ನವದೆಹಲಿ[ಡಿ.18]: ಯಾವುದೇ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಾಗ ಆಯಾ ರಾಜ್ಯದ ಜನಸಂಖ್ಯೆಯನ್ನು ಪರಿಗಣಿಸಬೇಕು. ಕಾಶ್ಮೀರ ಸೇರಿ 8 ರಾಜ್ಯಗಳಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಹಿಂದುಗಳಿಗೂ ಅಲ್ಪಸಂಖ್ಯಾತ ಸ್ಥಾನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ಧರ್ಮವನ್ನು ರಾಷ್ಟ್ರೀಯ ಮಟ್ಟದಲ್ಲೇ ಪರಿಗಣಿಸಬೇಕು. ಒಂದು ವೇಳೆ ಕಾಶ್ಮೀರದಲ್ಲಿ ಮುಸಲ್ಮಾನರ ಸಂಖ್ಯೆ ಅಧಿಕವಾಗಿದ್ದು, ದೇಶದ ಇತರೆಡೆ ಅವರು ಅಲ್ಪಸಂಖ್ಯಾತರಾಗಿದ್ದರೆ ಏನು ತೊಂದರೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಪ್ರಶ್ನಿಸಿದೆ.

ಮುಸ್ಲಿಂ, ಕ್ರೈಸ್ತ, ಸಿಖ್‌, ಬೌದ್ಧ ಹಾಗೂ ಪಾರ್ಸಿಗಳಿಗೆ ಅಲ್ಪಸಂಖ್ಯಾತ ಸ್ಥಾನ ನೀಡಿ 26 ವರ್ಷಗಳ ಹಿಂದೆ ಹೊರಡಿಸಿದ್ದ ಅಧಿಸೂಚನೆಯ ಸಿಂಧುತ್ವ ಪ್ರಶ್ನಿಸಿ ಬಿಜೆಪಿ ನಾಯಕ, ವಕೀಲ ಅಶ್ವಿನಿಕುಮಾರ್‌ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ಭಾಷೆಗಳು ರಾಜ್ಯಕ್ಕೆ ಸೀಮಿತವಾಗಿವೆ. ಆದರೆ ಧರ್ಮಗಳಿಗೆ ರಾಜ್ಯಗಳ ಗಡಿಯ ಹಂಗಿಲ್ಲ. ಹೀಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಅಲ್ಪಸಂಖ್ಯಾತ ಸ್ಥಾನವನ್ನು ನೋಡಬೇಕು. ಲಕ್ಷದ್ವೀಪದಲ್ಲಿ ಮುಸ್ಲಿಮರೂ ಹಿಂದು ಕಾನೂನು ಪಾಲಿಸುತ್ತಾರೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಹಾಗೂ ಸೂರ್ಯಕಾಂತ್‌ ಅವರಿದ್ದ ಪೀಠ ಹೇಳಿದೆ.

8 ರಾಜ್ಯಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದಾರೆ. ಅವರಿಗೆ ಅಲ್ಪಸಂಖ್ಯಾತರ ಸೌಲಭ್ಯಗಳು ದಕ್ಕುತ್ತಿಲ್ಲ. ಆದ ಕಾರಣ ರಾಜ್ಯಗಳ ಜನಸಂಖ್ಯೆಯನ್ನು ಆಧರಿಸಿ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಮಾರ್ಗಸೂಚಿಗಳನ್ನು ರೂಪಿಸಬೇಕು. ರಾಷ್ಟ್ರಮಟ್ಟದ ದಾಖಲೆಗಳ ಪ್ರಕಾರ ಹಿಂದುಗಳು ಬಹುಸಂಖ್ಯಾತರಾಗಿದ್ದರೂ, ಹಲವಾರು ಈಶಾನ್ಯ ರಾಜ್ಯಗಳು ಹಾಗೂ ಜಮ್ಮು-ಕಾಶ್ಮೀರದಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ ಎಂದು ವಾದಿಸಿದ್ದರು.