Asianet Suvarna News Asianet Suvarna News

Infosys ವಿರುದ್ಧ ಪಾಂಚಜನ್ಯ ಗಂಭೀರ ಆರೋಪ: ನಮಗೂ ಇದಕ್ಕೂ ಸಂಬಂಧವಿಲ್ಲ ಎಂದ RSS!

* ಇನ್ಫೋಸಿಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಪಾಂಚಜನ್ಯ

* ಇನ್ಫೋಸಿಸ್ ಕಂಪನಿ ಭಾರತೀಯ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಉದ್ದೇಶ ಪೂರ್ವಕವಾಗಿ ಪ್ರಯತ್ನಿಸುತ್ತಿದೆ

* ಪಾಂಚಜನ್ಯ ಆರೋಪದ ಬೆನ್ನಲ್ಲೇ ಆರ್‌ಎಸ್‌ಎಸ್‌ ಪ್ರತಿಕ್ರಿಯೆ

* ನಮಗೂ ಇದಕ್ಕೂ ಸಂಬಂಧವಿಲ್ಲ ಎಂದ RSS

Role of Infosys in India Development Crucial Panchajanya Not Mouthpiece of RSS pod
Author
Bangalore, First Published Sep 5, 2021, 4:34 PM IST

ನವದೆಹಲಿ(ಸೆ.05): ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಪಾಂಚಜನ್ಯ ಇನ್ಫೋಸಿಸ್ ವಿರುದ್ಧ ಮಾಡಿದ್ದ ಆರೋಪವನ್ನು ಅಲ್ಲಗಳೆಯುತ್ತಾ, ಈ ಸಾಪ್ತಾಹಿಕ ತನ್ನ ಮುಖವಾಣಿಯಲ್ಲ ಎಂದಿದೆ. ಈ ನಿಟ್ಟಿನಲ್ಲಿ ಪ್ರಕಟವಾದ ಲೇಖನಗಳು ಲೇಖಕರ ಅಭಿಪ್ರಾಯವಾಗಿದ್ದು, ಇದಕ್ಕೂ RSSಗೂ ಸಂಬಂಧ ಕಲ್ಪಿಸಬೇಡಿ ಎಂದಿದೆ. ಇಷ್ಟೇ ಅಲ್ಲದೇ, ಭಾರತೀಯ ಕಂಪನಿಯಾಗಿರುವ ಇನ್ಫೋಸಿಸ್ ದೇಶದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದೆ ಎಂದೂ ಹೇಳಿದೆ.

ಆರ್‌ಎಸ್‌ಎಸ್‌ನ ಅಖಿಲ ಭಾರತ ಪ್ರಚಾರ ಉಸ್ತುವಾರಿ ಸುನಿಲ್ ಅಂಬೇಕರ್ ಈ ಸಂಭಂಧ ಭಾನುವಾರ ಟ್ವೀಟ್ ಮಾಡಿದ್ದು, "ಭಾರತೀಯ ಕಂಪನಿಯಾಗಿ, ಇನ್ಫೋಸಿಸ್ ಭಾರತದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದೆ. ಇನ್ಫೋಸಿಸ್ ನಿರ್ವಹಿಸುವ ಪೋರ್ಟಲ್‌ಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿರಬಹುದು, ಆದರೆ ಪಾಂಚಜನ್ಯದಲ್ಲಿ ಈ ಬಗ್ಗೆ ಪ್ರಕಟವಾದ ಲೇಖನಗಳು ಲೇಖಕರ ವೈಯಕ್ತಿಕ ದೃಷ್ಟಿಕೋನಗಳಾಗಿವೆ. ಅಲ್ಲದೇ ಪಾಂಚಜನ್ಯ ಸಂಘದ ಮುಖವಾಣಿಯಲ್ಲ. ಆದ್ದರಿಂದ, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೂ ಈ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಸಂಬಂಧ ಕಲ್ಪಿಸಬಾರದು ಎಂದಿದ್ದಾರೆ.

ಪಾಂಚಜನ್ಯದಲ್ಲಿ ಪ್ರಕಟವಾದ ಲೇಖನದಲ್ಲೇನಿದೆ?

ಆರ್‌ಎಸ್‌ಎಸ್‌ನ ಸಾಪ್ತಾಹಿಕ ಪತ್ರಿಕೆ ಪಾಂಚಜನ್ಯ 'ಸಾಖ್‌ ಔರ್‌ ಆಘಾತ್' ಎಂಬ ಶೀರ್ಷಿಕೆಯಡಿ ಕವರ್ ಸ್ಟೋರಿ ಪ್ರಕಟಿಸಿತ್ತು. ಈ ಲೇಖನದಲ್ಲಿ ಬೆಂಗಳೂರು ಮೂಲದ ಐಟಿ ಕ್ಷೇತ್ರದ ಪ್ರಖ್ಯಾತ ಇನ್ಫೋಸಿಸ್ ಕಂಪನಿ ಭಾರತೀಯ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಉದ್ದೇಶ ಪೂರ್ವಕವಾಗಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ.. ಅಲ್ಲದೇ ಈ ಕಂಪನಿಯು ನಕ್ಸಲರು, ಎಡಪಂಥೀಯರು ಮತ್ತು ತುಕ್ಡೆ ತುಕ್ಡೆ ಗ್ಯಾಂಗ್‌ಗೆ ಸಹಾಯ ಮಾಡಿದೆ ಎಂದೂ ಆರೋಪಿಸಲಾಗಿದೆ. ಇನ್ಫೋಸಿಸ್ ಹೀಗೆ ಸರ್ಕಾರಿ ಯೋಜನೆಯಲ್ಲಿ ಎಡವಟ್ಟು ಮಾಡಿರುವುದು ಇದೇ ಮೊದಲಲ್ಲ ಎಂದೂ ದೂಷಿಸಲಾಗಿದೆ. 

ಆರ್‌ಎಸ್‌ಎಸ್‌ ಬೆಂಬಲಿತ ಸಂಘಟನೆಯಿಂದ ಕೃಷಿ ಕಾಯ್ದೆಗೆ ವಿರೋಧ

ಇಷ್ಟೇ ಅಲ್ಲದೇ "ಆದಾಯ ತೆರಿಗೆ ಇಲಾಖೆಯು ರಿಟರ್ನ್ಸ್ ಸಲ್ಲಿಸಲು ರಚಿಸಿದ ಹೊಸ ವೆಬ್‌ಸೈಟ್‌ನಲ್ಲಿ ಪದೇ ಪದೇ ಸಮಸ್ಯೆಗಳು ಕಂಡು ಬರುತ್ತಿವೆ. ಇದರ ನಿರ್ವಹಣೆಯ ಗುತ್ತಿಗೆ ಪ್ರಸಿದ್ಧ ಸಾಫ್ಟ್‌ವೇರ್ ಕಂಪನಿ ಇನ್ಫೋಸಿಸ್‌ಗೆ ನೀಡಲಾಗಿದೆ. ಆದರೆ 'ದೊಡ್ಡ ಅಂಗಡಿ, ಕೆಟ್ಟ ತಿಂಡಿ' ಮತ್ತು 'ಹೆಸರು ದೊಡ್ಡದಾಗಿದ್ದರೂ, ಕೆಲಸ ಚಿಕ್ಕದು' ಎಂಬ ಎಂಬ ಮಾತುಗಳಂತೆ ವರ್ತಿಸುತ್ತಿದೆ. ಇನ್ಫೋಸಿಸ್‌ನಂತಹ ಕಂಪನಿ ಸಾಮಾನ್ಯ ಕೆಲಸ ಮಾಡುವಲ್ಲಿ ಯಾಕಿಷ್ಟು ಅಜಾಗರೂಕವಾಗಿದೆ ಎಂಬ ಪ್ರಶ್ನೆ ಉದ್ಭವಿಸುತ್ತಿದೆ? ಇದು ಗ್ರಾಹಕರಿಗೆ ತೃಪ್ತಿದಾಯಕ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂಬ ದೂರು ಸಾಮಾನ್ಯವೇ ಅಥವಾ ಇದರ ಹಿಂದೆ ಉದ್ದೇಶಪೂರ್ವಕ ಪಿತೂರಿ ಇದೆಯೇ? ' ಎಂದೂ ಈ ಲೇಖನದಲ್ಲಿ ಪ್ರಶ್ನಿಸಲಾಗಿತ್ತು.

ಇನ್ಫೋಸಿಸ್ ವಿರುದ್ಧ ಆರೋಪ

ಲೇಖನದ ಪ್ರಕಾರ, ಯಾರಾದರೂ ಮೊದಲ ಬಾರಿಗೆ ತಪ್ಪು ಮಾಡಿದರೆ, ಅದು ಅರಿವಿಗೆ ಬಾರದೇ, ತಿಳಿಯದೇ ಮಾಡಿದ್ದು ಎನ್ನಬಹುದು. ಆದರೆ ಅದೇ ತಪ್ಪು ಪದೇ ಪದೇ ಸಂಭವಿಸಿದರೆ, ಅನುಮಾನ ಸೃಷ್ಟಿಸುವುದು ಸಹಜ. ಇನ್ಫೋಸಿಸ್ ಆಡಳಿತವು ಉದ್ದೇಶಪೂರ್ವಕವಾಗಿ ಭಾರತೀಯ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳಿವೆ. ಸಾಮಾಜಿಕ ಜಾಲತಾಣಗಳಲ್ಲೂ ಅನೇಕ ತಜ್ಞರು ಕೂಡ ಈ ಬಗ್ಗೆ ಬಹಿರಂಗವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಅನುಮಾನಗಳು ಮತ್ತು ಆರೋಪಗಳ ಹಿಂದೆ ಕೆಲವು ಸ್ಪಷ್ಟ ಕಾರಣಗಳಿವೆ. ಆದಾಯ ತೆರಿಗೆ ರಿಟರ್ನ್ ಪೋರ್ಟಲ್‌ಗೂ ಮುನ್ನ, ಇನ್ಫೋಸಿಸ್ ಜಿಎಸ್‌ಟಿ ವೆಬ್‌ಸೈಟ್ ಅಭಿವೃದ್ಧಿಪಡಿಸಿದೆ. ಜಿಎಸ್‌ಟಿ ದೇಶದ ಆರ್ಥಿಕತೆಯನ್ನು ಸುಧಾರಿಸಲು ಒಂದು ದೊಡ್ಡ ಹೆಜ್ಜೆಯಾಗಿದೆ. ಆದರೆ ಇಂತಹ ಪ್ರಮುಖ ಯೋಜನೆಯ ವೆಬ್‌ಸೈಟ್‌ ಲಾಂಚ್‌ ಆದಾಗ, ಇದು ಜನ ಸಾಮಾನ್ಯರನ್ನು ಭಾರೀ ನಿರಾಸೆಗಿಡು ಮಾಡಿತ್ತು ಎಂದಿದೆ.

ತಾಲಿಬಾನ್‌ಗೂ ಆರ್‌ಎಸ್‌ಎಸ್‌ಗೂ ಹೋಲಿಕೆ : ಹೇಳಿಕೆಗೆ ಬದ್ಧ ಎಂದ ಧ್ರುವನಾರಾಯಣ್‌

ಇನ್ಫೋಸಿಸ್ ವಿರುದ್ಧ ನಕ್ಸಲೀಯರು, ಎಡಪಂಥೀಯರು ಮತ್ತು ತುಕ್ಡೆ ತುಕ್ಡೆ ಗ್ಯಾಂಗ್‌ಗೆ ಸಹಾಯ ಮಾಡಿದ ಆರೋಪವಿದೆ. ದೇಶದಲ್ಲಿ ನಡೆಯುತ್ತಿರುವ ಹಲವು ಅಕ್ರಮ ಚಟುವಟಿಕೆಗಳಿಗೆ ಇನ್ಫೋಸಿಸ್‌ನ ನೇರ ಮತ್ತು ಪರೋಕ್ಷ ಬೆಂಬಲ ಇರುವುದು ಕಂಡು ಬಂದಿದೆ. ಅನೇಕ ಪ್ರಚಾರ ವೆಬ್‌ಸೈಟ್‌ಗಳ ಹಿಂದೆ ಇನ್ಫೋಸಿಸ್‌ ಧನ ಸಹಾಯವಿದೆ ಎಂದೂ ಹೇಳಲಾಗಿದೆ. ಜಾತಿ ದ್ವೇಷವನ್ನು ಹರಡುವಲ್ಲಿ ತೊಡಗಿರುವ ಕೆಲವು ಸಂಸ್ಥೆಗಳು ಇನ್ಫೋಸಿಸ್ ನ ಚಾರಿಟಿಯ ಫಲಾನುಭವಿಗಳಾಗಿದ್ದರೂ, ಈ ಕಂಪನಿಯು ಸಾಫ್ಟ್ ವೇರ್ ತಯಾರಿಸಲು ಕೆಲಸ ಮಾಡುತ್ತದೆ. ಇನ್ಫೋಸಿಸ್ ದೇಶವಿರೋಧಿ ಮತ್ತು ಅರಾಜಕತಾವಾದಿ ಸಂಘಟನೆಗಳಿಗೆ ಧನಸಹಾಯ ನೀಡುವುದರ ಹಿಂದಿನ ಕಾರಣಗಳೇನು ಎಂದು ಪ್ರಚಾರಕರನ್ನು ಕೇಳಬೇಕಲ್ಲವೇ? ಇಂತಹ ಸಂಶಯಾಸ್ಪದ ಸ್ವಭಾವದ ಕಂಪನಿಗೆ ಸರ್ಕಾರಿ ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕೇ? ಎಂದೂ ಈ ಲೇಖನದಲ್ಲಿ ಪ್ರಶ್ನಿಸಲಾಗಿದೆ. 

Follow Us:
Download App:
  • android
  • ios