ನವದೆಹಲಿ (ಜ. 25):  ದೇಶಾದ್ಯಂತ ಆವರಿಸಿಕೊಂಡಿರುವ ಕೋವಿಡ್‌ ಮತ್ತು ಕೋವಿಡ್‌ ಮಾರ್ಗಸೂಚಿಗಳ ಅನ್ವಯ ಕಾರ್ಯಕ್ರಮ ಆಯೋಜನೆಯ ಅನಿವಾರ್ಯತೆ ಹಿನ್ನೆಲೆಯಲ್ಲಿ ದೆಹಲಿಯ ರಾಜಪಥದಲ್ಲಿ ನಡೆಯುವ ಪ್ರಸಕ್ತ ಸಾಲಿನ ಗಣರಾಜ್ಯೋತ್ಸವ ಸ್ವಲ್ಪ ವಿಭಿನ್ನವಾಗಿರಲಿದೆ. ಜೊತೆಗೆ ಈ ಬಾರಿ ಹಲವು ವಿಶೇಷತೆಗಳನ್ನೂ ಕಾಣಬಹುದು.

ಬೈಕ್‌ ಸ್ಟಂಟ್‌ ಇಲ್ಲ:

ಪರೇಡ್‌ ವೇಳೆ ಯೋಧರ ಬೈಕ್‌ ಸ್ಟಂಟ್‌ ಅತ್ಯಂತ ರೋಮಾಂಚಕ. ಆದರೆ ಈ ಬಾರಿಯ ಪರೇಡ್‌ನಿಂದ ಬೈಕ್‌ ಸ್ಟಂಟ್‌ ಕೈಬಿಡಲಾಗಿದೆ.

ಶೌರ್ಯ ಪುರಸ್ಕೃತರಿಲ್ಲ:

ಶೌರ್ಯಪ್ರಶಸ್ತಿ ಪುರಸ್ಕೃತ ಮಕ್ಕಳ ಪರೇಡ್‌ ಅನ್ನು ಈ ಬಾರಿ ಸುರಕ್ಷತೆಯ ಕಾರಣಕ್ಕಾಗಿ ರದ್ದುಗೊಳಿಸಲಾಗಿದೆ.

32 ಸ್ತಬ್ಧಚಿತ್ರ:

ಈ ಬಾರಿ ಒಟ್ಟು 32 ಸ್ತಬ್ಧಚಿತ್ರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಉ.ಪ್ರದೇಶದ ರಾಮಮಂದಿರ, ಕರ್ನಾಟಕದ ವಿಜಯನಗರ ಇತಿಹಾಸ ಸಾರುವ ಸ್ತಬ್ಧಚಿತ್ರಗಳಿವೆ.

ಮೊದಲ ಬಾರಿ ಲಡಾಖ್‌ ಸ್ತಬ್ಧಚಿತ್ರ:

2019ರಲ್ಲಿ ರಚನೆಯಾದ ಲಡಾಖ್‌ಗೆ ಈ ಬಾರಿ ಪರೇಡ್‌ನಲ್ಲಿ ತನ್ನ ಸಂಸ್ಕೃತಿ ಪ್ರದರ್ಶಿಸುವ ಸ್ತಬ್ಧಚಿತ್ರ ಪ್ರದರ್ಶನದ ಅವಕಾಶ ಸಿಕ್ಕಿದೆ. ಅದಕ್ಕೆ ಈ ಅವಕಾಶ ಸಿಕ್ಕಿದ್ದು ಇದೇ ಮೊದಲು.

ಕೋವಿಡ್‌:

ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆಯು ಕೋವಿಡ್‌ ಕುರಿತ ವಿನೂತನ, ವಿಶೇಷ ಸ್ತಬ್ಧಚಿತ್ರ ಪ್ರದರ್ಶಿಸಲಿದೆ.

ಪ್ರೇಕ್ಷಕರ ಸಂಖ್ಯೆ 1 ಲಕ್ಷದಷ್ಟು ಇಳಿಕೆ

ಪರೇಡ್‌ ವೀಕ್ಷಿಸಲು ಕನಿಷ್ಠ 1.25 ಲಕ್ಷ ಜನರಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ಪ್ರೇಕ್ಷಕರ ಸಂಖ್ಯೆಯನ್ನು 25000ಕ್ಕೆ ಸೀಮಿತಗೊಳಿಸಲಾಗಿದೆ.

ಕವಾಯತು ಇಳಿಕೆ:

ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸಲುವಾಗಿ ಈ ಬಾರಿ ಕವಾಯತು ನಡೆಸುವ ತಂಡಗಳ ಸಂಖ್ಯೆಯನ್ನು 144ರಿಂದ 96ಕ್ಕೆ ಇಳಿಸಲಾಗಿದೆ.

ಕೋವಿಡ್‌ ಪರೀಕ್ಷೆ ಕಡ್ಡಾಯ:

ಪಥ ಸಂಚಲನ ಸೇರಿ ಪರೇಡ್‌ನಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಕೋವಿಡ್‌ ಪರೀಕ್ಷೆಯ ನೆಗೆಟಿವ್‌ ವರದಿ ಕಡ್ಡಾಯಗೊಳಿಸಲಾಗಿದೆ.

ಪರೇಡ್‌ ಕಡಿತ:

ಪರೇಡ್‌ ನಡೆಯುವ ಸ್ಥಳವನ್ನೂ ಕಡಿತಗೊಳಿಸಲಾಗಿದೆ. ಕೆಂಪುಕೋಟೆಯ ಬದಲಾಗಿ ರಾಷ್ಟ್ರೀಯ ವಸ್ತುಸಂಗ್ರಹಾಲಯ ಬಳಿಯೇ ಪರೇಡ್‌ ಅಂತ್ಯವಾಗಲಿದೆ.

ಮೊದಲ ಬಾರಿ ಬಾಂಗ್ಲಾ ಸೇನೆ: ಪರೇಡ್‌ನಲ್ಲಿ ಈ ಬಾರಿ ಇದೇ ಮೊದಲ ಬಾರಿ ಬಾಂಗ್ಲಾದೇಶ ಸೇನೆಯ 122 ಯೋಧರು ಭಾಗಿಯಾಗುತ್ತಿದ್ದಾರೆ. 1971ರ ಬಾಂಗ್ಲಾದೇಶ ವಿಮೋಚನೆಯಲ್ಲಿ ನೆರವಾದ ಭಾರತಕ್ಕೆ ಕೃತಜ್ಞತೆ ಸಲ್ಲಿಸಲು ಬಾಂಗ್ಲಾ ತಂಡ ಭಾಗಿಯಾಗುತ್ತಿದೆ. ಈ ಹಿಂದೆ ಕೆಲವು ದೇಶಗಳ ಸೇನೆಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದವು

ಮುಖ್ಯ ಅತಿಥಿ ಇಲ್ಲ

ಕಳೆದ 55 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿದೇಶಿ ಮುಖ್ಯ ಅತಿಥಿಗಳಿಲ್ಲದೇ ಕಾರ್ಯಕ್ರಮ ನೆರವೇರುತ್ತಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಭಾರತ ಪ್ರವಾಸ ರದ್ದುಗೊಳಿಸಿದ್ದಾರೆ.

ಮಹಿಳಾ ಪೈಲಟ್‌ ಭಾಗಿ:

ವಾಯುಪಡೆಯ ಮೊದಲ ಯುದ್ಧವಿಮಾನ ಪೈಲಟ್‌ ಭಾವನಾ ಕಾಂತ್‌, ಭಾರತೀಯ ವಾಯುಪಡೆಯ ಸ್ತಬ್ಧಚಿತ್ರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ರಫೇಲ್‌ ಪ್ರದರ್ಶನ:

ಕಳೆದ ವರ್ಷ ಭಾರತೀಯ ವಾಯುಪಡೆಗೆ ಸೇರ್ಪಡೆಯಾದ ಫ್ರಾನ್ಸ್‌ನ ರಫೇಲ್‌ ಯುದ್ಧ ವಿಮಾನಗಳು ಪರೇಡ್‌ ವೇಳೆ ಪ್ರದರ್ಶನಗೊಳ್ಳಲಿವೆ.

ಅಂಡಮಾನ್‌ ಸೇನೆ:

ಅಂಡಮಾನ್‌ನಲ್ಲಿ ನಿಯೋಜಿತ ಸೇನೆಯ ತುಕಡಿಗೆ ಇದೇ ಮೊದಲ ಬಾರಿಗೆ ಪರೇಡ್‌ನಲ್ಲಿ ಪ್ರದರ್ಶನದ ಅವಕಾಶ ನೀಡಲಾಗಿದೆ.

ವಾಯುಬಲ ಪ್ರದರ್ಶನ:

ಚೀನಾ ಸಂಘರ್ಷದ ಬೆನ್ನಲ್ಲೇ ವಾಯುಪಡೆಯ ಬಲಪ್ರದರ್ಶನದ ಭಾಗವಾಗಿ 42 ವಿಮಾನಗಳು ನಾನಾ ಕಸರತ್ತು ಪ್ರದರ್ಶಿಸಲಿವೆ.