ನವದೆಹಲಿ/ಬೀಜಿಂಗ್‌(ಜೂ.25): ಗಲ್ವಾನ್‌ ಕಣಿವೆಯಲ್ಲಿ ಉದ್ಭವವಾಗಿರುವ ತ್ವೇಷಮಯ ಪರಿಸ್ಥಿತಿಯನ್ನು ತಿಳಿಗೊಳಿಸಲು ಒಂದೆಡೆ ಶಾಂತಿ ಮಂತ್ರ ಜಪಿಸಲು ಆರಂಭಿಸಿರುವ ಚೀನಾ, ಮತ್ತೊಂದೆಡೆ ಸದ್ದಿಲ್ಲದೆ ಸೇನಾ ಜಮಾವಣೆ ಪ್ರಾರಂಭಿಸುವ ಮೂಲಕ ತನ್ನ ಕಪಟ ಬುದ್ಧಿ ಪ್ರದರ್ಶಿಸಿದೆ.

‘ನಾವಿಬ್ಬರೂ ಬಹುಮುಖ್ಯ ನೆರೆರಾಷ್ಟ್ರಗಳು. ಗಡಿಯಲ್ಲಿ ಶಾಂತಿ ಕಾಪಾಡುವುದರಿಂದ ಎರಡೂ ದೇಶಗಳಿಗೆ ಪ್ರಯೋಜನವಿದೆ. ಇದಕ್ಕೆ ಎರಡೂ ದೇಶಗಳ ಜಂಟಿ ಪ್ರಯತ್ನ ಅಗತ್ಯ’ ಎಂದು ಬುಧವಾರ ಚೀನಾದ ವಿದೇಶಾಂಗ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯಗಳು ಪ್ರತ್ಯೇಕ ಹೇಳಿಕೆ ಬಿಡುಗಡೆ ಮಾಡಿವೆ.

ಚೀನಾಗೆ ಭಾರೀ ಮುಖಭಂಗ, ಭಾರತಕ್ಕೆ ರಷ್ಯಾದ S-400!

ಇದೇ ವೇಳೆ, ಬುಧವಾರ ಎರಡೂ ದೇಶಗಳ ವಿದೇಶಾಂಗ ಇಲಾಖೆಯ ನಡುವೆ ಆನ್‌ಲೈನ್‌ನಲ್ಲಿ ರಾಜತಾಂತ್ರಿಕ ಮಾತುಕತೆ ಕೂಡ ನಡೆದಿದ್ದು, ಈ ವೇಳೆ ಗಡಿಯಲ್ಲಿ ಶಾಂತಿ ಕಾಪಾಡಲು ಗಲ್ವಾನ್‌ ಕಣಿವೆಯಿಂದ ಮೊದಲೇ ನಿರ್ಧರಿಸಿದ ರೀತಿಯಲ್ಲಿ ಉಭಯ ದೇಶಗಳು ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಪುನರುಚ್ಚಾರ ಮಾಡಿವೆ.

ಇದೆಲ್ಲದರ ಮಧ್ಯೆ, ಗಡಿಯಲ್ಲಿ ಭಾರತದ ಜತೆಗೆ ಘರ್ಷಣೆ ಇರುವ ಪ್ರದೇಶಗಳಾದ ಪಾಂಗೋಂಗ್‌ ತ್ಸೋ, ಗಲ್ವಾನ್‌ ಕಣಿವೆ ಸೇರಿದಂತೆ ವಿವಿಧೆಡೆ ಭಾರಿ ಸಂಖ್ಯೆಯ ಯೋಧರನ್ನು ನಿಯೋಜನೆ ಮಾಡಿದೆ. ಈ ಸಂಖ್ಯೆ 10 ಸಾವಿರಕ್ಕೂ ಅಧಿಕವಿದೆ. ಶಸ್ತ್ರ ಸಜ್ಜಿತ ರೆಮಿಮೆಂಟ್‌ಗಳು, ಭಾರೀ ಗಾತ್ರದ ಫಿರಂಗಿಗಳು ಮತ್ತು ರಕ್ಷಣಾ ಸಾಮಗ್ರಿಗಳನ್ನು ಗಡಿಯಲ್ಲಿ ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.