ಒಂದು ಕಡೆ ಉತ್ತರ ಪ್ರದೇಶದ ಮಾಜಿ ಶಾಸಕರಾಗಿರುವ ವಿಜಯ್‌ ಮಿಶ್ರಾ ಹಲವು ಆರೋಪಗಳನ್ನು ಎದುರಿಸುತ್ತಿದ್ದು ಅವರು ಜೈಲಿನಲ್ಲಿದ್ದಾರೆ. ಇನ್ನೊಂದೆಡೆ, ಮಗನ ವಿರುದ್ಧ ಸಾಮೂಹಿಕ ಅತ್ಯಾಚಾರ ಆರೋಪವಿದ್ದು, ಅಅವರನ್ನು ಹುಡುಕಲು ಪೊಲೀಸರು ಲುಕ್‌ ಔಟ್‌ ನೋಟಿಸ್‌ ಜಾರಿಗೊಳಿಸಿದ್ದಾರೆ.

ಸಾಮೂಹಿಕ ಅತ್ಯಾಚಾರ ಮತ್ತು ವಂಚನೆ ಆರೋಪ ಎದುರಿಸುತ್ತಿರುವ ಉತ್ತರ ಪ್ರದೇಶದ ಮಾಜಿ ಶಾಸಕರ ಮಗನನ್ನು ಹುಡುಕಿ ಪೊಲೀಸರಿಗೆ ಹಿಡಿದುಕೊಟ್ಟರೆ ಅಥವಾ ಅವರ ಬಗ್ಗೆ ಮಾಹಿತಿ ನೀಡಿದರೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಯುಪಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಭದೋಹಿಯ ಗ್ಯಾನಪುರ ಕ್ಷೇತ್ರದಿಂದ ಮಾಜಿ ಶಾಸಕ ವಿಜಯ್ ಮಿಶ್ರಾ ಅವರ ಪುತ್ರ ವಿಷ್ಣು ಮಿಶ್ರಾ ಅವರು ಆಗಸ್ಟ್ 2020 ರಿಂದ ತಲೆಮರೆಸಿಕೊಂಡಿದ್ದಾರೆ ಎಂದೂ ಈ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

2020ರಲ್ಲೇ ಲುಕ್‌ ಔಟ್‌ ನೋಟಿಸ್‌ 
ಇನ್ನು, ಇವರನ್ನು ಹುಡುಕಲು ಪೊಲೀಸರು ಕೆಲ ವರ್ಷಗಳಿಂದ ಪ್ರಯತ್ನ ನಡೆಸುತ್ತಲೇ ಇದ್ದು, ಅವರು ಯಾವ ಅಧಿಕಾರಿಗಳ ಕೈಗೂ ಸಿಕ್ಕೇ ಇಲ್ಲವಂತೆ. ಇನ್ನು, ವಿಷ್ಣು ಮಿಶ್ರಾ ವಿದೇಶಕ್ಕೆ ಪರಾರಿಯಾಗದಂತೆ ಪೊಲೀಸರು ಈಗಾಗಲೇ ಲುಕ್ ಔಟ್ ನೋಟಿಸ್‌ ಹೊರಡಿಸಿದ್ದಾರೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. 2020ರ ಸೆಪ್ಟೆಂಬರ್‌ರಲ್ಲೇ ಈ ನೋಟಿಸ್‌ ಅನ್ನು ಹೊರಡಿಸಲಾಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. 

ಸಾಮೂಹಿಕ ಅತ್ಯಾಚಾರ ಮತ್ತು ವಂಚನೆಯಂತಹ ಗಂಭೀರ ಅಪರಾಧಗಳ ಆರೋಪವನ್ನು ಮಾಜಿ ಶಾಸಕನ ಪುತ್ರ ವಿಷ್ಣು ಮಿಶ್ರಾ ಎದುರಿಸುತ್ತಿದ್ದಾರೆ ಎಂದೂ ಉತ್ತರ ಪ್ರದೇಶದ ಭದೋಹಿಯ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಹೇಳಿದ್ದಾರೆ. ಅಲ್ಲದೆ, ಅವರನ್ನು ಹುಡುಕಿಕೊಟ್ಟವರಿಗೆ ಈ ಹಿಂದೆ 25 ಸಾವಿರ ರೂ. ಬಹುಮಾನ ಘೋಷಿಸಲಾಗಿತ್ತು. ಆದರೆ ಈಗ ಬಹುಮಾನದ ಮೊತ್ತವನ್ನು ಒಂದು ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದೂ ಹೇಳಿದರು.

ಯುಪಿಯ ಗೋಪಿಗಂಜ್ ಪೊಲೀಸ್ ಠಾಣೆಯಲ್ಲಿ ವಿಷ್ಣು ಮಿಶ್ರಾ ವಿರುದ್ಧ ಆರೋಪಗಳು ದಾಖಲಾಗಿವೆ. ಆದರೆ, ಅವರು ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದಾರೆ ಎಂಬ ಕಾರಣದಿಂದ ಈ ಹಿಂದೆ ಘೋಷಿಸಿದ್ದ ನಗದು ಬಹುಮಾನವನ್ನು ವಾರಾಣಸಿ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಅನಿಲ್‌ ಕುಮಾರ್ ತಿಳಿಸಿದ್ದಾರೆ.

ಜೈಲಿನಲ್ಲೇ ಇದ್ದಾರೆ ಮಾಜಿ ಶಾಸಕರು..!
ಸಾಮೂಹಿಕ ಅತ್ಯಾಚಾರ, ವಂಚನೆ ಆರೋಪಗಳ ಸಂಬಂಧ ಮಾಜಿ ಶಾಸಕರ ಪುತ್ರನಿಗಾಗಿ ಒಂದೆಡೆ ಪೊಲೀಸರು ಹುಡುಕಾಟ ನಡೆಸುತ್ತಿದ್ದರೆ, ಆರೋಪಿ ವಿಷ್ಣು ಮಿಶ್ರಾ ಅವರ ತಂದೆ ವಿಜಯ್‌ ಮಿಶ್ರಾ ಜೈಲಿನಲ್ಲೇ ಇದ್ದಾರೆ. ಆಸ್ತಿ ಕಬಳಿಕೆ, ವಂಚನೆ ಮತ್ತು ಕೊಲ್ಲುವುದಾಗಿ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ತಂದೆ ಜೈಲಿನ ಕಂಬಿ ಎಣಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ವಿಜಯ್ ಮಿಶ್ರಾ ವಿರುದ್ಧ ಅವರ ಸಂಬಂಧಿ ಕೃಷ್ಣ ಮೋಹನ್ ತಿವಾರಿ ಅವರು ಈ ಆರೋಪಗಳನ್ನು ಹೊರಿಸಿದ್ದರು.

ಆಗಸ್ಟ್ 14, 2020 ರಂದು ಮಧ್ಯಪ್ರದೇಶದ ಅಗರ್ ಜಿಲ್ಲೆಯಿಂದ ವಿಜಯ್‌ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯ್‌ ಸದ್ಯ ಉತ್ತರ ಪ್ರದೇಶದ ಆಗ್ರಾ ಜೈಲಿನಲ್ಲಿದ್ದರೆ, ಈ ಪ್ರಕರಣಗಳ ಮತ್ತೊಬ್ಬ ಆರೋಪಿ ಹಾಗೂ ವಿಜಯ್‌ ಮಿಶ್ರಾ ಪತ್ನಿ ರಾಮ್ ಲಲ್ಲಿ ಮಿಶ್ರಾ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ ಎಂದು ವರದಿಯಾಗಿದೆ. 

ಮಾಜಿ ಶಾಸಕರು ಜೈಲಿನಲ್ಲಿದ್ದರೂ, ಅವರ ಪುತ್ರರನ್ನು ಮಾತ್ರ ಇನ್ನೂ ಹುಡುಕಲು ಸಾಧ್ಯವಾಗದಿರುವುದು ಮಾತ್ರ ಪೊಲೀಸರಿಗೆ ತಲೆನೋವು ತಂದಿದೆ. ಈ ಹಿನ್ನೆಲೆ ಈಗ ಅವರನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ನೀಡೋದಾಗಿ ಘೋಷಿಸಿದ್ದಾರೆ. ಈಗಲಾದರೂ ಮಾಜಿ ಶಾಸಕರ ಪುತ್ರ ಹಾಗೂ ಸಾಮೂಹಿಕ ಅತ್ಯಾಚಾರದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತರುವ ವಿಷ್ಣು ಮಿಶ್ರಾ ಬಂಧನವಾಗ್ತಾರಾ ಎಂಬುದನ್ನು ಕಾದುನೋಡಬೇಕಾಗಿದೆ. 

ಈಗಾಗಲೇ ಅಪ್ಪ ಜೈಲಿನಲ್ಲಿದ್ದು, ಅವರ ಪುತ್ರನ ವಿರುದ್ಧವೂ ಆರೋಪ ಸಾಬೀತಾಗಿ ಜೈಲಿಗೆ ಹಾಕಿದರೆ, ಅಪ್ಪ - ಮಗ ಇಬ್ಬರೂ ಸಹ ಕಂಬಿ ಎಣಿಸುವಂತಾಗುತ್ತದೆ.