ಚೆನ್ನೈ(ನ.19): ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪರ ಅಗ್ರಹಾರ ಜೈಲಿನಲ್ಲಿರುವ ತಮಿಳುನಾಡಿನ ಮಾಜಿ ಸಿಎಂ ದಿ. ಜೆ.ಜಯಲಲಿತಾ ಅವರ ಆಪ್ತೆ ಹಾಗೂ ಎಐಡಿಎಂಕೆಯ ಮಾಜಿ ನಾಯಕಿ ವಿ.ಕೆ ಶಶಿಕಲಾ ತಮಗೆ ವಿಧಿಸಿದ್ದ 10 ಕೋಟಿ ರು. ದಂಡವನ್ನು ಪಾವತಿಸಿದ್ದಾರೆ. ಇದರಿಂದಾಗಿ 2017ರ ಫೆ.15ರಿಂದ ಬೆಂಗಳೂರು ಜೈಲು ಪಾಲಾಗಿರುವ ಶಶಿಕಲಾ ಬಿಡುಗಡೆ ಸಾಧ್ಯತೆ ದಟ್ಟವಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಶಶಿಕಲಾ ಪರ ವಕೀಲ ಎನ್‌ ರಾಜಾ ಸೆಂತೂರ್‌ ಪಾಂಡಿಯನ್‌, ‘ಶಶಿಕಲಾಗೆ ವಿಧಿಸಿದ್ದ 10.10 ಕೋಟಿ ರು. ದಂಡದ ಮೊತ್ತವನ್ನು ಡಿಡಿ ಮೂಲಕ ಬೆಂಗಳೂರಿನ 34ನೇ ಸಿಟಿ ಸಿವಿಲ್‌ ಕೋರ್ಟ್‌ಗೆ ಪಾವತಿಸಲಾಗಿದ್ದು, ಈ ಮಾಹಿತಿಯನ್ನು ನ್ಯಾಯಾಲಯ ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳ ಗಮನಕ್ಕೆ ತರಲಿದೆ. ಆ ನಂತರ 2021ರ ಜ.27ರ ಒಳಗಾಗಿಯೇ ಶಶಿಕಲಾ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಇನ್ನು ಇದೇ ಪ್ರಕರಣದಲ್ಲಿ ಶಶಿಕಲಾರ ಸಂಬಂಧಿಗಳಾದ ವಿ.ಎನ್‌ ಸುಧಾಕರನ್‌ ಮತ್ತು ಜೆ. ಇಳವರಸಿ ಅವರಿಗೂ ತಲಾ 10 ಕೋಟಿ ರು. ದಂಡ ವಿಧಿಸಲಾಗಿದ್ದು, ದಂಡ ಪಾವತಿಯ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ಈ ನಡುವೆ ಶಶಿಕಲಾ ಬಿಡುಗಡೆಯಿಂದ ಪಕ್ಷ ಅಥವಾ ತಮ್ಮ ಸರ್ಕಾರದ ಮೇಲೆ ಯಾವುದೇ ಪರಿಣಾಮವಾಗದು ಎಂದು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಹೇಳಿದ್ದಾರೆ.