ಅಪ್ರಾಪ್ತ ವಯಸ್ಕರು ಸಾಮಾಜಿಕ ಮಾಧ್ಯಮ ಬಳಕೆ ಮಾಡದಂತೆ ನಿಯಂತ್ರಿಸಲು ನಿರ್ದೇಶನ| ಅಪ್ರಾಪ್ತರಿಗೆ ಸಾಮಾಜಿಕ ಜಾಲ ಕಡಿವಾಣ: ಕೇಂದ್ರಕ್ಕೆ ಸುಪ್ರೀಂ ನೋಟಿಸ್‌

ನವದೆಹಲಿ(ಅ.14): ಅಪ್ರಾಪ್ತ ವಯಸ್ಕರು ಸಾಮಾಜಿಕ ಮಾಧ್ಯಮ ಬಳಕೆ ಮಾಡದಂತೆ ನಿಯಂತ್ರಿಸಲು ನಿರ್ದೇಶಿಸಬೇಕೆಂದು ಕೋರಿ ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರದ ಅಭಿಪ್ರಾಯ ಕೋರಿದೆ.

ಅಲ್ಲದೆ, ಸಾಮಾಜಿಕ ಮಾಧ್ಯಮಗಳ ಪ್ರೊಫೈಲ್‌ಗಳ ದೃಢತೆ ಹಾಗೂ ತಿರುಚುವಿಕೆಯನ್ನು ಅಪರಾಧೀಕರಣಗೊಳಿಸಬೇಕು ಹಾಗೂ ಅಶ್ಲೀಲ ವಿಡಿಯೋಗಳ ನಿರ್ಬಂಧಕ್ಕೆ ಕಾನೂನುಗಳನ್ನು ರೂಪಿಸಬೇಕು ಅಥವಾ ಈಗಾಗಲೇ ಇರುವ ಕಾನೂನುಗಳನ್ನು ಕಠಿಣಗೊಳಿಸುವಂತೆಯೂ ಕೇಂದ್ರಕ್ಕೆ ಸೂಚಿಸಬೇಕು ಎಂದು ಈ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಮಂಗಳವಾರ ಈ ಕುರಿತಾದ ಅರ್ಜಿ ವಿಚಾರಣೆಗೆ ಒಪ್ಪಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಎ ಬೋಬ್ಡೆ ನೇತೃತ್ವದ ಪೀಠ, ಕೇಂದ್ರ ಸರ್ಕಾರ ಹಾಗೂ ಇತರರಿಗೆ ನೋಟಿಸ್‌ ರವಾನಿಸಿದೆ. ಅಮೆರಿಕದಂಥ ರಾಷ್ಟ್ರಗಳಲ್ಲಿ ಮಕ್ಕಳ ಮೇಲೆ ಸಾಮಾಜಿಕ ಮಾಧ್ಯಮಗಳಿಂದ ದುಷ್ಪರಿಣಾಮಗಳ ತಡೆಗೆ ಕಠಿಣ ಕಾನೂನುಗಳಿವೆ. ಆದರೆ, ಭಾರತದಲ್ಲಿ ಅಂಥ ಯಾವುದೇ ಕಾನೂನುಗಳಿಲ್ಲ. ಹೀಗಾಗಿ, ಸಾಮಾಜಿಕ ಮಾಧ್ಯಮಗಳ ದುರ್ಬಳಕೆಯಾಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಇಬ್ಬರು ಕಾನೂನು ವಿದ್ಯಾರ್ಥಿಗಳು ಕೋರ್ಟ್‌ ಮೆಟ್ಟಿಲೇರಿದ್ದರು.