ಇಂದೋರ್ ದೇವಸ್ಥಾನಗಳಲ್ಲಿ ಸ್ಟ್ಯಾಲಿನ್ ಚಿತ್ರ ಹೊಂದಿರುವ ಕಾಲು ಒರೆಸುವ ಮ್ಯಾಟ್, ವಿನೂತನ ಪ್ರತಿಭಟನೆ!
ಸನಾತನ ಧರ್ಮ ನಿರ್ಮೂಲನೆ ಮಾಡುವ ಟೀಕೆ ಮಾಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟ್ಯಾಲಿನ್ ವಿರುದ್ಧ ಇಂದೋರ್‌ನ ದೇವಸ್ಥಾನಗಳು ವಿನೂತನ ರೀತಿಯ ಪ್ರತಿಭಟನೆ ಮಾಡಿದೆ. ದೇವಸ್ಥಾನದಲ್ಲಿ ಉದಯನಿಧಿ ಸ್ಟ್ಯಾಲಿನ್ ಚಿತ್ರವನ್ನು ಹೊಂದಿರುವ ಕಾಲು ಒರೆಸುವ ಮ್ಯಾಟ್‌ಅನ್ನು ಬಳಸಲಾಗುತ್ತಿದೆ.

ಇಂದೋರ್ (ಸೆ.14): ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್ ಅವರ ಪುತ್ರ, ಕ್ರೀಡಾ ಸಚಿವ ಹಾಗೂ ನಟ ಉದಯನಿಧಿ ಸ್ಟ್ಯಾಲಿನ್ ಅವರ ಸನಾತನ ಧರ್ಮದ ಟೀಕೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಧ್ಯಪ್ರದೇಶದ ಬಿನಾದಲ್ಲಿ ಚುನಾವಣಾ ಸಮಾವೇಶದ ವೇಳೆ ಮತ್ತೊಮ್ಮೆ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಸನಾತನ ಧರ್ಮವನ್ನೂ ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿದ್ದ ಉದಯನಿಧಿ ಸ್ಟ್ಯಾಲಿನ್ ವಿರುದ್ಧ ಇಂದೋರ್‌ನ ದೇವಸ್ಥಾನಗಳಲ್ಲಿ ವಿನೂತನ ರೀತಿಯ ಪ್ರತಿಭಟನೆ ಮಾಡಲಾಗುತ್ತಿದೆ. ಬುಧವಾರ ಇಂದೋರ್‌ನಲ್ಲಿ ದೊಡ್ಡ ಪ್ರತಿಭಟನೆಯನ್ನೂ ಮಾಡಲಾಗಿದೆ. ಇದೇ ವೇಳೆ ಹಿಂದೂ ಜಾಗರಣ್ ಮಂಚ್, ಇಂದೋರ್‌ನ ದೇವಸ್ಥಾನಗಳಿಗೆ ಉದಯನಿಧಿ ಸ್ಟ್ಯಾಲಿನ್‌ನ ಚಿತ್ರ ಹೊಂದಿರುವ ಡೋರ್‌ಮ್ಯಾಟ್ ಅಥವಾ ಕಾಲು ಒರೆಸುವ ಮ್ಯಾಟ್‌ಅನ್ನು ಹಂಚಿದೆ. ದೇವಸ್ಥಾನಕ್ಕೆ ಹೋಗುವಾಗ ಮತ್ತು ಹೊರಬರುವಾಗ ಜನರು ಈ ಡೋರ್‌ಮ್ಯಾಟ್‌ನಲ್ಲಿ ಕಾಲು ಒರೆಸಿ ಸ್ಟ್ಯಾಲಿನ್ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿನೂತನ ಪ್ರತಿಭಟನೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೂರಲ್ ಆಗಿವೆ. ಸ್ಟ್ಯಾಲಿನ್ ಚಿತ್ರವನ್ನು ಹೊಂದಿರುವ ಡೋರ್‌ಮ್ಯಾಟ್‌ಅನ್ನು ದೇವಾಲಯದ ಪ್ರವೇಶದಲ್ಲಿ ಇರಿಸಲಾಗಿರುವುದನ್ನು ವೀಡಿಯೊ ತೋರಿಸುತ್ತದೆ ಮತ್ತು ಹಿಂದೂ ಜಾಗರಣ ಮಂಚ್ ಕಾರ್ಯಕರ್ತರು ಅದನ್ನು ಕಾಲು ಒರೆಸುವ ಮ್ಯಾಟ್‌ನಂತೆ ಬಳಸಿದ್ದಾರೆ.
ಸ್ಟ್ಯಾಲಿನ್ ಹೇಳಿಕೆಯಿಂದ ನಮಗೆ ಆಘಾತವಾಗಿದೆ: ಉದಯನಿಧಿ ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿದ ಹಿಂದೂ ಜಾಗರಣ ಮಂಚ್ ಇಂದೋರ್ ಜಿಲ್ಲಾ ಸಂಚಾಲಕ ಕಣ್ಣು ಮಿಶ್ರಾ, ಸನಾತನ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ನಮ್ಮ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಹೀಗಾಗಿ ಅವರ ಚಿತ್ರ ಹೊಂದಿರುವ ಡೋರ್‌ಮ್ಯಾಟ್‌ಗಳನ್ನು ದೇವಸ್ಥಾನದ ಬಾಗಿಲಿನಲ್ಲಿ ಇಟ್ಟು ಪ್ರತಿಭಟನೆ ನಡೆಸಿದ್ದೇವೆ. ಉದಯನಿಧಿ ಸ್ಟಾಲಿನ್ ಹೇಳಿಕೆಯಿಂದ ಆರಂಭವಾದ ವಿವಾದ ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಂಡಿದೆ. ಅದರಲ್ಲೂ ಗುರುವಾರ ಸ್ವತಃ ಪ್ರಧಾನಮಂತ್ರಿ ಸನಾತನ ಧರ್ಮದ ವಿರೋಧಿಗಳ ವಿರುದ್ಧ ಒಗ್ಗಟ್ಟಾಗಬೇಕು ಎಂದು ಕರೆ ನೀಡುವ ಮೂಲಕ ಈ ವಿವಾದ ಇನ್ನಷ್ಟು ಚರ್ಚೆಯಾಗುವ ಸಾಧ್ಯತೆ ಇದೆ. ಈಗಾಗಲೇ ದೆಹಲಿ-ಉತ್ತರ ಪ್ರದೇಶ ಮತ್ತು ಮುಂಬೈನಲ್ಲಿ ಉದಯನಿಧಿ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ.
'ಸನಾತನ ಧರ್ಮವನ್ನೇ ಅವರು ತುಂಡು ಮಾಡಲು ಬಯಸಿದ್ದಾರೆ..' ಇಂಡಿ ಒಕ್ಕೂಟದ ವಿರುದ್ಧ ಮೋದಿ ವಾಗ್ದಾಳಿ
ಕೆಲವು ದಿನಗಳ ಹಿಂದೆ, ಸನಾತನ ಧರ್ಮ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಎಂದು ಉದಯನಿಧಿ ಸ್ಟಾಲಿನ್ ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತು. ಸನಾತನ ಧರ್ಮವನ್ನು ಮಲೇರಿಯಾ, ಕರೋನಾ ಮತ್ತು ಡೆಂಗ್ಯೂಗಳೊಂದಿಗೆ ಹೋಲಿಸಿದ ಅವರು, ನಾವು ಅವುಗಳನ್ನು ವಿರೋಧಿಸುವುದಿಲ್ಲ ಈ ರೋಗಗಳನ್ನು ನಿರ್ಮೂಲನೆ ಮಾಡುವಂತೆಯೇ ಸನಾತನವನ್ನೂ ತೊಡೆದುಹಾಕಬೇಕು ಎಂದು ಹೇಳಿದ್ದರು.
'ಹಿಂದೂ ಸಿದ್ಧಾಂತವನ್ನೇ ಸಂಘಿ ಎನ್ನುವುದಾದರೆ, ನಾನು ಸಂಘಿ' ಎಂದ ಖ್ಯಾತ ನಿರೂಪಕಿ ರಶ್ಮಿ ಗೌತಮ್!