ನವದೆಹಲಿ (ನ. 21):  ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇಗುಲದ ಆಡಳಿತ ವ್ಯವಹಾರಕ್ಕಾಗಿ ಪ್ರತ್ಯೇಕ ಕಾಯ್ದೆ ರೂಪಿಸುವಂತೆ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ. ಆದರೆ ಈ ಕಾಯ್ದೆ ರಚನೆ ವೇಳೆ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶ ಕುರಿತ ವಿಚಾರಕ್ಕೆ ತಲೆ ಹಾಕದಂತೆಯೂ ತಾಕೀತು ಮಾಡಿದೆ.

ಎಲ್ಲ ಮಹಿಳೆಯರಿಗೂ ಅಯ್ಯಪ್ಪ ದೇಗುಲಕ್ಕೆ ಪ್ರವೇಶ ನೀಡಬೇಕೇ? ಬೇಡವೇ ಎಂಬ ವಿಚಾರವನ್ನು ಸರ್ವೋಚ್ಚ ನ್ಯಾಯಾಲಯದ ಸಪ್ತ ಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿದೆ. ಹೀಗಾಗಿ ಆ ವಿಚಾರದಿಂದ ಸದ್ಯಕ್ಕೆ ಅಂತರ ಕಾಯ್ದುಕೊಳ್ಳಬೇಕು. ಜನವರಿ ಮೂರನೇ ವಾರದೊಳಗೆ ಶಾಸನವನ್ನು ತನಗೆ ಸಲ್ಲಿಸಬೇಕು ಎಂದು ನ್ಯಾ. ಎನ್‌.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ಸೂಚಿಸಿದೆ.

ದೇಶಾದ್ಯಂತ NRC, ಅಕ್ರಮ ವಲಸಿಗರು ಗಡೀಪಾರು: ಈ ದಾಖಲೆ ರೆಡಿ ಇಟ್ಟುಕೊಳ್ಳಿ

ವಿಚಾರಣೆ ವೇಳೆ ವಾದ ಮಂಡಿಸಿದ ಕೇರಳ ಸರ್ಕಾರದ ಪರ ವಕೀಲ ಜೈದೀಪ್‌ ಗುಪ್ತಾ, ಸದ್ಯ ತಿರುವಾಂಕೂರು ದೇವಸ್ವಂ ಮಂಡಳಿ ಆಡಳಿತಕ್ಕೊಳಪಟ್ಟಿರುವ ದೇಗುಲ ಹಾಗೂ ಅವುಗಳ ಆಡಳಿತ ಮಂಡಳಿಗಳ ಕುರಿತಾಗಿ ತಿದ್ದುಪಡಿಯೊಂದನ್ನು ರೂಪಿಸಲಾಗಿದೆ. ದೇಗುಲ ಸಲಹಾ ಸಮಿತಿಯ ಒಟ್ಟು ಹುದ್ದೆಗಳಲ್ಲಿ ಮೂರನೇ ಒಂದರಷ್ಟನ್ನು ಮಹಿಳೆಯರಿಗೆ ಕೊಡಬೇಕು ಎಂಬ ಪ್ರಸ್ತಾವವಿದೆ ಎಂದು ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ನ್ಯಾ. ರಮಣ, ಮಹಿಳಾ ಪ್ರವೇಶ ಕುರಿತ ವಿಚಾರವನ್ನು ಸಪ್ತ ಸದಸ್ಯ ಪೀಠ ಪರಿಶೀಲಿಸುತ್ತಿದೆ. ಹೀಗಾಗಿ ಸಲಹಾ ಸಮಿತಿಯಲ್ಲಿ ಮಹಿಳೆಯರು ಇರಲು ಹೇಗೆ ಸಾಧ್ಯ? ಮಹಿಳೆಯರು ಸಮಿತಿಯಲ್ಲಿದ್ದರೆ, ದೇಗುಲದ ಆವರಣ ಪ್ರವೇಶಿಸಬೇಕಾಗುತ್ತದೆ ಎಂದು ಹೇಳಿದರು. ಇದಕ್ಕೆ ಸ್ಪಷ್ಟನೆ ನೀಡಿದ ಜೈದೀಪ್‌ ಗುಪ್ತಾ, 50 ವರ್ಷ ಮೇಲ್ಪಟ್ಟಮಹಿಳೆಯರಿಗಷ್ಟೇ ಸಮಿತಿಯಲ್ಲಿ ಸ್ಥಾನ ನೀಡಲಾಗುತ್ತದೆ ಎಂದು ಹೇಳಿದರು.

ಆಗ ಮತ್ತೊಬ್ಬ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ಮಧ್ಯಪ್ರವೇಶಿಸಿ, ಸದ್ಯದ ಮಟ್ಟಿಗೆ ಯಾವ ಮಹಿಳೆ ಬೇಕಾದರೂ ದೇಗುಲ ಪ್ರವೇಶಿಸಬಹುದು ಅಲ್ಲವೇ? ಮಹಿಳೆಯರ ಪ್ರವೇಶಕ್ಕೆ ಅನುಮತಿ ಕಲ್ಪಿಸಿರುವ 2018ರ ತೀರ್ಪು ಇನ್ನೂ ಸಕ್ರಿಯವಾಗಿದೆ ಎಂದು ಹೇಳಿದರು. ಆದರೆ ಇದಕ್ಕೆ ವಕೀಲರಾಗಲೀ, ತ್ರಿಸದಸ್ಯ ಪೀಠದ ಮತ್ತಿಬ್ಬರು ನ್ಯಾಯಮೂರ್ತಿಗಳಾಗಲೀ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.