ಪಟನಾ(ಡಿ.30): ಅರುಣಾಚಲ ಪ್ರದೇಶದಲ್ಲಿ 6 ಮಂದಿ ಶಾಸಕರು ಜೆಡಿಯು ತೊರೆದು ಬಿಜೆಪಿಗೆ ಸೇರ್ಪಡೆ ಆದ ಬೆನ್ನಲ್ಲೇ ಬಿಜೆಪಿ ಮತ್ತು ಜೆಡಿಯು ನಡುವಿನ ಮನಸ್ತಾಪದ ಲಾಭ ಪಡೆಯಲು ಮುಂದಾಗಿರುವ ಆರ್‌ಜೆಡಿ, ನಿತೀಶ್‌ ಕುಮಾರ್‌ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಮರಳಲು ಆಹ್ವಾನ ನೀಡಿದೆ.

ಒಂದು ವೇಳೆ ತೇಜಸ್ವಿ ಯಾದವ್‌ಗೆ ಬಿಹಾರ ಮುಖ್ಯಮಂತ್ರಿ ಕುರ್ಚಿಯನ್ನು ಬಿಟ್ಟುಕೊಡಲು ಒಪ್ಪಿದರೆ, 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಆಗಿ ವಿಪಕ್ಷಗಳು ನಿತೀಶ್‌ ಕುಮಾರ್‌ಗೆ ಬೆಂಬಲ ನೀಡಲಿವೆ ಎಂದು ಆರ್‌ಜೆಡಿ ಆಫರ್‌ ನೀಡಿದೆ.

ಈ ಬಗ್ಗೆ ಮಾತನಾಡಿದ ಆರ್‌ಜೆಡಿಯ ಹಿರಿಯ ಮುಖಂಡ ಹಾಗೂ ಮಾಜಿ ಸ್ಪೀಕರ್‌ ಉದಯ್‌ ನಾರಾಯಣ್‌ ಚೌಧರಿ ಅವರು ನಿತೀಶ್‌ ಕುಮಾರ್‌ ಮುಂದೆ ಈ ಆಫರ್‌ ಮುಂದಿಟ್ಟಿದ್ದಾರೆ. ಆದರೆ, ಈ ಬಗ್ಗೆ ಜೆಡಿಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.