ಪತ್ನಿ ಫೋನ್ ಮೇಲೆ ಕಣ್ಣುಹಾಕಿದರೆ ಜೋಕೆ, ಅನುಮತಿ ಇಲ್ಲದೇ ಕಾಲ್ ರೆಕಾರ್ಡ್ ಮಾಡಿದರೆ ಶಿಕ್ಷೆ!
ಪತ್ನಿ ಮೇಲೆ ಅನುಮಾನ ಇದೆ, ಫೋನಲ್ಲಿ ಇಷ್ಟೊಂದು ಏನ್ ಮಾತಾಡ್ತಾಳೆ, ಯಾರಲ್ಲಿ ಮಾತಾಡ್ತಾಳೆ ಎಂದು ಫೋನ್ ಕಾಲ್ ರೆಕಾರ್ಡ್ ಮಾಡುವ ಹುಚ್ಚು ಸಾಹಸ ಮಾಡಿದರೆ ಅಪಾಯ ತಪ್ಪಿದ್ದಲ್ಲ. ಇದು ನಿಯಮಕ್ಕೆ ವಿರುದ್ಧ ಎಂದು ಹೈಕೋರ್ಟ್ ಹೇಳಿದೆ.

ಬಿಲಾಸಪುರ್(ಅ.16) ಪತ್ನಿ ಮೇಲೆ ಅಧಿಕಾರವಿದೆ ಎಂದು ಆಕೆಯ ಫೋನ್ ಮೇಲೂ ಕಣ್ಣು ಹಾಕಿದರೆ ಕಂಬಿ ಎಣಿಸಬೇಕಾಗುತ್ತದೆ. ಪತ್ನಿ ಹೆಚ್ಚಾಗಿ ಫೋನ್‌ನಲ್ಲೇ ಇರ್ತಾಳೆ, ಅಥವಾ ಸುಖಾಸುಮ್ಮನೆ ಪತ್ನಿ ಏನು ಮಾತಾಡುತ್ತಾಳೆ ಎಂದು ಆಕೆಗೆ ಅರಿವಿಲ್ಲದೆ ಫೋನ್ ಕಾಲ್ ರೆಕಾರ್ಡ್ ಮಾಡಿದರೆ ನಿಯಮ ಉಲ್ಲಂಘನೆ. ಇಷ್ಟೇ ಅಲ್ಲ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಚತ್ತೀಸಘಡ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತ್ನಿಯ ಅನುಮತಿ ಇಲ್ಲದೆ ಆಕೆಯ ಫೋನ್ ಕಾಲ್ ರೆಕಾರ್ಡ್ ಮಾಡುವುದು ಆರ್ಟಿಕಲ್ 21ರ ಉಲ್ಲಂಘನೆಯಾಗಿದೆ. ಈ ನಡೆಯಿಂದ ಮಹಿಳೆಯ ಖಾಸಗಿತನ ಹಕ್ಕಿನ ಉಲ್ಲಂಘನೆ ಎಂದು ಹೈಕೋರ್ಟ್ ಹೇಳಿದೆ.
ಕೌಟುಂಬಿಕ ನ್ಯಾಯಾಲದಲ್ಲಿದ್ದ ಪ್ರಕರಣ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದ 38ರ ವರ್ಷದ ಮಹಿಳೆ ಅರ್ಜಿ ವಿಚಾರಣೆ ನಡೆಸಿದ ಚತ್ತೀಸಘಡ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. 2019ರಲ್ಲಿ ಮಹಿಳೆ ವಿರುದ್ದ 44 ವರ್ಷದ ಪತಿ ಜಿಲ್ಲಾನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪತಿ ವ್ಯಭಿಚಾರ ಮಾಡುತ್ತಿದ್ದಾಳೆ ಎಂದು ದೂರು ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪತ್ನಿಯ ಫೋನ್ ಸಂಭಾಷಣೆಯನ್ನು ದಾಖಲೆಯಾಗಿ ನೀಡಿದ್ದರು. ಪತ್ನಿಗೆ ತಿಂಗಳ ನಿರ್ವಹಣಾ ವೆಚ್ಚ ನೀಡಬೇಕಿಲ್ಲ. ಕಾರಣ ಆಕೆಯಿಂದ ನನಗೆ ಮೋಸ ಆಗಿದೆ ಎಂದು ಕೌಟುಂಬಿಕ ನ್ಯಾಯಾಲಯದಲ್ಲಿ ವಾದ ಮಂಡಿಸಲಾಗಿತ್ತು. ಈ ವಾದವನ್ನು ಕೌಟುಂಬಿಕ ನ್ಯಾಯಾಲಯ ಎತ್ತಿ ಹಿಡಿದಿತ್ತು. 2019ರಿಂದ ಈ ಪ್ರಕರಣ ಬಾಕಿ ಉಳಿದಿತ್ತು. 2022ರಲ್ಲಿ ಮಹಿಳೆ ಹೈಕೋರ್ಟ್ ಅರ್ಜಿ ಸಲ್ಲಿಸಿ ಜೀವನಾಂಶ ಪಾವತಿಗೆ ಅನುಮತಿಸಲು ಮನವಿ ಮಾಡಿದ್ದರು.
ಹೆಂಡತಿಗೆ 55 ಸಾವಿರ ರು. ಜೀವನಾಂಶವನ್ನು ನಾಣ್ಯದಲ್ಲೇ ಕೊಟ್ಟ ಪತಿರಾಯ!
ಜೀವನಾಂಶ ಕೋರಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದಳು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಮಹತ್ವದ ಅಂಶದ ಕುರಿತು ಬೆಳಕು ಚೆಲ್ಲಿದೆ. ಪತ್ನಿಯ ಅನುಮತಿ ಇಲ್ಲದೆ ಫೋನ್ ಕದ್ದಾಲಿಸುವುದು, ರೆಕಾರ್ಡ್ ಮಾಡುವುದು ಮಹಿಳೆಯ ಖಾಸಗಿತನ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಚತ್ತೀಸಘಡ ಹೈಕೋರ್ಟ್ ಹೇಳಿದೆ. ಆಕೆಗೆ ತಿಳಿಯದಂತೆ ಫೋನ್ ಕಾಲ್ ರೆಕಾರ್ಡ್ ಮಾಡಿ ಆಕೆಯ ವಿರುದ್ಧವೇ ಅದನ್ನು ಬಳಸಲು ಮುಂದಾಗಿದ್ದಾರೆ ಎಂದು ಕೋರ್ಟ್ ಹೇಳಿದೆ.