ಚೆನ್ನೈ(ಏ.08): 234 ವಿಧಾನಸಭಾ ಕ್ಷೇತ್ರವಿರುವ ತಮಿಳುನಾಡಿನ ಚುನಾವಣೆ ಏಪ್ರಿಲ್ 6 ರಂದು ನಡೆದಿದೆ. ಈ ಚುನಾವಣೆಯಲ್ಲಿ ಈಶ ಫೌಂಡೇಷನ್‌ನ ಸಂಸ್ಥಾಪಕ ಸದ್ಗುರು ಕೂಡಾ ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದ ಬಳಿಕ ಜನ ಸಾಮಾನ್ಯರಲ್ಲಿ ಮತ ಚಲಾಯಿಸುವಂತೆ ಮನವಿಯನ್ನೂ ಮಾಡಿದ್ದರು.

ಚುನಾವಣೆಯನ್ನು ಯಾರೂ ಕೂಡಾ ರಜಾ ದಿನವನ್ನಾಗಿ ಪರಿಗಣಿಸಬಾರದು. ಜವಾಬ್ದಾರಿ ಅರಿತು ಎಲ್ಲರೂ ಮತದಾನ ಮಾಡಬೇಕೆಂದು ಮನವಿ ಮಾಡಿದ್ದರು. ಇದೇ ವೇಳೆ ಅವರು ತಮ್ಮ ಮತದ ಬಗ್ಗೆಯೂ ಮಾತನಾಡುತ್ತಾ 'ನಾವು ಯಾವತ್ತೂ ಧರ್ಮ, ಜಾತಿ, ಪಂಥ ಹಾಗೂ ಪಕ್ಷವನ್ನು ನೋಡಿ ಮತ ಹಾಕಬಾರದು. ಬದಲಾಗಿ ಯಾರು ರಾಜ್ಯದ ಜನರ ಹಿತಕ್ಕಾಗಿ ಕೆಲಸ ಮಾಡುತ್ತಾರೆಂದು ನೋಡಬೇಕು ಹಾಗೂ ಅವರಿಗೇ ಮತ ಹಾಕಬೇಕು' ಎಂದಿದ್ದರು.

ಮಂದಿರಗಳನ್ನು ಸ್ವತಂತ್ರಗೊಳಿಸುವ ಅಭಿಯಾನಕ್ಕೆ 3.5 ಕೋಟಿ ಮಂದಿ ಸಮರ್ಥನೆ

ಇದೇ ವೇಳೆ ಸದ್ಗುರು #FreeTNTemples ಅಭಿಯಾನದ ಬಗ್ಗೆಯೂ ಮಾತನಾಡಿದ್ದಾರೆ. ಈ ಅಭಿಯಾನವನ್ನು ಕಳೆದ ತಿಂಗಳು, ಮಾರ್ಚ್‌ನಲ್ಲಷ್ಟೇ ಆರಂಭಿಸಲಾಗಿದೆ. ಈ ಅಭಿಯಾನಕ್ಕೆ ಬರೋಬ್ಬರಿ 3.5 ಕೋಟಿ ಮಂದಿಯ ಬೆಂಬಲ ಸಿಕ್ಕಿದೆ. ಇನ್ನು ತಮಿಳುನಾಡಿನ ಬಹುತೇಕ ಎಲ್ಲಾ ಪಕ್ಷಗಳೂ ಈ ವಿಚಾರವನ್ನು ಒಂದು ಹಂತದವರೆಗೆ ಸಂಬೋಧಿಸಿದ್ದಾರೆ ಎಂಬುವುದು ಉಲ್ಲೇಖನೀಯ. ಅಲಲ್ಲದೇ ಎರಡು ಪ್ರಮುಖ ಪಕ್ಷಗಳು ಈ ನಿಟ್ಟಿನಲ್ಲಿ ಸಕ್ರಿಯವಾಗಿ ಹೆಜ್ಜೆ ಇರಿಸಿವೆ. 

ಈ ಬಗ್ಗೆ ಮಾತನಾಡಿರುವ ಸದ್ಗುರು ಯಾವ ಪಕ್ಷ ಅಧಿಕಾರಕ್ಕೇರುತ್ತದೆ ಎಂಬುವುದು ಯಾವುದೇ ವ್ಯತ್ಯಾಸವಾಗುವುದಿಲ್ಲ. ಆದರೆ ಮುಂದಿನ ಐದು ವರ್ಷ ಸರ್ಕಾರದ ಜೊತೆ ಸೇರಿ ಮಂದಿರಗಳನ್ನು ರಾಜ್ಯದ ಹಿಡಿತದಿಂದ ಮುಕ್ತಗೊಳಿಸಲು ಹೋರಾಡುವುದಾಗಿ ತಿಳಿಸಿದ್ದಾರೆ.