ನವದೆಹಲಿ: ಕೊರೋನಾ ವಿರುದ್ಧದ ವಿಶ್ವದ ಮೊದಲ ಲಸಿಕೆ ಎಂಬ ಹಿರಿಮೆ ಹೊಂದಿರುವ ರಷ್ಯಾದ ಸ್ಪುಟ್ನಿಕ್‌-5 ಲಸಿಕೆಯನ್ನು ಭಾರತದಲ್ಲಿ ಮಾನವರ ಮೇಲೆ ಪ್ರಯೋಗಿಸಲು ‘ಡಾ

ರೆಡ್ಡೀಸ್‌’ ಕಂಪನಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರೊಂದಿಗೆ ಭಾರತದಲ್ಲಿ ನಾಲ್ಕನೇ ಕೊರೋನಾ ಲಸಿಕೆಯ ಮಾನವ ಪ್ರಯೋಗಕ್ಕೆ ಅನುಮತಿ ನೀಡಿದಂತಾಗಿದೆ.

"

ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಜಿಸಿಐ)ವು, ರೆಡ್ಡೀಸ್‌ಗೆ 2 ಮತ್ತು 3ನೇ ಹಂತದ ಪ್ರಯೋಗಕ್ಕೆ ಅನುಮತಿ ನೀಡಿದೆ. ರೆಡ್ಡೀಸ್‌ ಕಂಪನಿಯು, ಲಸಿಕೆಯನ್ನು ನೇರವಾಗಿ ಮೂರನೇ ಹಂತದಲ್ಲಿ 1400 ಜನರ ಮೇಲೆ ಪ್ರಯೋಗಕ್ಕೆ ಒಳಪಡಿಸಲು ಮುಂದಾಗಿತ್ತಾದರೂ, ಡಿಜಿಸಿಐನ ತಜ್ಞರ ಸಮಿತಿಯು ಈಗಾಗಲೇ ವಿದೇಶಗಳಲ್ಲಿ ನಡೆದಿರುವ ಮೊದಲನೇ ಹಂತದ ಪರೀಕ್ಷೆಯ ಪೂರ್ಣ ಫಲಿತಾಂಶವನ್ನು ಪರಿಶೀಲಿಸಿದ ಬಳಿಕವಷ್ಟೇ ಮೂರನೇ ಹಂತದ ಪ್ರಯೋಗಕ್ಕೆ ಅನುಮತಿ ನೀಡಲು ನಿರ್ಧರಿಸಿತು.

ಅದರಂತೆ ಇದೀಗ ಮೊದಲಿಗೆ ದೇಶದ ವಿವಿಧ ಆಸ್ಪತ್ರೆಗಳಲ್ಲಿ 100 ಜನರ ಮೇಲೆ 2ನೇ ಹಂತದ ಪರೀಕ್ಷೆ ನಡೆಸಲಾಗುವುದು. ಅಷ್ಟರಲ್ಲಿ ಮೊದಲ ಪರೀಕ್ಷೆಯ ವರದಿ ಸಲ್ಲಿಕೆಯಾದಲ್ಲಿ ಮೂರನೇ ಹಂತದಲ್ಲಿ 1400 ಜನರ ಮೇಲೆ ಪರೀಕ್ಷೆಗೆ ಅನುಮತಿ ನೀಡಲಾಗುವುದು.

ವಿಶ್ವ ನಂ.1:

ರಷ್ಯಾದ ಮೂಲದ ಗಮಲೇಯ ನ್ಯಾಷನಲ್‌ ರಿಸಚ್‌ರ್‍ ಇನ್ಸಿಟಿಟ್ಯೂಟ್‌ ಆಫ್‌ ಎಪಿಡೆಮೋಲಜಿ ಆ್ಯಂಡ್‌ ಮೈಕ್ರೋಬಯೋಲಜಿ ಕಂಪನಿಯು ಸಿದ್ಧಪಡಿಸಿದ್ದ ಸ್ಪುಟ್ನಿಕ್‌-5 ಲಸಿಕೆಗೆ ಅಲ್ಲಿನ ಸರ್ಕಾರ ಆ.11ರಂದು ಅನುಮೋದನೆ ನೀಡಿತ್ತು. ಮೂರನೇ ಹಂತದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಯೋಗಕ್ಕೆ ಒಳಪಡುವ ಮುನ್ನವೇ ಲಸಿಕೆಯನ್ನು ಬಿಡುಗಡೆ ಮಾಡಿದ್ದರ ಬಗ್ಗೆ ಸಾಕಷ್ಟುಟೀಕೆಗಳು ಕೇಳಿಬಂದಿದ್ದವು.

ನಂತರದ ದಿನಗಳಲ್ಲಿ ಭಾರತದಲ್ಲಿ ಇದರ ವಿತರಣೆ ಮತ್ತು ಉತ್ಪಾದನೆಯ ಗುತ್ತಿಗೆಯನ್ನು ರೆಡ್ಡೀಸ್‌ ಕಂಪನಿ ಪಡೆದಿತ್ತು. ಈ ಪ್ರಕಾರ ಒಂದು ವೇಳೆ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಿನ ದಿನಗಳಲ್ಲಿ ಭಾರತ ಸರ್ಕಾರ ಅನುಮತಿ ನೀಡಿದರೆ, ರೆಡ್ಡೀಸ್‌ಗೆ ರಷ್ಯಾ 10 ಕೋಟಿ ಲಸಿಕೆಗಳನ್ನು ರಷ್ಯಾ ಕಂಪನಿ ನೀಡಲಿದೆ. ರಷ್ಯಾದಲ್ಲಿ ಸ್ಪುಟ್ನಿಕ್‌-5ನ 3ನೇ ಹಂತದ ಪ್ರಯೋಗ ಈಗ 40 ಸಾವಿರ ಜನರ ಮೇಲೆ ನಡೆದಿದೆ.

3ಕ್ಕೆ ಈಗಾಗಲೇ ಅನುಮತಿ: ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿ- ಆಸ್ಟ್ರಾಜೆನಿಕಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್‌ವ್ಯಾಕ್ಸಿನ್‌, ಝೈಡಸ್‌- ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ಝೈಕೋವ್‌-ಡಿ ಮತ್ತು ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ ಲಸಿಕೆಗಳು ಈಗಾಗಲೇ ಭಾರತದಲ್ಲಿ ಮಾನವ ಪ್ರಯೋಗದ ವಿವಿಧ ಹಂತದಲ್ಲಿವೆ.

ದೇಶದಲ್ಲೀಗ ನಾಲ್ಕು ಲಸಿಕೆ ಪ್ರಯೋಗದಲ್ಲಿದೆ. ಅವುಗಳ ವಿವರ ಇಂತಿದೆ.

1. ಆಸ್ಟ್ರಾಜೆನಿಕಾ ಕೋವಿಶೀಲ್ಡ್‌ (ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿ ತಯಾರಿಸಿದ್ದು)

2. ಕ್ಯಾಡಿಲಾ ಝೈಕೋವ್‌-ಡಿ (ಭಾರತದ ಝೈಡಸ್‌ ಅಭಿವೃದ್ಧಿಪಡಿಸಿದ್ದು)

3. ಕೋವ್ಯಾಕ್ಸಿನ್‌ (ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಸಿದ್ಧಪಡಿಸಿದ್ದು)

4. ಸ್ಪುಟ್ನಿಕ್‌-5 (ರಷ್ಯಾನಿರ್ಮಿತ ಲಸಿಕೆ. ಇನ್ನಷ್ಟೇ ಪ್ರಯೋಗ ಆಗಬೇಕಿದೆ)