* ಮೆಟ್ಟಿಲುಗಳಿಂದ ಕೆಳಗೆ ಬಿದ್ದಿದ್ದ ಲಾಲೂ ಯಾದವ್ ಸ್ಥಿತಿ ಗಂಭೀರ* ಲಾಲೂ ಪ್ರಸಾದ್ ಯಾದವ್ ಆಸ್ಪತ್ರೆಗೆ ದಾಖಲು* ಐಸಿಯುನಲ್ಲಿ ದಾಖಲಾದ ಲಾಲೂ ಜೊತೆ ಪುತ್ರಿ ಮಾತು
ಪಾಟ್ನಾ(ಜು.05): ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಂಸ್ಥಾಪನಾ ದಿನದಂದು ಲಾಲು ಪ್ರಸಾದ್ ಯಾದವ್ ಅವರ ಮಗಳು ತಮ್ಮ ತಂದೆಯ ಭಾವನಾತ್ಮಕ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಲಾಲು ಪ್ರಸಾದ್ ಯಾದವ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ತುಂಬಾ ದುರ್ಬಲ ಹಾಗೂ ಅಸ್ವಸ್ಥರಂತೆ ಕಂಡು ಬಂದಿದ್ದಾರೆ. ಫೋಟೋಗಳನ್ನು ಹಂಚಿಕೊಳ್ಳುವಾಗ, ಲಾಲು ಯಾದವ್ ಅವರ ಪುತ್ರಿ ರೋಹಿಣಿ ಅವರು ಅಪ್ಪ ನನಗೆ ಹೀರೋ ಇದ್ದಂತೆ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಇಂದು ಲಾಲು ಪ್ರಸಾದ್ ಯಾದವ್ ಅವರ ಪಕ್ಷದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) 26 ನೇ ಸಂಸ್ಥಾಪನಾ ದಿನ ಎಂಬುವುದು ಉಲ್ಲೇಖನೀಯ. ಆದರೆ ಸದ್ಯ ಲಾಲು ಆಸ್ಪತ್ರೆಯಲ್ಲಿದ್ದಾರೆ. ಈ ಕಾರಣದಿಂದಾಗಿ ಯಾವುದೇ ರೀತಿಯ ಸಂಭ್ರಮಾಚರಣೆ ಇರುವುದಿಲ್ಲ. ಪಕ್ಷದ ಸಂಸ್ಥಾಪನಾ ದಿನದಂದು ಪಕ್ಷದ ಸದಸ್ಯತ್ವ ಅಭಿಯಾನ ಮಾತ್ರ ನಡೆಯಲಿದೆ.
ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ (ರೋಹಿಣಿ ಆಚಾರ್ಯ) ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಮತ್ತು ಮಿಸಾ ಭಾರತಿ ಅವರು ತಂದೆ ಲಾಲು ಯಾದವ್ ಅವರನ್ನು ವಿಡಿಯೋ ಕಾಲ್ ಮೂಲಕ ವೀಕ್ಷಿಸುತ್ತಿದ್ದಾರೆ, ಇದರಲ್ಲಿ ಅವರು ಭಾವುಕರಾಗಿ ಕಾಣುತ್ತಿದ್ದಾರೆ.
ರೋಹಿಣಿ ಆಚಾರ್ಯ ಅವರು ಫೋಟೋ ಶೇರ್ ಮಾಡುತ್ತಾ, 'ನನ್ನ ನಾಯಕ, ನನ್ನ ಬೆಂಬಲ ಅಪ್ಪ. ಬೇಗ ಚೇತರಿಸಿಕೊಳ್ಳಿ. ಎಲ್ಲ ಅಡೆತಡೆಗಳಿಂದ ಮುಕ್ತಿ ಪಡೆದವನಿಗೆ ಕೋಟಿ ಕೋಟಿ ಜನರ ಆಶೀರ್ವಾದವಿದೆ ಎಂದು ರೋಹಿಣಿ ಬರೆದಿದ್ದಾರೆ.
ಲಾಲು ಯಾದವ್ ಮೆಟ್ಟಿಲಿನಿಂದ ಕೆಳಗೆ ಬಿದ್ದಿದ್ದರು
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಪ್ರಸ್ತುತ ಪಾಟ್ನಾದ ಪಾರಸ್ ಆಸ್ಪತ್ರೆಯ ಸರ್ಜಿಕಲ್ ಐಸಿಯುನಲ್ಲಿ ದಾಖಲಾಗಿದ್ದಾರೆ. ಲಾಲು ಅವರು ತಮ್ಮ ಕುಟುಂಬದೊಂದಿಗೆ ವಾಸಿಸುವ ಸರ್ಕ್ಯುಲರ್ ರಸ್ತೆಯ 10 ರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ಅಧಿಕೃತ ನಿವಾಸದಲ್ಲಿ ಭಾನುವಾರ ಮೆಟ್ಟಿಲುಗಳಿಂದ ಬಿದ್ದಿದ್ದರು. ಇದರಿಂದಾಗಿ ಅವರ ಬಲ ಭುಜದ ಮೂಳೆ ಮುರಿದು, ಬೆನ್ನಿಗೆ ಗಾಯಗಳಾಗಿವೆ.
ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ಲಾಲು ಅವರ ಆರೋಗ್ಯ ಸ್ಥಿತಿ ಸೋಮವಾರ ಬೆಳಗಿನ ಜಾವ 3 ಗಂಟೆಗೆ ಗಂಭೀರವಾಗಿದ್ದು, ಅವರನ್ನು ಪಾಟ್ನಾದ ಪಾರಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲಾಲು ಆಸ್ಪತ್ರೆಗೆ ದಾಖಲಾಗಿರುವುದರಿಂದ ಅವರ ಕುಟುಂಬದಲ್ಲೂ ಹತಾಶೆ ಮೂಡಿದೆ. ಸೋಮವಾರ, ಅವರ ಇಬ್ಬರು ಮಕ್ಕಳಾದ ತೇಜ್ ಪ್ರತಾಪ್ ಮತ್ತು ತೇಜಸ್ವಿ ಪರಾಸ್ ದಿನವಿಡೀ ಆಸ್ಪತ್ರೆಯಲ್ಲಿಯೇ ಇದ್ದರು.
ಇದೇ ವೇಳೆ ಸಿಂಗಾಪುರದಲ್ಲಿ ನೆಲೆಸಿರುವ ಲಾಲು ಪುತ್ರಿ ರೋಹಿಣಿ ಆಚಾರ್ಯ ಕೂಡ ತಮ್ಮ ತಂದೆಯ ಆರೋಗ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದು, ಇಂದು ಅವರ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ರೋಹಿಣಿ ತನ್ನ ತಂದೆಯೊಂದಿಗೆ ವಿಡಿಯೋ ಕಾಲ್‌ನಲ್ಲಿ ನಡೆಸಿದ ಸಂಭಾಷಣೆಯ ಚಿತ್ರಗಳನ್ನು ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
