ದೇಶಾದ್ಯಂತ ಕೊರೋನಾ ಭೀತಿ| ಪ್ರಾಣ ಬಲಿ ಪಡೆದುಕೊಳ್ಳುತ್ತಿದೆ ಮಹಾಮಾರಿ| ಸೋಂಕು ನಿವಾರಿಸಲು ಸರ್ಕಾರ ಹರಸಾಹಸ| ರೆಮ್‌ಡೆಸಿವಿರ್ ಮ್ಯಾಜಿಕ್‌ ಬುಲೆಟ್‌ ಅಲ್ಲ ಎಂದ ಏಮ್ಸ್ ನಿರ್ದೇಶಕ

ನವದೆಹಲಿ(ಏ.20): ಕೊರೋನಾ ಸೋಂಕಿನಿಂದ ದೇಶದ ಮೂಲೆ ಮೂಲೆಯಲ್ಲೂ ಹಾಹಾಕಾರ ಮನೆ ಮಾಡಿದೆ. ಹೀಗಿರುವಾಗಲೇ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಶಾಕಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾರೆ. ಹೊಸ ಅಧ್ಯಯನದಲ್ಲಿ ಕೊರೋನಾ ಗಾಳಿಯಿಂದ ಹೆಚ್ಚು ಹರಡುತ್ತದೆ ಎಂಬುವುದು ಬಯಲಾಗಿದೆ. ಹೀಗಾಗಿ ಮಾಸ್ಕ್ ತಪ್ಪದೇ ಧರಿಸಿ, ಸಾಮಾಜಿಕ ಅಂತರ ಕಾಪಾಡಲು ಮರೆಯದಿರಿ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ರೆಮ್‌ಡೆಸಿವಿರ್‌ ಬಗ್ಗೆಯೂ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. 

ರೆಮ್‌ಡೆಸಿವಿರ್‌ ಕೊರೋನಾ ನಿಯಂತ್ರಿಸುವ ಮ್ಯಾಜಿಕ್‌ ಬುಲೆಟ್‌ ಎಂದು ಪರಿಗಣಿಸಬಾರದು. ಈ ಔಷಧಿಯ ಬಳಕೆಯಿಂದ ಕರೋನಾ ರೋಗಿಗಳ ಸಾವಿನ ಪ್ರಮಾಣ ಇಳಿಕೆಯಾಗಿರುವ ಕುರಿತು ಇದುವರೆಗೆ ಯಾವುದೇ ಅಧಿಕೃತ ಪುರಾವೆಗಳಿಲ್ಲ. ಸೋಂಕಿನ ಆರಂಭಿಕ ಹಂತಗಳಲ್ಲಿ ಈ ಔಷಧಿಯನ್ನು ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ಡಾ. ಗುಲೇರಿಯಾ ಅಭಿಪ್ರಾಯವಾಗಿದೆ.

ಮನೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ರೆಮ್‌ಡೆಸಿವಿರ್‌ ನೀಡಬೇಡಿ

ಈ ಬಗ್ಗೆ ಮತ್ತಷ್ಟು ಮಾಹಿತಿ ನೀಡಿರುವ ಡಾ. ಗುಲೇರಿಯಾ ರೆಮ್‌ಡೆಸಿವಿರ್ ಔಷಧಿಯನ್ನು ಕೇವಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಮಾತ್ರ ನೀಡಬೇಕು, ಅದೂ ಕೂಡ ಆ ರೋಗಿಯ ಲಕ್ಷಣ ಹಾಗೂ ಹಂತ ಆಧರಿಸಿ ನೀಡಬೇಕು. ಆಕ್ಸಿಜನ್ ಸ್ಯಾಚ್ಯುರೇಶನ್ ಮಟ್ಟ ಕೆಳಗೆ ಜಾರುತ್ತಿರುವ ಮತ್ತು ಶ್ವಸಕೋಶದಲ್ಲಿ ಸೋಂಕಿನ ಅಂಶ ಇರುವ ಕುರಿತು ದೃಢಪಟ್ಟ ರೋಗಿಗಳಿಗೆ ಮಾತ್ರ ಈ ಔಷಧಿಯನ್ನು ವೈದ್ಯರ ಸಲಹೆ ಮೇರೆಗೆ ನೀಡಬೇಕು ಎಂದಿದ್ದಾರೆ.