ಲಕ್ನೋ(ಮೇ.06): ಕೊರೋನಾ ಸೋಂಕಿನ ಎರಡನೇ ಅಲೆಯಿಮದ ನರಳುತ್ತಿರುವ ಭಾರತ ಮತ್ತೊಬ್ಬ ಪ್ರಮುಖ ರಾಜಕೀಯ ನಾಯಕನನ್ನು ಕಳೆದುಕೊಂಡಿದೆ. ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್ ಪುತ್ರ ಅಜಿತ್ ಸಿಂಗ್ ಗುರುವಾರದಂದು ಚಿಕಿತ್ಸೆ ಫಲಿಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 

82 ವರ್ಷದ ಸಿಂಗ್ ಕಳೆದ ಕೆಲ ದಿನಗಳಿಂದ ಕೊರೋನಾದಿಂದ ಬಳಲುತ್ತಿದ್ದರು. ಗುರುಗಾಂವ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅಜಿತ್ ಸಿಂಗ್ ಗುರುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಈ ಸೋಂಕು ಅವರ ಶ್ವಾಸಕೋಶದ ಮೇಲೆ ಆಕ್ರಮಣ ನಡೆಸಿತ್ತು. ಅಲ್ಲದೇ ಇದರಿಂದಾಗಿ ನ್ಯುಮೋನಿಯಾವೂ ಆಗಿತ್ತು. ವೈದ್ಯರು ಅವರ ಆರೋಗ್ಯದ ಮೇಲೆ ವಿಶೇಷ ನಿಗಾ ಇರಿಸಿದ್ದರೂ ಕಳೆದ ಎರಡು ದಿನಗಳಿಂದ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು. ಎಲ್ಲಾ ರೀತಿಯ ಯತ್ನ ನಡೆಸಿದರೂ ಅವರನ್ನು ಉಳಿಸಲಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

"

ಅನೇಕ ಬಾರಿ ಕೇಂದ್ರ ಸಚಿವರಾಗಿದ್ದ ಅಜಿತ್ ಸಿಂಗ್‌ ಜಾಟ್‌ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. ಉತ್ತರ ಪ್ರದೇಶದಲ್ಲಿ ಇವರದ್ದೇ ಆಜ್ಞೆಯೊಂದೇ ನಡೆಯುತ್ತದೆ ಎಂಬಷ್ಟು ಪ್ರಭಾವವಿತ್ತು. ಆದರೆ ಬಿಜೆಪಿ ಪ್ರಾಬಲ್ಯದಿಂದ ಮತ್ತು ಕಳೆದ ಕೆಲ ವಿಧಾನಸಭಾ ಚುನಾವಣೆಯಲ್ಲಾದ ಸೋಲಿನ ಬಳಿಕ ಆರ್‌ಎಲ್‌ಡಿ ತನ್ನ ಹಿಡಿತ ಕಳೆದುಕೊಂಡಿತು. ಅಲ್ಲದೇ ಕಳೆದ ಚುನಾವಣೆಯಲ್ಲಿ ಅಜಿತ್ ಸಿಂಗ್ ಸೋಲುಂಡಿದ್ದು, ಅವರ ಪುತ್ರ ಜಯಂತ್ ಚೌಧರಿ ಕೂಡಾ ಮಥುರಾ ಲೋಕಸಭಾ ಕ್ಷೇತ್ರದಲ್ಲಿ ಸೋಲುಂಡರು. ಇವೆಲ್ಲದರ ಪರಿಣಾಮ ಅಜಿತ್ ಸಿಂಗ್ ಹೆಸರು ರಾಜಕೀಯದಿಂದ ಮರೆಯಾಗತೊಡಗಿತ್ತು. 1939ರ ಫೆಬ್ರವರಿ 12ರಂದು ಮೀರತ್‌ನಲ್ಲಿ ಜನಿಸಿದ ಅಜಿತ್ ಸಿಂಗ್ ಇಂಜಿನಿಯರಿಂಗ್ ಶಿಕ್ಷಣ ಪಡೆದಿದ್ದಾರೆ. 

ಪುತ್ರ ಜಯಂತ್ ಸಿಂಗ್ ಟ್ವೀಟ್ ಮಾಡಿ ತಂದೆಯ ಸಾವಿನ ಸುದ್ದಿ ಖಚಿತಪಡಿಸಿದ್ದಾರೆ. ಅಜಿತ್ ಸಿಂಗ್ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಅಲ್ಲದೇ ಕೇಂದ್ರ  ವಿಮಾನಯಾನ ಸಚಿವರೂ ಆಗಿ ಸೇವೆ ಸಲ್ಲಿಸಿದ್ದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona