* ರಕ್ಷಿತಾರಣ್ಯಗಳ ಸುತ್ತಲಿನ 1 ಕಿ.ಮೀ. ಬಫರ್‌ ವಲಯ* ಇಲ್ಲಿ ಗಣಿಗಾರಿಕೆ ನಡೆಯುವಂತಿಲ್ಲ* ಕಾರ್ಖಾನೆ, ಕಟ್ಟಡ ತಲೆಯೆತ್ತುವಂತಿಲ್ಲ* ಸುಪ್ರೀಂ ಕೋರ್ಚ್‌ ಮಹತ್ವದ ಆದೇಶ* ಈ ಚಟುವಟಿಕೆಗಳ ಬಗ್ಗೆ 3 ತಿಂಗಳಲ್ಲಿ ವರದಿಗೆ ಸೂಚನೆ

ನವದೆಹಲಿ(ಜೂ.04): ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಜೀವಿ ರಕ್ಷಿತಾರಣ್ಯಗಳ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ‘ಬಫರ್‌ ವಲಯ’ ಎಂದು ಪರಿಗಣಿಸಬೇಕು ಎಂದು ಆದೇಶಿಸಿರುವ ಸರ್ವೋಚ್ಚ ನ್ಯಾಯಾಲಯ, ಈ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಯಬಾರದು ಹಾಗೂ ಕಾರ್ಖಾನೆಗಳು, ಕಾಯಂ ಕಟ್ಟಡಗಳು ತಲೆಯೆತ್ತಕೂಡದು ಎಂಬ ಮಹತ್ವದ ಸೂಚನೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅರಣ್ಯ ರಕ್ಷಣೆ ಕುರಿತಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಎಲ್‌. ನಾಗೇಶ್ವರರಾವ್‌ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ಹೊರಡಿಸಿದೆ.

‘ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಜೀವಿ ರಕ್ಷಿತಾರಣ್ಯಗಳ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ಇಎಸ್‌ಝಡ್‌) ಎಂದು ಪರಿಗಣಿಸಬೇಕು. ಇಲ್ಲಿ ಗಣಿಗಾರಿಕೆಗೆ ಅನುಮತಿಸಕೂಡದು. ಕಾರ್ಖಾನೆ ಹಾಗೂ ಕಾಯಂ ಕಟ್ಟಡಗಳ ನಿರ್ಮಾಣ ನಡೆಯಬಾರದು. ಈ ವ್ಯಾಪ್ತಿಯಲ್ಲಿ ಈಗಾಗಲೇ ಕಟ್ಟಡಗಳು ತಲೆಯೆತ್ತಿದ್ದರೆ ಅಂಥ ಕಟ್ಟಡಗಳ ಪಟ್ಟಿಯನ್ನು ಎಲ್ಲ ರಾಜ್ಯಗಳ ಅರಣ್ಯ ಸಂರಕ್ಷಣಾಧಿಕಾರಿಗಳು ಸಿದ್ಧಪಡಿಸಬೇಕು ಹಾಗೂ ಇನ್ನು 3 ತಿಂಗಳ ಒಳಗೆ ನಮಗೆ ವರದಿ ಸಲ್ಲಿಸಬೇಕು’ ಎಂದು ನಿರ್ದೇಶಿಸಿತು.

‘ಸರ್ಕಾರದ ಸಹಾಯ ಪಡೆದು ಉಪಗ್ರಹ ಚಿತ್ರಗಳನ್ನು ಆಧರಿಸಿ ಅಥವಾ ಡ್ರೋನ್‌ ಮೂಲಕ ಚಿತ್ರೀಕರಣ ನಡೆಸಿ ಈ ಸಮೀಕ್ಷೆಯನ್ನು ಅರಣ್ಯ ಸಂರಕ್ಷಕರು ನಡೆಸಬಹುದು’ ಎಂದು ಕೋರ್ಚ್‌ ಸಲಹೆ ನೀಡಿತು.