Asianet Suvarna News Asianet Suvarna News

Jodhpur Violence ರಂಜಾನ್‌ ವೇಳೆ ಕೇಸರಿ ಧ್ವಜ ತೆಗೆದು ಈದ್‌ ಧ್ವಜ ಹಾಕಿದ್ದಕ್ಕೆ ಕಿಡಿ, ಜೋಧಪುರದಲ್ಲಿ ಕೋಮುಗಲಭೆ!

  • ಜೋಧಪುರದಲ್ಲಿ ಕೋಮುಗಲಭೆ, ಕಲ್ಲತೂರಾಟ, ಕರ್ಫ್ಯೂ
  • ರಂಜಾನ್‌ ವೇಳೆ ಕೇಸರಿ ಧ್ವಜ ತೆಗೆದು ಈದ್‌ ಧ್ವಜ ಹಾಕಿದ್ದಕ್ಕೆ ಕಿಡಿ
  • ಕಲ್ಲುತೂರಾಟ, ಪೊಲೀಸರಿಂದ ಲಾಠಿಪ್ರಹಾರ, 20 ಜನಕ್ಕೆ ಗಾಯ
Replacing Bhagwa flag with an Islamic flag Curfew imposed in Jodhpur after communal violence ckm
Author
Bengaluru, First Published May 4, 2022, 2:02 AM IST | Last Updated May 4, 2022, 2:02 AM IST

ಜೈಪುರ(ಮೇ.04): ರಂಜಾನ್‌ ಮೆರವಣಿಗೆಯ ವೇಳೆ ರಾಜಸ್ಥಾನದ ಜೋಧ್‌ಪುರದಲ್ಲಿ ಕೋಮುಘರ್ಷಣೆ ಸಂಭವಿಸಿದ್ದು, ಕಲ್ಲು ತೂರಾಟದಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಲ್ಪಸಂಖ್ಯಾತರು ಕೇಸರಿ ಧ್ವಜ ತೆಗೆದು ಈದ್‌ ಧ್ವಜ ಅಳವಡಿಸಿದ್ದಕ್ಕೆ ಬಲಪಂಥೀಯರು ಆಕ್ಷೇಪಿಸಿದಾಗ ಗಲಭೆ ಉಂಟಾಗಿದೆ ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ತವರಾದ ಜೋಧ್‌ಪುರದಲ್ಲೇ ಈ ಘಟನೆ ನಡೆದಿರುವುದು ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.

ಈ ನಡುವೆ ನಗರದ 10 ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮೇ 4ರ ಮಧ್ಯರಾತ್ರಿವರೆಗೆ ಕರ್ಫ್ಯೂ ಹೇರಲಾಗಿದ್ದು, ವದಂತಿ ಹರಡುವುದನ್ನು ತಪ್ಪಿಸಲು ಮೊಬೈಲ್‌ ಇಂಟರ್ನೆಟ್‌ ಸ್ಥಗಿತಗೊಳಿಸಲಾಗಿದೆ. ಪ್ರಕರಣ ಸಂಬಂಧ 50 ಜನರನ್ನು ಬಂಧಿಸಲಾಗಿದೆ. ಸದ್ಯ ಪರಿಸ್ಥಿತಿ ಪೂರ್ಣ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತ ಹುಬ್ಭಳ್ಳಿ ಗಲಭೆಕೋರರಿಗೆ ಜಾಮೀನು ವ್ಯವಸ್ಥೆ, ಕುಟುಂಬಸ್ಥರಿಗೆ ಆರ್ಥಿಕ ನೆರವು!

ಏನಾಯ್ತು?: ಸೋಮವಾರ ರಾತ್ರಿ ಜೋಧ್‌ಪುರದ ಜಾಲೋರಿ ಗೇಟ್‌ ಸರ್ಕಲ್‌ನಲ್ಲಿ ಸ್ವಾತಂತ್ರ್ಯ ಯೋಧ ಬಾಲ್‌ಮುಕುಂದ್‌ ಬಿಸ್ಸಾ ಪ್ರತಿಮೆಯ ಸುತ್ತ ಅಲ್ಪಸಂಖ್ಯಾತರು ಈದ್‌ ಧ್ವಜ ಕಟ್ಟುತ್ತಿದ್ದರು. ಈ ವೇಳೆ ಅಲ್ಲಿ ಮೊದಲೇ ಕಟ್ಟಿದ್ದ ಪರಶುರಾಮ ಜಯಂತಿಯ ಕೇಸರಿ ಧ್ವಜ ನಾಪತ್ತೆಯಾಗಿದೆ ಎಂದು ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಆಕ್ಷೇಪಿಸಿದರು. ಆಗ ಅಲ್ಪಸಂಖ್ಯಾತರು ಕಲ್ಲು ತೂರಾಟ ಆರಂಭಿಸಿದರು. ನಂತರ ಪೊಲೀಸರು ಸ್ಥಳಕ್ಕೆ ತೆರಳಿ ಘರ್ಷಣೆ ನಿಯಂತ್ರಿಸಿದರು. ನಂತರ ಮಂಗಳವಾರ ಬೆಳಿಗ್ಗೆ ಈದ್ಗಾ ಮೈದಾನದಲ್ಲಿ ಪ್ರಾರ್ಥನೆಯ ಬಳಿಕ ಮತ್ತೆ ಘರ್ಷಣೆ ಆರಂಭವಾಗಿ, ಕಲ್ಲು ತೂರಾಟ ನಡೆಯಿತು. ಹಲವು ಜನರು ಗಾಯಗೊಂಡು, ಸಾಕಷ್ಟುವಾಹನ ಮತ್ತು ಮನೆಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ತುರ್ತು ಸಭೆ ನಡೆಸಿ ಪರಿಸ್ಥಿತಿ ನಿಯಂತ್ರಿಸಲು ಉನ್ನತ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಮೂವರು ಪಂಜಾಬ್ ಪೊಲೀಸ್‌ ಅಧಿಕಾರಿಗಳ ಎತ್ತಂಗಡಿ

ಜಹಾಂಗೀರ್‌ಪುರಿ ಹಿಂಸೆ: ಪ್ರಮುಖ ಆರೋಪಿ ಫರೀದ್‌ ಬಂಗಾಳದಲ್ಲಿ ಸೆರೆ
ದೆಹಲಿಯ ಜಹಾಂಗೀರ್‌ಪುರದಲ್ಲಿ ಇತ್ತೀಚೆಗೆ ಹನುಮ ಜಯಂತಿ ವೇಳೆ ನಡೆದ ಹಿಂಸಾಚಾರದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಫರೀದ್‌ ಅಲಿಯಾಸ್‌ ನೀತು ಎಂಬಾತನನ್ನು ದೆಹಲಿ ಪೊಲೀಸರು ಗುರುವಾರ ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ.

ಈತ ಕೋಮುಗಲಭೆಯಲ್ಲಿ ಅತ್ಯಂತ ಸಕ್ರಿಯನಾಗಿ ತೊಡಗಿಸಿಕೊಂಡಿದ್ದ ಮತ್ತು ಪ್ರಮುಖ ಪಾತ್ರ ವಹಿಸಿದ್ದ. ಬಂಗಾಳದಲ್ಲಿ ನಿಯೋಜಿಸಲಾಗಿರುವ ದಿಲ್ಲಿ ಪೊಲೀಸರ ವಿಶೇಷ ತಂಡ ಫರೀದ್‌ನನ್ನು ಆತನ ಚಿಕ್ಕಮ್ಮನ ಮನೆಯಲ್ಲಿ ಬಂಧಿಸಿವೆ. ಗಲಭೆ ನಂತರ ಈತ ತಲೆಮರೆಸಿಕೊಂಡಿದ್ದ. ಅಲ್ಲಿಂದ ಇಲ್ಲಿಯವರೆಗೂ ಜಾಗಗಳನ್ನು ಬದಲಾಯಿಸುತ್ತಲೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಫಾರಿದ್‌ನ ವಿರುದ್ಧ ದರೋಡೆ, ಕಳ್ಳತನ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ 2010ರಿಂದ 6 ಪ್ರಕರಣಗಳು ದಾಖಲಾಗಿವೆ.

ಏ.16 ಹನುಮ ಜಯಂತಿಯಂದು ಜಹಾಂಗೀರ್‌ಪುರಿಯಲ್ಲಿ 2 ಸಮುದಾಯಗಳ ನಡುವೆ ನಡೆದ ಕೋಮುಗಲಭೆಯಲ್ಲಿ 8 ಪೊಲೀಸ್‌ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿ ಗಾಯಗೊಂಡಿದ್ದರು. ಘರ್ಷಣೆಯ ಸಮಯದಲ್ಲಿ ಕಲ್ಲುತೂರಾಟ ನಡೆಸಲಾಗಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.

Latest Videos
Follow Us:
Download App:
  • android
  • ios