* ಕೋವಿಡ್ ಲಸಿಕೆ ವಿತರಣೆಯಲ್ಲಿ ಭಾರತ ಹೊಸದೊಂದು ವಿಶ್ವದಾಖಲೆ* ನಿನ್ನೆ ಒಂದೇ ದಿನ 1.25 ಕೋಟಿ ಜನರಿಗೆ ಕೋವಿಡ್ ಲಸಿಕೆ
ನವದೆಹಲಿ(ಸೆ.01): ಕೋವಿಡ್ ಲಸಿಕೆ ವಿತರಣೆಯಲ್ಲಿ ಭಾರತ ಹೊಸದೊಂದು ವಿಶ್ವದಾಖಲೆ ಸೃಷ್ಟಿಸಿದೆ. ಮಂಗಳವಾರ ಒಂದೇ ದಿನ ದೇಶಾದ್ಯಂತ 1.25 ಕೋಟಿಗಿಂತ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ.
ಹೀಗೆ ಲಸಿಕೆ ವಿತರಣೆಯಲ್ಲಿ ಕೋಟಿಯ ಗಡಿ ದಾಟಿದ್ದು ಇದು ಎರಡನೇ ಬಾರಿ. ಆ.27ರಂದು ದೇಶದಲ್ಲಿ 1.08 ಕೋಟಿ ಜನರಿಗೆ ಲಸಿಕೆ ನೀಡಲಾಗಿತ್ತು. ಅದು ಮೊದಲ ಬಾರಿಗೆ ಲಸಿಕೆ ವಿತರಣೆ ಕೋಟಿ ಗಡಿ ದಾಟಿದ್ದಾಗಿತ್ತು. ಅದಾದ ಕೇವಲ 4 ದಿನದಲ್ಲಿ ಮತ್ತೊಮ್ಮೆ ಕೋಟಿಯ ಗಡಿ ದಾಟಿದ್ದೂ ಅಲ್ಲದೆ, ವಿತರಣೆಯಲ್ಲಿ ಹೊಸ ದಾಖಲೆಯನ್ನೂ ಸೃಷ್ಟಿಸಲಾಗಿದೆ.
ಆಗಸ್ಟ್ ತಿಂಗಳಿನಲ್ಲಿ ಭಾರತ ಒಟ್ಟು 18 ಕೋಟಿ ಡೋಸ್ ಲಸಿಕೆ ನೀಡಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಲಸಿಕೆ ನೀಡಿಕೆಯಲ್ಲಿ ಶೇ.33ರಷ್ಟುಏರಿಕೆ ಕಂಡಿದೆ. ಈವರೆಗೆ 50 ಕೋಟಿ ಮೊದಲ ಡೋಸ್ ಮತ್ತು 14.9 ಕೋಟಿ ಎರಡೂ ಡೋಸ್ ಸೇರಿದಂತೆ ಒಟ್ಟು 65 ಕೋಟಿ ಡೋಸ್ ಲಸಿಕೆ ವಿತರಿಸಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ದೇಶದ 94 ಕೋಟಿ ಯುವಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
