ನವದೆಹಲಿ(ಏ.03): ಉದ್ಯಮಿ ಮುಕೇಶ್‌ ಅಂಬಾನಿ ಮನೆಯ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆ ಆದ ಪ್ರಕರಣದಲ್ಲಿ ಬಂಧಿತರಾಗಿರುವ ಮುಂಬೈ ಪೊಲೀಸ್‌ ಇನ್ಸ್‌ಪೆಕ್ಟರ್‌ ಸಚಿನ್‌ ವಾಝೆ, ಮುಂಬೈನ ನಾರಿಮನ್‌ ಪಾಯಿಂಟ್‌ನಲ್ಲಿರುವ ಫೈವ್‌ ಸ್ಟಾರ್‌ ಹೋಟೆಲ್‌ನ ಕೋಣೆಯೊಂದರಲ್ಲಿ ಕುಳಿತು ಹಫ್ತಾ ದಂಧೆ ನಡೆಸುತ್ತಿದ್ದರು ಎಂಬ ಸಂಗತಿ ಎನ್‌ಐಎ ತನಿಖೆಯಿಂದ ಬೆಳಕಿಗೆ ಬಂದಿದೆ.

ಉದ್ಯಮಿಯೊಬ್ಬರು 12 ಲಕ್ಷ ನೀಡಿ ರೂಮ್‌ ನಂ.1964 ಅನ್ನು 100 ದಿನಗಳ ಕಾಲ ಬುಕ್‌ ಮಾಡಿದ್ದರು. ವಾಝೆ ನಕಲಿ ಗುರುತಿನ ಚೀಟಿಯನ್ನು ನೀಡಿ ಫೆಬ್ರವರಿಯಿಂದ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಅಲ್ಲಿಂದಲೇ ಅಪರಾಧ ವಿಭಾಗದ ಕರ್ತವ್ಯಕ್ಕೆ ವಾಝೆ ಹಾಜರಾಗುತ್ತಿದ್ದರು. ಹೋಟೆಲ್‌ ರೂಮ್‌ ಬುಕ್‌ ಮಾಡಿದ್ದ ಉದ್ಯಮಿಗೆ ಕೆಲವು ವಿವಾದಗಳಲ್ಲಿ ವಾಝೆ ಸಹಾಯ ಮಾಡಿದ್ದರು.

ಅಲ್ಲದೇ ಸ್ಫೋಟಕ ಪತ್ತೆ ಪ್ರಕರಣದಲ್ಲಿ ಇನ್ನೂ ಕೆಲವು ಪೊಲೀಸ್‌ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇದ್ದು, ಅವರನ್ನು ಸದ್ಯದಲ್ಲೇ ಬಂಧಿಸುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.