ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಶಿವಸೇನೆ ನಾಯಕ ಸಂಜಯ್ ರಾವುತ್‌ಗೆ ಮುಂಬೈ ಕೋರ್ಟ್ 102 ದಿನಗಳ ಬಳಿಕ ಜಾಮೀನು ಮಂಜೂರು ಮಾಡಿದೆ. ಪಿಎಂಎಲ್‌ಎ ಪ್ರಕರಣದಲ್ಲಿ ಅವರನ್ನು ಜುಲೈ 31 ರಂದು ಬಂಧನ ಮಾಡಲಾಗಿತ್ತು.
ಮುಂಬೈ (ನ.9): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಂಬೈನ ಪಿಎಂಎಲ್‌ಎ ನ್ಯಾಯಾಲಯದಿಂದ 102 ದಿನಗಳ ನಂತರ ಶಿವಸೇನಾ ನಾಯಕ ಸಂಜಯ್ ರಾವತ್ ಜಾಮೀನು ಪಡೆದರು. 9 ಗಂಟೆಗಳ ವಿಚಾರಣೆಯ ನಂತರ ಇಡಿ ಜುಲೈ 31 ರಂದು ಅವರನ್ನು ಬಂಧನ ಮಾಡಿತ್ತು. ಇದಕ್ಕೂ ಮೊದಲು ಜೂನ್ 28 ರಂದು ರಾವತ್ ಅವರನ್ನು ಇಡಿ, ವಿಚಾರಣೆ ಮಾಡಿದ್ದರು. ಸಂಜಯ್ ರಾವತ್ ಅವರು 1,039 ಕೋಟಿ ರೂ ಪತ್ರಾ ಚಾವ್ಲ್ ಭೂ ಹಗರಣದ ಆರೋಪಿಯಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ನಿಯೋಜಿತವಾಗಿರುವ ವಿಶೇಷ ನ್ಯಾಯಾಧೀಶ ಎಂ ಜಿ ದೇಶಪಾಂಡೆ, ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ರಾವುತ್‌ನ ಜಾಮೀನು ಅರ್ಜಿಯನ್ನು ಮಂಜೂರು ಮಾಡಿದರು. ಉಪನಗರ ಗೋರೆಗಾಂವ್‌ನಲ್ಲಿನ ಪತ್ರಾ ಚಾಲ್ (ಸಾಲು ವಠಾರ) ಪುನರಾಭಿವೃದ್ಧಿಗೆ ಸಂಬಂಧಿಸಿದಂತೆ ಹಣಕಾಸು ಅಕ್ರಮಗಳಲ್ಲಿ ಅವರ ಪಾತ್ರದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಈ ವರ್ಷದ ಜುಲೈನಲ್ಲಿ ರಾಜ್ಯಸಭಾ ಸದಸ್ಯ ರಾವುತ್ ಅವರನ್ನು ಬಂಧನ ಮಾಡಿತ್ತು.
ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ. ತನ್ನ ವಿರುದ್ಧದ ಪ್ರಕರಣವು "ಅಧಿಕಾರದ ದುರುಪಯೋಗ" ಮತ್ತು "ರಾಜಕೀಯ ಸೇಡು" ಕ್ರಮಕ್ಕೆ ಅತ್ಯಂತ ಸೂಕ್ತ ಉದಾಹರಣೆಯಾಗಿದೆ ಎಂದು ರಾವುತ್ ತನ್ನ ಜಾಮೀನು ಅರ್ಜಿಯಲ್ಲಿ ಹೇಳಿಕೊಂಡಿದ್ದರು. ಪತ್ರಾ ಚಾಲ್ ಪುನರಾಭಿವೃದ್ಧಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಹಣದ ಜಾಡು ತಪ್ಪಿಸಲು ಬೆನ್ನ ಹಿಂದಿನ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಇಡಿ ರಾವುತ್ ಅವರ ಮನವಿಯನ್ನು ವಿರೋಧಿಸಿದೆ. ಇಡಿಯ ತನಿಖೆಯು ಪತ್ರಾ ಚಾಲ್‌ನ ಪುನರಾಭಿವೃದ್ಧಿಯಲ್ಲಿನ ಹಣಕಾಸಿನ ಅಕ್ರಮಗಳು ಮತ್ತು ಅವರ ಪತ್ನಿ ಮತ್ತು ಸಹಚರರನ್ನು ಒಳಗೊಂಡಿರುವ ಸಂಬಂಧಿತ ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದೆ.
ಸಂಜಯ್ ರಾವುತ್‌ಗೆ ರಿಲೀಫ್ ನೀಡದ ಕೋರ್ಟ್, ಇನ್ನೂ ಮೂರು ದಿನ ED ಕಸ್ಟಡಿಗೆ!
ಪತ್ರಾ ಚಾಲ್‌ನ ಮರು-ಅಭಿವೃದ್ಧಿ ಮತ್ತು ಅವರ ಪತ್ನಿಯನ್ನು ಸಹವರ್ತಿ ಎಂದು ಹೆಸರಿಸಿದ ವಹಿವಾಟಿನ ವಿಚಾರಣೆಗಾಗಿ ಅವರನ್ನು ಕರೆಸಲಾಗಿತ್ತು. ಸಾಕಷ್ಟು ವಿಚಾರಣೆಯ ಬಳಿಕ ಜುಲೈ 31 ರಂದು ಅವರ ಬಂಧನ ಮಾಡಲಾಗಿತ್ತು. ಎಂಟು ದಿನಗಳ ಇಡಿ ಕಸ್ಟಡಿ ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆಡಳಿತ ಪಕ್ಷ ಎದುರಿಸುತ್ತಿರುವ ವಿರೋಧವನ್ನು ಹತ್ತಿಕ್ಕಲು ತಮ್ಮ ವಿರುದ್ಧ ಇಡಿ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ಸೆಪ್ಟೆಂಬರ್ 7 ರಂದು ಜಾಮೀನು ಅರ್ಜಿ ಸಲ್ಲಿಸಿದ್ದರು.
ಭೂ ಹಗರಣ ಕೇಸ್: ಶಿವಸೇನಾ ನಾಯಕ ಸಂಜಯ್ ರಾವುತ್ ವಶಕ್ಕೆ ಪಡೆದ ಇಡಿ ಅಧಿಕಾರಿಗಳು
ಅಪರಾಧದ ಆದಾಯ ಎಂದು ತೋರಿಸಿರುವ ₹ 1.06 ಕೋಟಿ ಮೊತ್ತವನ್ನು ಲೆಕ್ಕ ಹಾಕಲಾಗಿದೆ ಮತ್ತು ಅಗತ್ಯ ದಾಖಲೆ ನೀಡಲಾಗಿದೆ ಎಂದು ವಾದ ಮಾಡಿದ್ದರು. ಮತ್ತೊಂದೆಡೆ, ಪ್ರಸ್ತುತ ಪ್ರಕರಣದಲ್ಲಿ ಅಪರಾಧವು ಸಾರ್ವಜನಿಕ ನಿಧಿಯ ವೆಚ್ಚದಲ್ಲಿ ರಾವುತ್ ಅವರ ಖಾಸಗಿ ಲಾಭಕ್ಕಾಗಿ ಎಂದು ವಾದಿಸಿದೆ. ರಾವತ್ ತನ್ನ ಪ್ರಾಕ್ಸಿ ಮತ್ತು ಆಪಾದಿತ ಸಹಾಯಕ ಪ್ರವೀಣ್ ರಾವುತ್ ಮೂಲಕ ಅಪರಾಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಕೇಂದ್ರೀಯ ಸಂಸ್ಥೆ ವಾದಿಸಿದೆ.
