ಮಹಾರಾಷ್ಟ್ರ, ಪಂಜಾಬ್‌ ಕೊರೋನಾ ಸ್ಥಿತಿ ಗಂಭೀರ| ಕೇಸ್‌ ಭಾರೀ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರ ಕಳವಳ| ಸೋಂಕು ನಿಯಂತ್ರಣಕ್ಕೆ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ| ಸೋಂಕಿತರ ಸಾವಿನಲ್ಲಿ ಶೇ.88ರಷ್ಟುಪಾಲು 45 ವರ್ಷ ಮೇಲ್ಪಟ್ಟವರು| ಮಹಾರಾಷ್ಟ್ರ, ಪಂಜಾಬ್‌ ನಂತರದ ಸ್ಥಾನದಲ್ಲಿ ಗುಜರಾತ್‌, ಮಧ್ಯಪ್ರದೇಶ, ಕರ್ನಾಟಕ

ನವದೆಹಲಿ(ಮಾ.25): ದೇಶದಲ್ಲಿ ಅತಿ ಹೆಚ್ಚು ಕೇಸು ದಾಖಲಾಗುತ್ತಿರುವ ಮಹಾರಾಷ್ಟ್ರ ಮತ್ತು ಪಂಜಾಬ್‌ ಪರಿಸ್ಥಿತಿ ಗಂಭೀರವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಜೊತೆಗೆ ಗುಜರಾತ್‌, ಮಧ್ಯಪ್ರದೇಶ, ಕರ್ನಾಟಕ, ತಮಿಳುನಾಡು, ಛತ್ತೀಸ್‌ಗಢ ಮತ್ತು ಚಂಡೀಗಢ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿನ ಸೋಂಕಿನ ಪ್ರಮಾಣ ಕೂಡಾ ಕಳವಳಕಾರಿಯಾಗಿದೆ ಎಂದು ಹೇಳಿದೆ.

ಕೊರೋನಾ ಸ್ಥಿತಿಗತಿ ಕುರಿತು ಬುಧವಾರ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌, ‘ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಕೇಸು ದಾಖಲಾಗುತ್ತಿರುವ ರಾಜ್ಯಗಳ ಪೈಕಿ 2 ರಾಜ್ಯಗಳ ಸ್ಥಿತಿ ಗಂಭೀರವಾಗಿದೆ. ಮೊದಲನೆಯದ್ದಾಗಿ ಮಹಾರಾಷ್ಟ್ರದಲ್ಲಿ ಬುಧವಾರ 31,000ಕ್ಕೂ ಹೆಚ್ಚು ಕೇಸು ದಾಖಲಾಗಿದೆ. ಈ ಪೈಕಿ ಅತಿ ಹೆಚ್ಚು ಪ್ರಕರಣ ದಾಖಲಾದ ಟಾಪ್‌ 5 ಜಿಲ್ಲೆಗಳೆಂದರೆ ಪುಣೆ, ನಾಗಪುರ, ಮುಂಬೈ, ಠಾಣೆ ಮತ್ತು ನಾಸಿಕ್‌. ಇನ್ನು 2ನೇ ರಾಜ್ಯ ಪಂಜಾಬ್‌. ಅಲ್ಲಿನ ಜನಸಂಖ್ಯೆಗೆ ಹೋಲಿಸಿದರೆ ಅಲ್ಲಿ ದಾಖಲಾಗುತ್ತಿರುವ ಹೊಸ ಪ್ರಕರಣಗಳ ಪ್ರಮಾಣ ಅಧಿಕವಾಗಿದೆ. ಜಲಂಧರ್‌, ಎಸ್‌ಎಎಸ್‌ ನಗರ, ಲೂಧಿಯಾನ, ಪಟಿಯಾಲ, ಹೋಶಿಯಾರ್‌ಪುರ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಕೇಸು ದಾಖಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರವೇ ಎರಡೂ ಅಧಿಕಾರಿಗಳ ಜೊತೆ ಸಭೆ ನಡೆಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಬುಧವಾರ 31,855 ಹೊಸ ಪ್ರಕರಣ ದೃಢಪಟ್ಟಿದ್ದು, 95 ಜನರು ಸಾವನ್ನಪಿದ್ದಾರೆ. ಇನ್ನು ಪಂಜಾಬ್‌ನಲ್ಲಿ ಮಂಗಳವಾರ 2254 ಕೇಸುಗಳು ದೃಢಪಟ್ಟು 53 ಜನರು ಸಾವಿಗೀಡಾಗಿದ್ದರು.

ಯಾವ ರಾಜ್ಯದಲ್ಲಿ ಸೋಂಕಿಗೆ ತುತ್ತಾಗುವ ಸಾಧ್ಯತೆ ಅಧಿಕವಿರುವ ಜನರ ಪ್ರಮಾಣ ಹೆಚ್ಚಿದೆಯೋ ಅಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುವ ಜನರು ತಮ್ಮ ರಕ್ಷಣೆಗೆ ಒತ್ತು ನೀಡದೇ ಮತ್ತು ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸದೇ ಇರುತ್ತಾರೋ ಅಂಥವರಿಗೆ ಸೋಂಕು ತಗುಲುತ್ತಿದೆ ಎಂದು ಭೂಷಣ್‌ ಹೇಳಿದ್ದಾರೆ.

45ರ ಮೇಲ್ಪಟ್ಟವರ ಸಾವು ಅಧಿಕ:

ಇದೇ ವೇಳೆ ದೇಶದಲ್ಲಿ ಈವರೆಗೆ ಸಂಭವಿಸಿದ ಒಟ್ಟಾರೆ ಕೊರೋನಾ ಸೋಂಕಿತರ ಸಾವಿನಲ್ಲಿ ಶೇ.88ರಷ್ಟುಪಾಲು 45 ವರ್ಷ ಮೇಲ್ಪಟ್ಟವರೇ ಆಗಿದ್ದಾರೆ. ಈ ವಯೋವರ್ಗದಲ್ಲಿ ಸೋಂಕಿಗೆ ತುತ್ತಾದವರ ಸಾವಿನ ಪ್ರಮಾಣ ಶೇ.2.85ರಷ್ಟಿದೆ. ಈ ಕಾರಣದಿಂದಾಗಿ 45 ವರ್ಷ ಮೇಲ್ಪಟ್ಟಎಲ್ಲರಿಗೂ ಏ.1ರಿಂದ ಲಸಿಕೆ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.