ಐಎಎಸ್ ಅಧಿಕಾರಿ ಆಪ್ತೆ ಬಳಿ 25 ಕೋಟಿ ನಗದು!
* ಅಕ್ರಮ ಹಣ ವರ್ಗಾವಣೆ ಪ್ರಕರಣ
* ಜಾರ್ಖಂಡ್ ಮಹಿಳಾ ಅಧಿಕಾರಿ ಆಪ್ತೆ ಮನೆಯಲ್ಲೇ ಖಜಾನೆ
* ಐಎಎಸ್ ಅಧಿಕಾರಿ ಆಪ್ತನ ಮನೆಯಲ್ಲಿ 25 ಕೋಟಿ ನಗದು
ರಾಂಚಿ(ಮೇ.08): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶುಕ್ರವಾರ ಜಾರ್ಖಂಡ್‌ನ ಹಲವು ಕಡೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ರಾಜ್ಯದ ಗಣಿ ಇಲಾಖೆ ಕಾರ್ಯದರ್ಶಿ ಪೂಜಾ ಸಿಂಘಾಲ್‌ರ ಆಪ್ತೆ, ಲೆಕ್ಕ ಪರಿಶೋಧನಾ ಅಧಿಕಾರಿಗೆ ಸೇರಿದ 2 ಮನೆಯಲ್ಲಿ ಒಟ್ಟಾರೆ 25 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಶನಿವಾರ ಲೆಕ್ಕ ಪರಿಶೋಧನಾ ಅಧಿಕಾರಿ ಸುಮನ್ ಕುಮಾರಿಯನ್ನು ಬಂಧಿಸಲಾಗಿದೆ.
ಪೂಜಾ ಸಿಂಘಾಲ್ 2008-11ರ ಅವಧಿಯಲ್ಲಿ ಖುಂಠಿ ಜಿಲ್ಲಾಧಿಕಾರಿಯಾಗಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ 18 ಕೋಟಿ ರು. ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಲ್ಲದೆ ಅವರ ವಿರುದ್ಧ ಇನ್ನೂ ನೂರಾರು ಕೋಟಿ ಹಗರಣ ನಡೆಸಿದ ಆರೋಪವೂ ಇತ್ತು. ಈ ಬಗ್ಗೆ ಹಲವು ಬಾರಿ ವಿಚಾರಣೆಗೆ ನೋಟಿಸ್ ನೀಡಿದ್ದರೂ, ಹಾಲಿ ಗಣಿ ಇಲಾಖೆಯ ಕಾರ್ಯದರ್ಶಿಯಾಗಿರುವ ಪೂಜಾ ವಿಚಾರಣೆಗೆ ಹಾಜರಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಶುಕ್ರವಾರ ಜಾರ್ಖಂಡ್, ಬಿಹಾರ, ದೆಹಲಿ, ಪಶ್ಚಿಮ ಬಂಗಾಳ, ಪಂಜಾಬ್ ಸೇರಿದಂತೆ ಒಟ್ಟು 18 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದರು. ಈ ವೇಳೆ ರಾಂಚಿಯಲ್ಲೇ ಇರುವ ಪೂಜಾರ ಆಪ್ತೆ, ಲೆಕ್ಕ ಪರಿಶೋಧನಾ ಅಧಿಕಾರಿ ಸುಮನ್ ಮನೆಯಲ್ಲಿ 18 ಕೋಟಿ ರು.ನಗದು ಪತ್ತೆಯಾಗಿದೆ. ಇದಲ್ಲದೆ ಸುಮನ್‌ಗೆ ಸೇರಿದ ಇತರೆ ಕೆಲವು ಕಟ್ಟಡಗಳಲ್ಲಿ ಇನ್ನೂ 8 ಕೋಟಿ ರು. ನಗದು ಪತ್ತೆಯಾಗಿದೆ.
ಭಾರತ ರೇಪಿಸ್ತಾನ ಎಂದ ಫೈಸಲ್ ಪಕ್ಷ ಬಿಟ್ಟು ಮರಳಿ ಐಎಎಸ್‌ಗೆ!
ಭಾರತವನ್ನು ‘ರೇಪಿಸ್ತಾನ’ ಎಂದು ಟೀಕಿಸಿ, ರಾಜಕೀಯ ಸೇರಲು ಐಎಎಸ್ ಹುದ್ದೆಗೆ ರಾಜಿನಾಮೆ ನೀಡಿದ ಜಮ್ಮು ಹಾಗೂ ಕಾಶ್ಮೀರದ ಅಧಿಕಾರಿ ಶಾ ಫೈಸಲ್ ಮರಳಿ ಭಾರತೀಯ ಆಡಳಿತ ಸೇವೆಗೆ ಸೇರಲಿದ್ದಾರೆ.
2009ರ ಬ್ಯಾಚಿನ ಯುಪಿಎಸ್‌ಸಿ ಟಾಪರ್ ಆದ ಫೈಸಲ್, 2019ರಲ್ಲಿ ಕಾಶ್ಮೀರದಲ್ಲಿ ನಡೆದ ನಿರಂತರ ಹತ್ಯೆಗಳು ಮುಸ್ಲಿಮರ ಹಿತಾಸಕ್ತಿಯ ಕಡೆಗಣಿಸುವಿಕೆ ವಿರುದ್ಧ ಪ್ರತಿಭಟನಾರ್ಥವಾಗಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ಜಮ್ಮು ಕಾಶ್ಮೀರ ಪೀಪಲ್ಸ್ ಮೂಮೆಂಟ್ ಎಂಬ ತಮ್ಮದೇ ಪ್ರಾದೇಶಿಕ ರಾಜಕೀಯ ಪಕ್ಷ ಸ್ಥಾಪಿಸಿದ್ದರು.
ಆದರೆ ಫೈಜಲ್ ಅವರು ಆಕ್ಷೇಪಾರ್ಹ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದರ ಬಗ್ಗೆ ವಿಚಾರಣೆಗಳು ಇನ್ನೂ ಬಾಕಿಯಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಅವರ ರಾಜೀನಾಮೆಯನ್ನು ಸ್ವೀಕರಿಸಿರಲಿಲ್ಲ.
ಏ.27 ರಂದು ಟ್ವೀಟ್ ಮಾಡಿದ ಫೈಸಲ್ ನನ್ನ ಆದರ್ಶವಾದವೇ ನನ್ನನ್ನು ನಿರಾಸೆಗೊಳಿಸಿದೆ ಎಂದಿದ್ದು, ರಾಜಕೀಯವನ್ನು ಬಿಟ್ಟು ತಾವು ಮತæೂಮ್ಮೆ ಸರ್ಕಾರಿ ಸೇವೆ ಸೇರಲು ನಿರ್ಧರಿಸಿದ್ದಾರೆ. ಫೈಸಲ್ ರಾಜೀನಾಮೆ ಅಂಗೀಕಾರವಾಗದ ಕಾರಣ ಶೀಘ್ರ ಮತ್ತೆ ಐಎಎಸ್ ಅಧಿಕಾರಿಯಾಗಿ ನೇಮಕವಾಲಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.