ತಾಯಿ ಮೃತಪಟ್ಟ 2 ತಿಂಗಳಿಗೆ ಖಾತೆಗೆ ಬಂತು 1.13 ಲಕ್ಷ ಕೋಟಿ ರೂಪಾಯಿ. ಮೆಸೇಜ್ ನೋಡಿದ ಮಗ ಬೆಚ್ಚಿ ಬಿದ್ದಿದ್ದಾನೆ. ಕೆಲವೇ ಹೊತ್ತಲ್ಲಿ ಮಗನ ಫೋನ್ ಸ್ವಿಚ್ ಆಫ್ ಆಗಿದ್ದರೆ, ಇತ್ತ ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸಿದೆ.

ಗ್ರೇಟರ್ ನೋಯ್ಡಾ (ಆ.05) ಖಾತೆಗೆ ತಪ್ಪಾಗಿ ಹಣ ಜಮೆ ಮಾಡಿದ ಹಲವು ಘಟನೆಗಳಿವೆ. ಹಲವು ಬಾರಿ ತಾಂತ್ರಿಕ ದೋಷಗಳಿಂದ ದುಬಾರಿ ಮೊತ್ತ ಜಮೆಯಾಗಿರುವ ಘಟನೆಯೂ ನಡೆದಿದೆ. ಇದೀಗ ಮೃತ ಮಹಿಳೆ ಖಾತೆಗೆ ಬರೋಬ್ಬರಿ 1.13 ಲಕ್ಷ ಕೋಟಿ ರೂಪಾಯಿ ಜಮೆ ಆಗಿರುವ ಘಟನೆ ನಡೆದಿದೆ. ಮೊಬೈಲ್ ಫೋನ್‌ಗೆ ಬಂದ ಸಂದೇಶ ನೋಡಿ ಮೃತ ಮಹಿಳೆ ಪುತ್ರ ಬೆಚ್ಚಿ ಬಿದ್ದಿದ್ದಾನೆ. ಸ್ಕ್ರೀನ್‌ಶಾಟ್ ತೆಗೆದು ಸ್ನೇಹಿತರಿಗೆ ಕಳುಹಿಸಿ ಮೊತ್ತ ಎಷ್ಟು ಎಂದು ಲೆಕ್ಕಹಾಕಲು ಸೂಚಿಸಿದ್ದಾರೆ. ಇದರ ನಡುವೆ ಪುತ್ರನ ಫೋನ್ ಸ್ವಿಚ್ ಆಗಿದೆ. ಇತ್ತ ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸಿದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

10,01,35,60,00,00,00,00,00,01,00,23,56,00,00,00,00,299 ರೂಪಾಯಿ ಜಮೆ

19 ವರ್ಷದ ದೀಪಕ್ ಅಲಿಯಾಸ್ ದೀಪು ದಂಕೌರ್ ನಿವಾಸಿ. ಎರಡು ತಿಂಗಳ ಹಿಂದೆ ದೀಪಕ್ ತಾಯಿ ಗಾಯತ್ರಿ ದೇವಿ ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಗಾಯತ್ರಿ ದೇವಿ ನಿಧನರಾಗಿದ್ದಾರೆ. ತಾಯಿ ಮೃತಪಟ್ಟ ಬಳಿಕ ತಾಯಿಯ ಬ್ಯಾಂಕ್ ಖಾತೆ, ಫೋನ್ ಎಲ್ಲವನ್ನೂ ಪುತ್ರ ದೀಪಕ್ ನಿರ್ವಹಣೆ ಮಾಡುತ್ತಿದ್ದಾನೆ. ಆಗಸ್ಟ್ 3ರ ರಾತ್ರಿ ವೇಳೆ ಬ್ಯಾಂಕ್ ಖಾತೆಯ ಮೇಸೆಜ್ ಬಂದಿದೆ. ತೆರೆದು ನೋಡಿದರೆ ಗಾಯತ್ರಿ ದೇವಿ ಖಾತೆಗೆ 10,01,35,60,00,00,00,00,00,01,00,23,56,00,00,00,00,299 ರೂಪಾಯಿ ಜಮೆ ಆಗಿರುವುದಾಗಿ ಸಂದೇಶ ಬಂದಿದೆ. ಈ ಸಂದೇಶ ನೋಡಿ ದೀಪಕ್ ಬೆಚ್ಚಿ ಬಿದ್ದಿದ್ದಾನೆ.

ದೀಪಕ್ ಫೋನ್ ಸ್ವಿಚ್ ಆಫ್

ದೀಪಕ್ ಈ ಸಂದೇಶ ನೋಡಿ ಗಾಬರಿಯಾಗಿದ್ದಾನೆ. ಎಷ್ಟೇ ಬಾರಿ ಪ್ರಯತ್ನಿಸಿದ್ದರೂ ಮೊತ್ತ ಎಷ್ಟು ಅನ್ನೋದು ಗೊತ್ತಾಗಲೇ ಇಲ್ಲ. ಹೀಗಾಗಿ ಸ್ಕ್ರೀನ್‌ಶಾಟ್ ತೆಗೆದು ಸ್ನೇಹಿತರಿಗೆ ಕಳುಹಿಸಿದ್ದಾನೆ. ಸ್ನೇಹಿತರು ಲೆಕ್ಕ ಹಾಕಿ ಮೊತ್ತ ತಿಳಿಸಿದ್ದಾರೆ. ಈ ಮೊತ್ತ ಬರೋಬ್ಬರಿ 1.13 ಲಕ್ಷ ರೂಪಾಯಿ ಎಂದಾಗ ಖುಷಿ ಜೊತೆ ಆತಂಕವೂ ಹೆಚ್ಚಾಗಿದೆ. ಈ ಮಾಹಿತಿ ಒಬ್ಬರಿಂದ ಒಬ್ಬರಿಗೆ ಹರಡಲು ಆರಂಭಿಸಿದೆ. ಕ್ಷಣಾರ್ಧದಲ್ಲಿ ಗಾಳಿ ಸುದ್ದಿಯಂತೆ ಹರಡಿ ದೀಪಕ್‌ಗೆ ಎಲ್ಲರೂ ಫೋನ್ ಮಾಡಲು ಆರಂಭಿಸಿದ್ದಾರೆ. ಕರೆ ಮೇಲೆ ಕರೆ ಬರುತ್ತಿದ್ದಂತೆ ದೀಪಕ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಯಾರ ಸಂಪರ್ಕಕ್ಕೂ ಸಿಗುತಿಲ್ಲ.

ಕೋಟಕ್ ಮಹೀಂದ್ರ ಹೇಳುತ್ತಿರುವುದೇನು?

ಗಾಯತ್ರಿ ದೇವಿ ಕೋಟಕ್ ಮಹೀಂದ್ರ ಖಾತೆಗೆ 1.13 ಲಕ್ಷ ಕೋಟಿ ರೂಪಾಯಿ ಹಣ ಜಮೆ ಆಗಿದೆ ಎಂದು ಮಾಹಿತಿ ಹಬ್ಬಿದೆ. ಇತ್ತ ಕೋಟಕ್ ಮಹೀಂದ್ರ ಬ್ಯಾಂಕ್ ಈ ಕುರಿತು ಸ್ಪಷ್ಟನೆ ನೀಡಿದೆ. ಬ್ಯಾಂಕ್ ಕಡೆಯಿಂದ ಯಾವುದೇ ತಾಂತ್ರಿಕ ದೋಷಗಳು ಸಂಭವಿಸಿಲ್ಲ. ಈ ರೀತಿ ಯಾವುದೇ ದೊಡ್ಡ ಮೊತ್ತ ಜಮೆ ಆಗಿಲ್ಲ ಎಂದಿದೆ. ಸಂದೇಶ ನಕಲಿ ಇರುವ ಸಾಧ್ಯತೆ ಇದೆ. ಕೋಟಕ್ ಮಹೀಂದ್ರ ಬ್ಯಾಂಕ್ ಆ್ಯಪ್ ಮೂಲಕಕ ಬ್ಯಾಲೆನ್ಸ್ ಪರಿಶೀಲಿಸಲು ಸೂಚಿಸಿದೆ.

ಆದಾಯ ತೆರಿಗೆ ಇಲಾಖೆಯಿಂದ ತನಿಖೆ

ದೊಡ್ಡ ಪ್ರಮಾಣದ ಮೊತ್ತ ಜಮೆ ಆಗಿರುವ ಕುರಿತು ಮಾಹಿತಿ ಆದಾಯ ಇಲಾಖೆಗೂ ಮುಟ್ಟಿದೆ. ಅಧಿಕಾರಿಗಳು ಇದೀಗ ಈ ಕುರಿತು ತನಿಖೆ ಮಾಡಲು ಮುಂದಾಗಿದ್ದಾರೆ. ಬ್ಯಾಂಕ್ ತಾಂತ್ರಿಕ ಸಮಸ್ಯೆಯಿಂದ ಜಮೆ ಆಗಿರುವ ಸಾಧ್ಯತೆ ಇದೆ. ಬ್ಯಾಂಕಿಂಗ್ ಸಮಸ್ಯೆಯಿಂದ ಈ ರೀತಿ ಆಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣದ ಕುರಿತು ಆಧಾಯ ಇಲಾಖೆ ಅದಿಕಾರಿಗಳು ಬ್ಯಾಂಕ್ ಡಿಜಿಟಲ್ ದಾಖಲೆ ಪರಿಶೀಲಿಸಲು ಮುಂದಾಗಿದ್ದಾರೆ. ಬ್ಯಾಂಕ್‌ನಿಂದ ಮಾಹಿತಿ ಪಡೆಯಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ.