ನವದೆಹಲಿ(ಅ.29): ಆದಾಯ ತೆರಿಗೆ ಇಲಾಖೆ ದೇಶದ 42 ಸ್ಥಳಗಳಲ್ಲಿ ಹವಾಲಾ ಆಪರೇಟರ್‌ಗಳು ಹಾಗೂ ನಕಲಿ ಬಿಲ್‌ ಸೃಷ್ಟಿಕರ್ತರ ಮೇಲೆ ಭಾರೀ ದಾಳಿ ನಡೆಸಿದ್ದು, 62 ಕೋಟಿ ರು. ನಗದು ವಶಪಡಿಸಿಕೊಂಡಿದೆ. ಅಪನಗದೀಕರಣ ಬಳಿಕ ರಾಷ್ಟ್ರ ರಾಜಧಾನಿ ವಲಯದಲ್ಲಿ ನಡೆದ ಅತಿದೊಡ್ಡ ಕಾರ್ಯಾಚರಣೆಗಳಲ್ಲಿ ಇದೂ ಒಂದು ಹೇಳಲಾಗಿದೆ.

ವಶಪಡಿಸಿಕೊಳ್ಳಲಾದ ಹಣಕ್ಕೆ ಯಾವುದೇ ದಾಖಲೆ ಇರಲಿಲ್ಲ. ಹವಾಲಾ ಆಪರೇಟರ್‌ ಸಂಜಯ ಜೈನ್‌ಗೆ ಸೇರಿದ ಆಸ್ತಿಪಾಸ್ತಿಗಳಲ್ಲಿ ಇಡಲಾಗಿದ್ದ ಹಣ ಸೇರಿ ವಿವಿಧ ಭಾಗಗಳಲ್ಲಿ ಇಷ್ಟೊಂದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ದಿಲ್ಲಿ, ರಾಷ್ಟ್ರ ರಾಜಧಾನಿ ವಲಯ, ಹರ್ಯಾಣ, ಪಂಜಾಬ್‌, ಉತ್ತರಾಖಂಡ ಹಾಗೂ ಗೋವಾದ 42 ಸ್ಥಳಗಳಲ್ಲಿ ಸೋಮವಾರವೇ ದಾಳಿ ನಡೆದಿದೆ. ಸುಮಾರು 500 ಕೋಟಿ ರು. ಹವಾಲಾ ಜಾಲ ಇದಾಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ದಾಳಿ ವೇಳೆ ತೆರಿಗೆ ಅಧಿಕಾರಿಗಳನ್ನೇ ಚಕಿತಗೊಳಿಸುವ ಸಂಗತಿಗಳು ನಡೆದಿವೆ. ಕಟ್ಟಿಗೆಯ ಅಲ್ಮೇರಾಗಳು ಹಾಗೂ ಪೀಠೋಪಕರಣಗಳಲ್ಲಿ 2000 ರು. ಹಾಗೂ 500 ರು. ನೋಟುಗಳನ್ನು ಅಡಗಿಸಿ ಇಟ್ಟಿದ್ದುದು ಕಂಡುಬಂದಿದೆ.

ಮೊದಲು ದಾಳಿಯ ವೇಳೆ 2.37 ಕೋಟಿ ರು. ಹಣ, 2.89 ಕೋಟಿ ರು. ಮೌಲ್ಯದ ಚಿನ್ನಾಭರಣ ಹಾಗೂ 17 ಬ್ಯಾಂಕ್‌ ಲಾಕರ್‌ಗಳು ಪತ್ತೆಯಾಗಿದ್ದವು. ಇವುಗಳನ್ನು ಶೋಧಿಸುತ್ತ ಮುಂದೆ ಸಾಗಿದಾಗ ಹವಾಲಾ ಜಾಲದ ಎಂಟ್ರಿ ಆಪರೇಟರ್‌ಗಳು, ಹಣದ ಸಂದಾಯಗಾರರು, ಫಲಾನುಭವಿಗಳು, ಕಂಪನಿಗಳ ಮಾಹಿತಿ ಲಭಿಸಿದವು. ಈವರೆಗೆ ಸುಮಾರು 500 ಕೋಟಿ ರು. ಮೌಲ್ಯದ ಹವಾಲಾ ಎಂಟ್ರಿಗಳು ಪತೆಯಾಗಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆ ಹೇಳಿದೆ.

ಲಭ್ಯ ದಾಖಲೆಗಳಲ್ಲಿ ಹಲವಾರು ಸುಳ್ಳು ಎಂಟ್ರಿಗಳು ಹಾಗೂ ಕಂಪನಿಗಳ ಹೆಸರು ಲಭಿಸಿವೆ. ಇವೇ ಸುಳ್ಳು ದಾಖಲೆಗಳನ್ನು ಇಟ್ಟುಕೊಂಡು ಹವಾಲಾ ಆಪರೇಟರ್‌ಗಳು ಅಕ್ರಮ ಹಣದ ವಹಿವಾಟು ನಡೆಸುತ್ತಿದ್ದರು. ನಕಲಿ ಬಿಲ್‌ಗಳನ್ನು ಸೃಷ್ಟಿಸಲಾಗುತ್ತಿತ್ತು ಹಾಗೂ ಯಾವುದೇ ಖಾತರಿ ಇಲ್ಲದೇ ಸಾಲ ನೀಡಲಾಗುತ್ತಿತ್ತು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಹೇಳಿದೆ.

ಫಲಾನುಭವಿಗಳು ಮಹಾನಗರಗಳ ರಿಯಲ್‌ ಎಸ್ಟೇಟ್‌ನಲ್ಲಿ ಹಾಗೂ ನಿಶ್ಚಿತ ಠೇವಣಿಗಳಲ್ಲಿ ಕೋಟ್ಯಂತರ ರು. ಹಣ ಹೂಡಿಕೆ ಮಾಡುತ್ತಿದ್ದರು ಎಂದೂ ಮಂಡಳಿ ಹೇಳಿದೆ.