ನವದೆಹಲಿ(ಮಾ.08): ಚಿನ್ನ ಮತ್ತು ಚಿನ್ನಾಭರಣದ ವಹಿವಾಟು ನಡೆಸುವ ತಮಿಳುನಾಡಿನ ಕಂಪನಿಗಳ ಮೇಲೆ ಮಾ.4ರಂದು ನಡೆದಿದ್ದ ಆದಾಯ ತೆರಿಗೆ ದಾಳಿ ವೇಳೆ 1000 ಕೋಟಿ ರು.ಗೂ ಹೆಚ್ಚಿನ ಮೊತ್ತದ ಕಪ್ಪುಹಣ ಪತ್ತೆಯಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮಾಹಿತಿ ನೀಡಿದೆ. ಆದರೆ ದಾಳಿ ನಡೆಸಲಾದ ಸಂಸ್ಥೆಗಳ ಹೆಸರನ್ನು ಅದು ಬಹಿರಂಗಪಡಿಸಿಲ್ಲ.

ಆದಾಯ ತೆರಿಗೆ ಅಧಿಕಾರಿಗಳು ಮಾ.4ರಂದು ಮುಂಚೂಣಿ ಚಿನ್ನ ವಹಿವಾಟು ಕಂಪನಿ ಮತ್ತು ದಕ್ಷಿಣ ಭಾರತದಲ್ಲೇ ಅತಿದೊಡ್ಡ ಆಭರಣ ಮಳಿಗೆಗಳ ಸಮೂಹ ಹೊಂದಿರುವ ಕಂಪನಿಗಳ ಮೇಲೆ ದಾಳಿ ನಡೆಸಿದ್ದರು. ಅಂದು ಚೆನ್ನೈ, ಮುಂಬೈ, ಮದುರೈ, ತಿರುಚಿರಾಪಳ್ಳಿ, ತ್ರಿಶ್ಯೂರ್‌, ನೆಲ್ಲೂರು, ಜೈಪುರ, ಇಂದೋರ್‌ ಸೇರಿ 27 ಕಡೆ ದಾಳಿ ನಡೆಸಲಾಗಿತ್ತು. ದಾಳಿ ವೇಳೆ 1.2 ಕೋಟಿ ರು. ಅಘೋಷಿತ ಹಣ ಪತ್ತೆಯಾಗಿತ್ತು.

ದಾಳಿಯ ವೇಳೆ ಚಿನ್ನ ವಹಿವಾಟು ನಡೆಸುವ ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದ ವೇಳೆ, ದಾಖಲೆ ಇಡದ ನಗದು ವ್ಯಾಪಾರ, ನಕಲಿ ಕ್ಯಾಶ್‌ ಕ್ರೆಡಿಟ್‌, ನಕಲಿ ಖಾತೆಗಳಲ್ಲಿ ಹಣ ಜಮೆ, ಅಪನಗದೀಕರಣದ ವೇಳೆ ಮಾಡಲಾದ ಭಾರೀ ಪ್ರಮಾಣದ ನಗದು ಠೇವಣಿ ಸೇರಿದಂತೆ ನಾನಾ ರೀತಿಯ ಅಕ್ರಮ ಪತ್ತೆಯಾಗಿದೆ.

ಇನ್ನು ಆಭರಣ ವಹಿವಾಟು ನಡೆಸುವ ಕಂಪನಿ ಕೂಡ ಭಾರೀ ಅಕ್ರಮ ಎಸಗಿರುವುದು ತಪಾಸಣೆ ವೇಳೆ ಕಂಡುಬಂದಿದೆ. ಈ ಸಂಸ್ಥೆಯು ಸ್ಥಳೀಯ ಲೇವಾದೇವಿದಾರರಿಂದ ಭಾರೀ ಪ್ರಮಾಣದ ಹಣ ಸಾಲ ಪಡೆದಿರುವುದು ಮತ್ತು ಅದನ್ನು ಮರುಪಾವತಿ ಮಾಡಿರುವುದು ಕಂಡುಬಂದಿದೆ. ಆದರೆ ಮತ್ತೊಂದೆಡೆ ಇದೇ ಸಂಸ್ಥೆ ಇನ್ನೊಂದೆಡೆ ತಾನೇ ಬಿಲ್ಡರ್‌ಗಳಿಗೆ ಸಾಲ ನೀಡಿದ್ದೂ ಅಲ್ಲದೆ ರಿಯಲ್‌ ಎಸ್ಟೇಟ್‌ನಲ್ಲಿ ಭಾರೀ ಪ್ರಮಾಣದ ಹಣ ಹೂಡಿಕೆ ಮಾಡಿದೆ. ಆಭರಣ ತಯಾರಿಕೆ ವೇಳೆ ಭಾರೀ ಪ್ರಮಾಣದ ವೇಸ್ಟೇಜ್‌ ತೋರಿಸುವ ಮೂಲಕ ಅಕ್ರಮ ಎಸಗಿರುವುದು ಪತ್ತೆಯಾಗಿದೆ. ಈ ಎರಡೂ ಕಂಪನಿಗಳಲ್ಲಿನ ಇದುವರೆಗಿನ ತಪಾಸಣೆ ಅನ್ವಯ 1000 ಕೋಟಿ ರು.ಗೂ ಹೆಚ್ಚು ಅಘೋಷಿತ ಹಣ ಪತ್ತೆಯಾಗಿದೆ ಎಂದು ಸಿಬಿಡಿಟಿ ಹೇಳಿಕೆಯಲ್ಲಿ ತಿಳಿಸಿದೆ.