ರೀಲ್ಸ್ ಮಾಡುವ ವೇಳೆ ಚಲಿಸುವ ರೈಲಿಗೆ ಸಿಲುಕಿ 14 ವರ್ಷದ ಬಾಲಕ ಸಾವು: ಭಯಾನಕ ವೀಡಿಯೋ ವೈರಲ್
ಇಲ್ಲೊಬ್ಬ ಹುಡುಗ ರೀಲ್ಸ್ ಮಾಡಲು ಹೋಗಿ ಚಲಿಸುತ್ತಿರುವ ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದು, ಈ ಆಘಾತಕಾರಿ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರಪ್ರದೇಶ: ಇತ್ತೀಚೆಗೆ ಪ್ರಾಣಾಪಾಯವನ್ನು ಲೆಕ್ಕಿಸದೇ ಅಪಾಯಕಾರಿ ಸ್ಥಳಗಳಲ್ಲಿ ವೀಡಿಯೋ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಳ್ಳುವ ಹದಿಹರೆಯದವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ಸ್ಟಾಗ್ರಾಮ್, ಯೂಟ್ಯೂಬ್, ಟೆಲಿಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೀಡಿಯೋ ವೈರಲ್ ಆಗಬೇಕೆಂದು ಬಯಸುವ ಯುವ ಸಮೂಹ ಇದಕ್ಕಾಗಿ ಪ್ರಾಣಾಪಾಯವನ್ನು ಲೆಕ್ಕಿಸದೇ ಸಾಹಸ ಮಾಡಲು ಮುಂದಾಗುತ್ತಿದ್ದು, ಜೀವ ಕಳೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ ಹುಡುಗ ರೀಲ್ಸ್ ಮಾಡಲು ಹೋಗಿ ಚಲಿಸುತ್ತಿರುವ ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದು, ಈ ಆಘಾತಕಾರಿ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರಪ್ರದೇಶದ ಬರಬಂಕಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಬಾಲಕನ ಸಾವಿನ ಕೊನೆಕ್ಷಣ ಕ್ಯಾಮರಾದಲ್ಲಿ ಸೆರೆ ಆಗಿದೆ. ಮೃತ ಬಾಲಕನ್ನು 14 ವರ್ಷದ ಫರ್ಮಾನ್ (Farman) ಎಂದು ಗುರುತಿಸಲಾಗಿದೆ. ಈತ ತನ್ನ ರೀಲ್ಸ್ ಹಿನ್ನೆಲೆಯಲ್ಲಿ ಚಲಿಸುವ ರೈಲು ಕಾಣಿಸಬೇಕು ಎನ್ನುವ ದೃಷ್ಟಿಯಿಂದ ಟ್ರ್ಯಾಕ್ ಪಕ್ಕದಲ್ಲಿ ನಿಂತು ರೀಲ್ಸ್ (Reels) ಮಾಡುವಾಗ ಈ ಆಘಾತಕಾರಿ ಘಟನೆ ನಡೆದಿದೆ. ಟ್ರಾಕ್‌ಗೆ ಅತೀ ಸಮೀಪದಲ್ಲಿದ್ದ ಈತನನ್ನು ರೈಲು ಗುದ್ದಿಕೊಂಡು ಹೋಗಿದ್ದು, ಬಾಲಕ ಸಾವನ್ನಪ್ಪಿದ್ದಾನೆ.
ಮ್ಯಾಚ್ ನೋಡಲು ಮೊಸಳೆಯೊಂದಿಗೆ ಸ್ಟೇಡಿಯಂಗೆ ಬಂದ ಅಭಿಮಾನಿ: ದಂಗಾದ ಭದ್ರತಾ ಸಿಬ್ಬಂದಿ
ರೈಲು ಗುದ್ದಿ ಗಂಭೀರ ಗಾಯಗೊಂಡ ಬಾಲಕನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಆಸ್ಪತ್ರೆಗೆ ಬರುವ ವೇಳೆಯೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಅಪಾಯವನ್ನು ಕಡೆಗಣಿಸಿ ಸಾಹಸ ಮಾಡಲು ಮುಂದಾದ ಬಾಲಕನ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ. ಈತನ ಕೊನೆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (social Media) ವೈರಲ್ ಆಗಿದೆ. ಆದರೆ ಇದನ್ನು ನೋಡಲು ಬಾಲಕನೇ ಜೀವಂತವಿಲ್ಲ,
ವೈರಲ್ ಆಗಿರುವ ವೀಡಿಯೋದಲ್ಲಿ ಕೆಂಪು ಬಣ್ಣದ ಶರ್ಟ್ ಜೀನ್ಸ್ ಪ್ಯಾಂಟ್ ಧರಿಸಿರುವ ಬಾಲಕ ರೈಲ್ವೆ ಟ್ರಾಕ್‌ನ ಅತೀ ಸಮೀಪದಲ್ಲಿ ನಡೆದು ಹೋಗುತ್ತಿದ್ದು, ಈ ವೇಳೆ ರೈಲು ಬಂದಿದ್ದು, ಆತನಿಗೆ ತಾಗಿಕೊಂಡೆ ಮುಂದೆ ಸಾಗಿದೆ. ಪರಿಣಾಮ ಬಾಲಕ ಸ್ವಲ್ಪ ದೂರ ಹಾರಿ ಟ್ರ್ಯಾಕ್ ಪಕ್ಕದಲ್ಲಿ ಬಿದ್ದಿದ್ದಾನೆ. ಈ ವೀಡಿಯೋವನ್ನು ಮೃತ ಬಾಲಕನ ಸ್ನೇಹಿತ ಮೊಬೈಲ್ ಕ್ಯಾಮರಾದಲ್ಲಿ ಶೂಟ್ ಮಾಡ್ತಿದ್ದ. ಘಟನೆಯ ಬಳಿಕ ಆತ ಆಘಾತಕ್ಕೀಡಾಗಿದ್ದಾನೆ.
ಪ್ರೀತಿ ತಿರಸ್ಕರಿಸಿದ ಸಹೋದ್ಯೋಗಿಯ ಕೊಂದು 2 ವರ್ಷ ಕತೆ ಕಟ್ಟಿದ ವಿವಾಹಿತ ಪೊಲೀಸ್
ಮೃತ ಬಾಲಕ ಫರ್ಮಾನ್, ಉತ್ತರಪ್ರದೇಶದ ಜಹಾಂಗೀರ್‌ಬಾದ್‌ನ ತೇರಾ ದೌಲತ್‌ಪುರ ನಿವಾಸಿಯಾಗಿದ್ದ ಮುನ್ನಾ ಎಂಬುವವರ ಪುತ್ರ. ಘಟನೆ ನಡೆಯುವ ವೇಳೆ ಈತನೊಂದಿಗೆ ಸ್ನೇಹಿತರಾದ ನದೀರ್, ಶೋಯೆಬ್, ಸಮೀರ್ ಎಂಬುವವರು ಕೂಡ ಅಲ್ಲೇ ಇದ್ದರು. ಕಳೆದ ವರ್ಷವೂ ಹೈದರಾಬಾದ್‌ನಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿತ್ತು. ಮೊಹಮ್ಮದ್ ಸರ್ಫರಾಜ್ ಎಂಬ 16 ವರ್ಷದ ತರುಣ ರೀಲ್ಸ್ ಮಾಡುತ್ತಿದ್ದ ವೇಳೆ ರೈಲು ಗುದ್ದಿ ಸಾವನ್ನಪ್ಪಿದ್ದ.