Asianet Suvarna News Asianet Suvarna News

ಕೊರೋನಾ, ಚೇತರಿಸಿಕೊಂಡವರಲ್ಲಿ ಹೊಸ ಸಮಸ್ಯೆ: ಗುದನಾಳದಲ್ಲಿ ರಕ್ತಸ್ರಾವ!

* ಸಿವಿಎಂ ಸೋಂಕು: ದಿಲ್ಲಿಯಲ್ಲಿ ಮೊದಲ ಬಾರಿ ಹೊಸ ಸಮಸ್ಯೆ ಪತ್ತೆ

* ಕೋವಿಡ್‌ ಚೇತರಿಕೆ ನಂತರ ಗುದನಾಳದಲ್ಲಿ ರಕ್ತಸ್ರಾವ

* ಗಂಗಾರಾಂ ಆಸ್ಪತ್ರೆಯಲ್ಲಿ 5 ರೋಗಿಗಳು ದಾಖಲು, ಒಬ್ಬನ ಸಾವು

Rectal bleeding reported in 5 Covid 19 patients in Delhi one dead pod
Author
Bangalore, First Published Jun 30, 2021, 7:50 AM IST

ನವದೆಹಲಿ(ಜೂ.30): ಕೋವಿಡ್‌ನಿಂದ ಬಳಲುತ್ತಿರುವ ಮತ್ತು ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಈಗಾಗಲೇ ಕಾಡುತ್ತಿದ್ದ ಸಮಸ್ಯೆಗಳ ಜೊತೆಗೆ ಇದೀಗ ಸಿಎಂವಿ (ಸೈಟೋಮೆಗಾಲೊವೈರಸ್‌) ಸಂಬಂಧಿತ ಗುದನಾಳದ ರಕ್ತಸ್ರಾವದ ಸಮಸ್ಯೆ ಕಾಣಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ದೆಹಲಿಯ ಶ್ರೀ ಗಂಗಾರಾಮ್‌ ಆಸ್ಪತ್ರೆಗೆ ದಾಖಲಾಗಿದ್ದ 5 ಜನರಲ್ಲಿ ಈ ರೀತಿಯ ಗುದನಾಳದಲ್ಲಿ ರಕ್ತಸ್ರಾವದ ಸಮಸ್ಯೆ ಕಾಣಿಸಿಕೊಂಡಿದ್ದು, ಈ ಪೈಕಿ ಓರ್ವ ರೋಗಿ ಸಾವನ್ನಪ್ಪಿದ್ದಾನೆ. ಭಾರತದಲ್ಲಿ ಕೋವಿಡ್‌ ಸೋಂಕಿತರಲ್ಲಿ ಈ ಸಮಸ್ಯೆ ಕಾಣಿಸಿಕೊಂಡ ಮೊದಲ ಪ್ರಕರಣಗಳಿವು ಎಂದು ವೈದ್ಯರು ತಿಳಿಸಿದ್ದಾರೆ.

ಮುಖ್ಯವಾಗಿ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಜೊತೆಗೆ ಕೋವಿಡ್‌ನಿಂದಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದು ಮತ್ತು ಕೋವಿಡ್‌ಗೆ ನೀಡಿರುವ ಚಿಕಿತ್ಸೆಯಿಂದಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು ಕೂಡಾ ಈ ಸಮಸ್ಯೆ ಕಾಣಿಸಿಕೊಳ್ಳಲು ಕಾರಣವಾಗಿರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ.

ಏನಿದು ಸಮಸ್ಯೆ?:

ಭಾರತದಲ್ಲಿ ಶೇ.80-90ರಷ್ಟುಜನರಲ್ಲಿ ಈ ‘ಸಿಎಂವಿ ಸೋಂಕು’ ಯಾವುದೇ ರೋಗಲಕ್ಷಣ ಇಲ್ಲದ ರೀತಿಯಲ್ಲಿ ಇರುತ್ತದೆ. ಆದರೆ ನಮ್ಮ ದೇಹದ ರೋಗನಿರೋಧಕ ಶಕ್ತಿಯು ಈ ಸೋಂಕು ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದಂತೆ ತಡೆಗಟ್ಟುತ್ತಿರುತ್ತದೆ. ಸಾಮಾನ್ಯವಾಗಿ ಅಂಗ ಕಸಿ ನಂತರ, ಕ್ಯಾನ್ಸರ್‌, ಏಡ್ಸ್‌ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವ ಕಾರಣ ಅವರಲ್ಲಿ ಸಿಎಂವಿ ಸೋಂಕು ತನ್ನ ಪರಿಣಾಮ ಆರಂಭಿಸಿ ಭಾರೀ ಹೊಟ್ಟೆನೋವು ಮತ್ತು ಮಲ ವಿಸರ್ಜನೆ ವೇಳೆ ಗುದನಾಳದಲ್ಲಿ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಕೊರೋನಾ ಸೋಂಕಿತರಲ್ಲೂ ಈ ಸಮಸ್ಯೆ ಕಾಣಿಸಿಕೊಂಡಿದೆ.

ಯಾವಾಗ ಪತ್ತೆ?:

ಕೋವಿಡ್‌ ಸೋಂಕಿಗೆ ತುತ್ತಾಗಿ 20-30 ದಿನಗಳ ಬಳಿಕ 5 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಇವರೆಲ್ಲಾ 30-70ರ ವಯೋಮಾನದವರು. ಈ ಪೈಕಿ ಇಬ್ಬರಲ್ಲಿ ಭಾರೀ ಪ್ರಮಾಣದ ರಕ್ತಸ್ರಾವ ಕಾಣಿಸಿಕೊಂಡಿತ್ತು. ಈ ಪೈಕಿ ಒಬ್ಬರಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಿ ಬಲಭಾಗದಲ್ಲಿರುವ ಕೋಲನ್‌ ತೆಗೆದುಹಾಕುವ ಮೂಲಕ ಜೀವ ಉಳಿಸಲಾಯಿತು. ಆದರೆ ಇನ್ನೊಬ್ಬ ವ್ಯಕ್ತಿ ಭಾರೀ ರಕ್ತಸ್ರಾವ ಮತ್ತು ಸೋಂಕಿನಿಂದಾಗಿ ಹೃದಯದ ಸಮಸ್ಯೆಗೆ ತುತ್ತಾಗಿ ಸಾವನ್ನಪ್ಪಿದರು. ಉಳಿದ ಮೂವರಿಗೆ ಆ್ಯಂಟಿವೈರಲ್‌ ಥೆರಪಿ ನೀಡುವ ಮೂಲಕ ಗುಣ ಮಾಡಲಾಯಿತು. ಸೋಂಕು ಪತ್ತೆ ಮತ್ತು ಕೂಡಲೇ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಇಂಥ ರೋಗಿಗಳ ಜೀವ ಕಾಪಾಡಬಹುದು ಎಂದು ಗಂಗಾರಾಮ್‌ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಸೋಂಕಿಗೆ ಕಾರಣ ಏನು?:

ಕೋವಿಡ್‌ನಿಂದಾಗಿ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಕುಂದುತ್ತದೆ. ಬಳಿಕ ಕೋವಿಡ್‌ಗೆ ನೀಡುವ ಚಿಕಿತ್ಸೆಯಿಂದಾಗಿ ಅವರಲ್ಲಿ ರೋಗ ನಿರೋಧಕ ಶಕ್ತಿ ಇನ್ನಷ್ಟುಕುಂಠಿತವಾಗುತ್ತದೆ. ಇಂಥ ಸಂದರ್ಭದಲ್ಲಿ ಸಿಎಂವಿ ಸೋಂಕು ಸಕ್ರಿಯವಾಗಿ ನಾನಾ ರೀತಿಯ ಸಮಸ್ಯೆ ಉಂಟು ಮಾಡುತ್ತದೆ. ಸಾಮಾನ್ಯ ವ್ಯಕ್ತಿಗಳಲ್ಲಿ ಲಿಂಫೋಸೈಟ್ಸ್‌ (ಒಂದು ರೀತಿಯ ಬಿಳಿಯ ರಕ್ತಕಣಗಳು) ಪ್ರಮಾಣ ಶೇ.20-40ರಷ್ಟಿದ್ದರೆ, ಈ ಸೋಂಕಿಗೆ ತುತ್ತಾದ 5 ರೋಗಿಗಳಲ್ಲಿ ಲಿಂಫೋಸೈಟ್ಸ್‌ ಪ್ರಮಾಣ ಶೇ.6-10ಕ್ಕೆ ಇಳಿದಿತ್ತು.

ಏನಿದು ಹೊಸ ಸಮಸ್ಯೆ?

- ಭಾರತದ ಶೇ.80-90ರಷ್ಟುಜನರಲ್ಲಿ ಸಿವಿಎಂ ಸೋಂಕು ಗುಪ್ತವಾಗಿರುತ್ತದೆ

- ಕೋವಿಡ್‌ನಿಂದ ರೋಗನಿರೋಧಕ ಶಕ್ತಿ ಕಡಿಮೆಯಾದರೆ ಇದು ಸಕ್ರಿಯವಾಗುತ್ತದೆ

- ಆಗ ರೋಗಿಯ ಗುದನಾಳದಲ್ಲಿ ರಕ್ತಸ್ರಾವದ ಸಮಸ್ಯೆ ಕಾಣಿಸಿಕೊಳ್ಳಬಹುದು

- ಸಾಮಾನ್ಯವಾಗಿ ಅಂಗಕಸಿ, ಕ್ಯಾನ್ಸರ್‌, ಏಡ್ಸ್‌ ರೋಗಿಗಳಲ್ಲಿ ಈ ಸಮಸ್ಯೆ ಹೆಚ್ಚು

- ಈಗ ಕೋವಿಡ್‌ ರೋಗಿಗಳಲ್ಲೂ ಈ ಸಮಸ್ಯೆಯ ಮೊದಲ ಪ್ರಕರಣಗಳು ಪತ್ತೆ

- ಮೊದಲೇ ಸೋಂಕು ಪತ್ತೆಯಾಗಿ, ಸರಿಯಾದ ಚಿಕಿತ್ಸೆ ಲಭಿಸಿದರೆ ರೋಗಿ ಪಾರು

Follow Us:
Download App:
  • android
  • ios