದ್ದಾರೆ.

ಏನಿದು ತಂತ್ರಜ್ಞಾನ?

ಬಯೋಎನ್‌ಟೆಕ್‌, ಮೆಸೆಂಜರ್‌ ಆರ್‌ಎನ್‌ಎ ಕಣಗಳನ್ನು ಬಳಸಿಕೊಂಡು ಕೊರೋನಾಕ್ಕೆ ಲಸಿಕೆ ಅಭಿವೃದ್ಧಿಪಡಿಸಿದೆ. ಮೆಸೆಂಜರ್‌ ಆರ್‌ಎನ್‌ಎ ಅಥವಾ ಎಮ್‌ ಆರ್‌ಎನ್‌ಎಗಳು ನಿರ್ದಿಷ್ಟವೈರಸ್‌ ಮೇಲೆ ದಾಳಿ ಮಾಡುವ ಪ್ರೋಟ್ರೀನ್‌ಗಳನ್ನು ಉತ್ಪತ್ತಿ ಮಾಡುವಂತೆ ದೇಹಕ್ಕೆ ಸಂದೇಶ ನೀಡುವ ಕೆಲಸವನ್ನು ಮಾಡುತ್ತವೆ. ಹಾಗೆಯೇ ಕ್ಯಾನ್ಸರ್‌ ಗಡ್ಡೆಗಳ ವಿರುದ್ಧ ಹೋರಾಡುವ ರೋಗ ನಿರೋಧಕ ವ್ಯವಸ್ಥೆ ಉತ್ಪಾದನೆಗೂ ಇದೇ ತತ್ವವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.