Asianet Suvarna News Asianet Suvarna News

ಗಾಂಧೀಜಿ ಹತ್ಯೆಯ ಹಿಂದೆ ಸಾವರ್ಕರ್‌ ಸಂಚಿತ್ತು ಎಂಬ ಆರೋಪಕ್ಕೆ ಸಾಕ್ಷ್ಯ ಇದ್ಯಾ?

50 ವರ್ಷಕ್ಕೂ ಹಿಂದೆ ಗತಿಸಿದ ವ್ಯಕ್ತಿಯ ಬಗ್ಗೆ ಈಗ ದೇಶಾದ್ಯಂತ ವಿವಾದ ಹುಟ್ಟಿಕೊಂಡಿದೆ. ಸಾವರ್ಕರ್‌ ಅವರಿಗೆ ಭಾರತರತ್ನ ನೀಡಬೇಕು ಎಂದು ಬಿಜೆಪಿ ಹಾಗೂ ಬಲಪಂಥೀಯರು, ಭಾರತರತ್ನ ನೀಡಬಾರದು ಎಂದು ಕಾಂಗ್ರೆಸ್‌ ಮತ್ತು ಎಡಪಂಥೀಯರು ವಾದಿಸುತ್ತಿದ್ದಾರೆ. ನಿಜಕ್ಕೂ ಸಾವರ್ಕರ್‌ ವಿವಾದಕ್ಕೆ ಯೋಗ್ಯರೋ ಅಥವಾ ಭಾರತರತ್ನಕ್ಕೆ ಯೋಗ್ಯರೋ? ಇಲ್ಲಿದೆ ಕಾರಣಗಳು. 

Reasons for why Savarkar deserve the Bharat Ratna
Author
Bengaluru, First Published Oct 22, 2019, 12:53 PM IST

ಇತ್ತೀಚೆಗೆ ವೀರ ಸಾವರ್ಕರ್‌ ಅವರಿಗೆ ಭಾರತ ರತ್ನ ನೀಡಬೇಕು ಎಂಬ ಕೂಗೇಳುತ್ತಿದ್ದಂತೆ ಈ ವಿಷಯ ದೊಡ್ಡ ವಿವಾದವೇ ಆಗಿ ಪರಿಣಮಿಸಿದೆ. ಆರಂಭದಲ್ಲಿ ಇದು ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮತಬ್ಯಾಂಕ್‌ ರಾಜಕೀಯಕ್ಕಾಗಿ ಹುಟ್ಟಿಕೊಂಡ ವಿವಾದವಿರಬಹುದು ಎಂದು ಹೇಳಲಾಗುತ್ತಿತ್ತು.

ಆದರೆ, ಈಗ ಕರ್ನಾಟಕವೂ ಸೇರಿದಂತೆ ಚುನಾವಣೆಯಿಲ್ಲದ ರಾಜ್ಯಗಳಲ್ಲೂ ಇದು ತೀವ್ರತರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಸಾವರ್ಕರ್‌ ವಿಷಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ತದ್ವಿರುದ್ಧ ನಿಲುವು ತಾಳುವ ಮೂಲಕ 50 ವರ್ಷಕ್ಕೂ ಹಿಂದೆ ಗತಿಸಿದ ವ್ಯಕ್ತಿಯನ್ನು ಮತ್ತೊಮ್ಮೆ ರಾಷ್ಟ್ರೀಯ ವಿವಾದದ ಕೇಂದ್ರ ಬಿಂದುವನ್ನಾಗಿ ಮಾಡಿವೆ.

ಕಾಂಗ್ರೆಸ್‌ ವಾದ: ಸಾವರ್ಕರ್‌ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ. ಅವರು ಬ್ರಿಟಿಷರ ಗುಲಾಮರಾಗಿದ್ದರು. ಗಾಂಧೀಜಿ ಹತ್ಯೆಯ ಹಿಂದೆ ಸಾವರ್ಕರ್‌ ಅವರ ನೇರ ಕೈವಾಡವಿದೆ. ಅವರೊಬ್ಬ ಹಿಂದುತ್ವದ ಪ್ರತಿಪಾದಕ ಎಂಬ ಕಾರಣಕ್ಕೆ ಬಿಜೆಪಿಗೆ ಅವರನ್ನು ಕಂಡರೆ ಪ್ರೀತಿ.

ವೀರ ಸಾವರ್ಕರ್ ಗೆ ಭಾರತ ರತ್ನ: ಮಹಾರಾಷ್ಟ್ರ ಗೆಲ್ಲಲು ಬಿಜೆಪಿ ಪ್ರಯತ್ನ!

ಬಿಜೆಪಿ ವಾದ: ಸಾವರ್ಕರ್‌ ನಮ್ಮ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಅವರು ಬ್ರಿಟಿಷರ ಗುಲಾಮರಾಗಿದ್ದರು ಮತ್ತು ಗಾಂಧೀಜಿ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಕಾಂಗ್ರೆಸ್‌ ಪಕ್ಷ ಆರ್‌ಎಸ್‌ಎಸ್‌ ದ್ವೇಷದ ಕಾರಣಕ್ಕೆ ಹರಡುತ್ತಿರುವ ಸುಳ್ಳು ಮಾಹಿತಿಯಷ್ಟೆ.

ಹಾಗಿದ್ದರೆ ಇತಿಹಾಸ ಏನು ಹೇಳುತ್ತದೆ?

1857 ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಅದು ಮುಂದಿನ ಇಡೀ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿತು. ಆ ಅದ್ಭುತ ಹೋರಾಟದ ಕುರಿತಂತೆ 1909ರಲ್ಲಿ ವಿನಾಯಕ ದಾಮೋದರ ಸಾವರ್ಕರ್‌ ತನ್ನ ಇಪ್ಪತ್ತೊಂದನೇ ವಯಸ್ಸಿನಲ್ಲಿ ಒಂದು ಪುಸ್ತಕ ಬರೆದರು. ಅದರ ಹೆಸರು ‘1857ರ ಭಾರತದ ಸ್ವಾತಂತ್ರ್ಯ ಸಂಗ್ರಾಮ.’ ಆಗ ಪ್ಯಾರಿಸ್‌ನಿಂದ ಪ್ರಕಟವಾಗುತ್ತಿದ್ದ ಅಭಿನವ ಭಾರತ ಸಂಘಟನೆಯ ‘ತಲ್ವಾರ್‌’ ಎನ್ನುವ ನಿಯತಕಾಲಿಕೆಯಲ್ಲಿ ಸಾವರ್ಕರ್‌ ಒಂದು ಲೇಖನ ಬರೆದಿದ್ದರು. ಅದರಲ್ಲಿ ತಾವು ಈ ಪುಸ್ತಕ ಬರೆದಿದ್ದಕ್ಕೆ ಎರಡು ಕಾರಣ ನೀಡಿದ್ದರು: ಒಂದು, ಈ ಸಂಗ್ರಾಮದ ಐತಿಹಾಸಿಕ ಖಚಿತತೆ. ಇನ್ನೊಂದು, ತಮ್ಮ ತಾಯ್ನಾಡನ್ನು ಬ್ರಿಟಿಷರ ದಾಸ್ಯದಿಂದ ಸಂಪೂರ್ಣ ವಿಮುಕ್ತಿಗೊಳಿಸಲು ಅಗತ್ಯವಿದ್ದ ಎರಡನೇ ಸ್ವಾತಂತ್ರ್ಯ ಸಂಗ್ರಾಮವೊಂದನ್ನು ಆರಂಭಿಸಲು ಭಾರತೀಯರನ್ನು ಹೋರಾಟಕ್ಕೆ ಅಣಿಗೊಳಿಸುವುದು. ಈ ಎರಡನೇ ಉದ್ದೇಶಕ್ಕಾಗಿ ತನ್ನ ಜೀವವನ್ನೇ ಲೆಕ್ಕಿಸದೆ ಹೋರಾಡಿದವರು ಸಾವರ್ಕರ್‌.

ಪುಸ್ತಕದ ಮೂಲಕ ಶುರುವಾದ ಕ್ರಾಂತಿ

ಸಾವರ್ಕರ್‌ ಮರಾಠಿಯಲ್ಲಿ ಆ ಪುಸ್ತಕ ಬರೆಯುತ್ತಿದ್ದರು. ಲಂಡನ್ನಿನ ಫ್ರೀ ಇಂಡಿಯಾ ಸೊಸೈಟಿಯ ವಾರದ ಸಭೆಗಳಲ್ಲಿ ಸಾವರ್ಕರ್‌ ತಮ್ಮ ಬರಹದ ಆಯ್ದ ಭಾಗಗಳನ್ನು ಇಂಗ್ಲಿಷಿನಲ್ಲಿ ಪ್ರಸ್ತುತಪಡಿಸುತ್ತಿದ್ದರು. ಅದಾಗಲೇ ಬ್ರಿಟಷರು ಕ್ರಾಂತಿಕಾರಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಹಾಗಾಗಿ ಸಾವರ್ಕರ್‌ ಒಂದು ಪುಸ್ತಕ ಬರೆಯುತ್ತಿದ್ದಾರೆ ಮತ್ತದು ಬ್ರಿಟಿಷ್‌ ಸರ್ಕಾರವನ್ನು ಅಪಾಯದಲ್ಲಿ ಸಿಲುಕಿಸುತ್ತದೆ ಎನ್ನುವ ಗೂಢಚಾರ ಮಾಹಿತಿ ಬ್ರಿಟಿಷ್‌ ಸರ್ಕಾರದ ಮೇಲಧಿಕಾರಿಗಳಿಗೆ ಹೋಗಿತ್ತು.

ಅದಕ್ಕೆ ಸಂಬಂಧಿಸಿದ ಒಂದಿಷ್ಟುಹಸ್ತಪ್ರತಿಗಳನ್ನು ಗೂಢಚಾರ ಏಜೆಂಟರು ಅಪಹರಿಸಿ ಅದನ್ನು ಅಧಿಕಾರಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಈ ಪುಸ್ತಕ ಮುದ್ರಣವಾದಲ್ಲಿ ಖಂಡಿತ ಇದು ಭಾರತೀಯರ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತಷ್ಟುಕಿಚ್ಚು ಹೊತ್ತಿಸುತ್ತದೆ ಎಂದು ಬ್ರಿಟಿಷರು ಬೆದರಿದರು. ಹೀಗಾಗಿ ಅದರ ಮುದ್ರಣವನ್ನೇ ತಡೆಯಲು ಏಕಕಾಲಕ್ಕೆ ಮಹಾರಾಷ್ಟ್ರದ ಹಲವು ಮುದ್ರಣಾಲಯಗಳ ಮೇಲೆ ದಾಳಿ ನಡೆಸಿದರು. ಆದರೆ, ಸಾವರ್ಕರ್‌ ಬಳಗದ ಗೂಢಚಾರಿಕೆಗೂ ಇದರ ಸುಳಿವು ಸಿಕ್ಕಿತ್ತು. ಹಾಗಾಗಿ ಬ್ರಿಟಿಷ್‌ ಅಧಿಕಾರಿಗಳು ಖಾಲಿ ಕೈಯಲ್ಲಿ ಹಿಂತಿರುಗಬೇಕಾಯಿತು.

ಮುಂದೆ ಈ ಪುಸ್ತಕವನ್ನು ಇಂಗ್ಲಿಷ್‌ ಭಾಷೆಗೆ ಅನುವಾದಿಸಿ ಜರ್ಮನಿಯಲ್ಲಿ ಮತ್ತು ಫ್ರಾನ್ಸ್‌ನಲ್ಲಿ ಮುದ್ರಿಸಲು ಪ್ರಯತ್ನಿಸಲಾಯಿತು. ಆದರೆ ಬ್ರಿಟಿಷರ ಕಣ್ಣುತಪ್ಪಿಸಿ ಮುದ್ರಿಸುವುದು ಬಹಳ ಕಷ್ಟವಿತ್ತು. ಅಂತಿಮವಾಗಿ ಹಾಲೆಂಡ್‌ನಲ್ಲಿ ಪುಸ್ತಕ ಮುದ್ರಣವಾಗಿ ಅಲ್ಲಿಂದ ವಿವಿಧೆಡೆಗೆ ಕಳುಹಿಸಲಾಯಿತು. ಬ್ರಿಟಿಷರು ಸಾವರ್ಕರರ ಆ ಕೃತಿಗೆ ಯಾವ ಪರಿ ಹೆದರಿಕೊಂಡಿದ್ದರು ಎಂದರೆ ಹಸ್ತಪ್ರತಿ ಹಾಲೆಂಡಿನಲ್ಲಿ ಮುದ್ರಣಕ್ಕೆ ಹೋಗುವ ಮೊದಲೇ ಕೃತಿ ಮುದ್ರಣವಾಗಿಲ್ಲವೆಂದು ಒಪ್ಪಿಕೊಂಡೇ ಬ್ರಿಟಿಷ್‌ ಮತ್ತು ಆಗಿನ ಇಂಡಿಯಾ ಸರ್ಕಾರಗಳೆರಡೂ ಅದನ್ನು ನಿಷೇಧಿಸಿದ್ದವು.

ಒಂದು ಕೃತಿ ಪ್ರಕಟಗೊಳ್ಳುವ ಮೊದಲೇ ನಿಷೇಧಕ್ಕೊಳಗಾಗಿದ್ದು ಅದೇ ಮೊದಲಾಗಿತ್ತು. ಅದು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆಯೆಂದು ಇಂಗ್ಲಿಷ್‌ ಪತ್ರಿಕೆಗಳೇ ಬ್ರಿಟಿಷ್‌ ಸರ್ಕಾರದ ನಿಲುವನ್ನು ಖಂಡಿಸಿದವು. ಸ್ವತಃ ಸಾವರ್ಕರ್‌ ಇದರ ವಿರುದ್ಧ ‘ದಿ ಲಂಡನ್‌ ಟೈಮ್ಸ್‌’ನಲ್ಲಿ ತೀವ್ರವಾದ ಲೇಖನ ಬರೆದರು. ಆ ಪತ್ರಿಕೆ ಸಾವರ್ಕರ್‌ ಲೇಖನಕ್ಕೆ ತನ್ನ ಅಡಿ ಟಪ್ಪಣಿ ಸೇರಿಸಿ ‘ಪ್ರಸ್ತುತ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಖಚಿತ’ ಎಂದು ಬರೆದುಬಿಟ್ಟಿತ್ತು. ಬ್ರಿಟಿಷ್‌ ಸರ್ಕಾರ ಅವಮಾನದಿಂದ ತಲೆತಗ್ಗಿಸಿ ನಿಲ್ಲುವಂತಾಯಿತು.

ಮುಂದೆ ಅಭಿನವ ಭಾರತ ಸಂಘಟನೆಯವರು ಈ ಪುಸ್ತಕವನ್ನು ರಹಸ್ಯವಾಗಿ ಭಾರತ ಮತ್ತು ವಿದೇಶಗಳಲ್ಲಿ ವಿತರಣೆ ಮಾಡಿದರು. ಫ್ರಾನ್ಸ್‌ನಲ್ಲಿ ಬಹಿರಂಗವಾಗಿಯೇ ಬಿಡುಗಡೆ ಮಾಡಲಾಯಿತು. ಅನೇಕ ಸೇನಾ ಶಿಬಿರಗಳಲ್ಲಿ ಈ ಪುಸ್ತಕ ದೇಶಪ್ರೇಮದ ಸ್ಫೂರ್ತಿಯ ಪಠ್ಯವಾಯಿತು. ಮುಂದೆ ಬೇರೆ ಬೇರೆ ಭಾಷೆಗಳಲ್ಲಿ ಅನುವಾದಗಳೂ, ಐದಾರು ಆವೃತ್ತಿಗಳೂ ಬಂದವು. ನೇತಾಜಿ ಸುಭಾಷ್‌ಚಂದ್ರ ಬೋಸರು ಕಟ್ಟಿದ್ದ ಆಜಾದ್‌ ಹಿಂದ್‌ ಫೌಜ್‌ನಲ್ಲಿನ ಹಲವಾರು ಶಿಬಿರಗಳಲ್ಲಿ ಸೈನಿಕರನ್ನು ಹುರಿದುಂಬಿಸಲು ಈ ಕೃತಿ ಬಳಕೆಯಾಗುತಿತ್ತು. ಕ್ರಾಂತಿಕಾರಿ ಭಗತ್‌ ಸಿಂಗ್‌ ಮತ್ತವರ ಸಹಚರರಿಗೂ ಈ ಕೃತಿ ಬಹಳಷ್ಟುಪ್ರೇರಣೆ ನೀಡಿತು.

ಇಂಗ್ಲೆಂಡಿನಲ್ಲೇ ಬ್ರಿಟಿಷರ ವಿರುದ್ಧ ಸಮರ

ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ ಎಂದು ಘೋಷಿಸಿದ ಭಾರತದ ಮೊದಲ ರಾಜಕೀಯ ನಾಯಕ ಸಾವರ್ಕರ್‌. 1905ರಲ್ಲೇ ವಿದೇಶಿ ಬಟ್ಟೆಗಳಿಗೆ ಬೆಂಕಿಯಿಟ್ಟು ಹೋಳಿ ಆಚರಿಸಿ ಜನರಲ್ಲಿ ಸ್ವದೇಶಿ ಪ್ರಜ್ಞೆಯನ್ನು ಮೂಡಿಸಿದರು. 1904ರಲ್ಲಿ ಅಭಿನವ ಭಾರತ ಸಂಘಟನೆ ಸ್ಥಾಪಿಸಿದ್ದ ಅವರು ಇಂಗ್ಲೆಂಡಿನಲ್ಲಿದ್ದುಕೊಂಡೇ ಬ್ರಿಟಿಷರ ವಿರುದ್ಧ ಹೋರಾಟ ಆರಂಭಿಸಿದ್ದರು.

ಮದನ್‌ಲಾಲ್‌ ಧಿಂಗ್ರ, ಖುದಿರಾಂ ಬೋಸ್‌ ಪ್ರಕರಣಗಳ ನಂತರ ಅಭಿನವ ಭಾರತ ಸಂಘಟನೆಯ ಸದಸ್ಯರನ್ನು ಬ್ರಿಟಿಷರು ವಿಚಾರಣೆ ನಡೆಸಿ ಅದರ ದಮನಕ್ಕೆ ಪ್ರಯತ್ನಿಸಿದರು. ಸಂಘಟನೆಯ ಮುಖ್ಯಸ್ಥರಾಗಿದ್ದ ಸಾವರ್ಕರ್‌ ಅವರ ಅಣ್ಣ ಬಾಬಾರಿಗೆ ಕರಿನೀರಿನ ಶಿಕ್ಷೆ ವಿಧಿಸಲಾಯಿತು. ತಮ್ಮ ಬಾಳಾ ಕೂಡ ಜೈಲುಪಾಲಾದ. ಸಾವರ್ಕರ್‌ ಮೇಲೆ ದೇಶದ್ರೋಹ, ಆಕ್ರಮ ಶಸ್ತ್ರಾಸ್ತ್ರ ಶೇಖರಣೆ, ರಾಜದ್ರೋಹ, ಜಾಕ್ಸನ್‌ ಹತ್ಯೆಗೆ ನೆರವು ಇತ್ಯಾದಿ ಆರೋಪ ಹೊರಿಸಿ ನೆಪಕ್ಕೊಂದು ವಿಚಾರಣೆ ನಡೆಸಿದಂತೆ ಮಾಡಿ ಮೊದಲ ವಿಚಾರಣೆಯಲ್ಲೇ 25 ವರ್ಷಗಳ ಕರಿನೀರಿನ (ಕಾಲಾಪಾನಿ) ಶಿಕ್ಷೆ ವಿಧಿಸಲಾಯಿತು. ಅದರ ಬೆನ್ನಿಗೇ ಮತ್ತೊಂದು ಆರೋಪದಡಿ ಇನ್ನೂ 25 ವರ್ಷಗಳ ಕರಿನೀರಿನ ಶಿಕ್ಷೆ ವಿಧಿಸಲಾಯಿತು. ಒಟ್ಟು 50 ವರ್ಷದ ಶಿಕ್ಷೆ!

ಜೈಲಿನ ಹಿಂಸೆಯಲ್ಲೂ ಹೋರಾಟ

ಕರಿನೀರಿನ ಶಿಕ್ಷೆ ಎಂದರೆ ನಿಜಕ್ಕೂ ನರಕವಾಗಿತ್ತು. ಬೆಳಿಗ್ಗೆ ಆರರಿಂದ ಸಂಜೆ ಆರರ ತನಕ ಒಣಗಿದ ತೆಂಗಿನ ಸಿಪ್ಪೆಯನ್ನು ಕುಟ್ಟಿನಾರು ತೆಗೆಯುವುದು ಅಥವಾ ಗಾಣದಿಂದ ತೆಂಗಿನ ಎಣ್ಣೆ ತಯಾರಿಸುವ ಕೆಲಸ ಮಾಡಬೇಕಿತ್ತು. ಅಲ್ಲಿ ಮನುಷ್ಯರನ್ನು ಎತ್ತುಗಳ ಬದಲಿಗೆ ಗಾಣಕ್ಕೆ ಕಟ್ಟಿಎಣ್ಣೆ ತಯಾರಿಸಲಾಗುತ್ತಿತ್ತು. ನೆಟ್ಟಗೆ ಊಟ, ನೀರು, ಶೌಚ ಯಾವೊಂದೂ ಇರಲಿಲ್ಲ. ಆರೋಗ್ಯದ ಸಮಸ್ಯೆ ಬೇರೆ. ಸಾವರ್ಕರ್‌ ಹೈರಾಣಾಗಿ ಹೋಗಿದ್ದರು. ಆದರೆ ಅವರ ಆತ್ಮವಿಶ್ವಾಸ ಕಡಿಮೆ ಆಗಿರಲಿಲ್ಲ. ಮುಂದೆ ಅದೇ ಜೈಲಿನಲ್ಲಿ ಸುಧಾರಣೆ ತರುವಲ್ಲಿ ಸಾವರ್ಕರ್‌ ಪಟ್ಟಪರಿಶ್ರಮ ಯಶಸ್ವಿಯಾಯಿತು. ಉತ್ತಮ ಆಹಾರ, ಶೌಚಾಲಯ, ನೀರು ಕೈದಿಗಳಿಗೆ ದೊರೆಯಲಾರಂಭಿಸಿತು. ಗ್ರಂಥಾಲಯದ ಪುಸ್ತಕಗಳು ದೊರೆತವು.

ಸಮಾಜ ಸುಧಾರಕನೂ ಹೌದು

ಅಭಿಮಾನಿಗಳ ಪ್ರಯತ್ನದಿಂದಾಗಿ 1921 ರಲ್ಲಿ ಅಂಡಮಾನಿನ ಕರಿನೀರಿನ ಶಿಕ್ಷೆಯಿಂದ ಬಿಡುಗಡೆಯಾದ ಬಳಿಕವೂ ಸಾವರ್ಕರ್‌ ನಿರಂತರವಾಗಿ ತಮ್ಮ ಹೋರಾಟ ಜಾರಿಯಲ್ಲಿಟ್ಟರು. ದೇಶದ ಜನರಲ್ಲಿ ಕ್ರಾಂತಿಯ ಕೆಚ್ಚನ್ನು ಮೂಡಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು. ಸ್ವಾತಂತ್ರ್ಯಕ್ಕೆ ಮುನ್ನ ಮತ್ತು ಬಳಿಕವೂ ಹಿಂದು ಧರ್ಮದ ಸುಧಾರಣೆಗಾಗಿ ಪ್ರಯತ್ನಿಸಿದರು. ಜಾತಿಪದ್ಧತಿಯನ್ನು ವಿರೋಧಿಸಿದರು. ಅಸ್ಪೃಶ್ಯತೆ ನಿವಾರಣೆಗಾಗಿ ಶ್ರಮಿಸಿದರು. ಸಹಪಂಕ್ತಿ ಭೋಜನ ಮಾಡಿದರು. ಮತ್ತೆ ಮತ್ತೆ ಜೈಲು ಬಂಧನಕ್ಕೊಳಗಾದರೂ ಧೈರ‍್ಯಗೆಡಲಿಲ್ಲ.

ಗಾಂಧಿ ಹತ್ಯೆಯಲ್ಲಿ ನಿರ್ದೋಷಿ

ನಾಥೂರಾಮ್‌ ಗೋಡ್ಸೆ ಗಾಂಧೀಜಿಯನ್ನು ಕೊಂದಾಗ ಸಾವರ್ಕರ್‌ ಮನೆ ಮೇಲೆ ಕಲ್ಲಿನ ದಾಳಿ ನಡೆಯಿತು. ಈ ಕಲ್ಲೇಟಿಗೆ ಗಾಯಗೊಂಡ ಸಾವರ್ಕರ್‌ರ ತಮ್ಮ ನಾರಾಯಣ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟ. ಸಾವರ್ಕರ್‌ ಅವರನ್ನು ಗಾಂಧಿ ಹತ್ಯೆಯ ಆರೋಪದ ಮೇಲೆ ಸ್ವತಂತ್ರ ಭಾರತದ ಸರ್ಕಾರ ಬಂಧಿಸಿ ಜೈಲಿಗೆ ಕಳುಹಿಸಿತು. ಮುಂದೆ ನ್ಯಾಯಾಲಯದಿಂದ ಅವರು ಸಂಪೂರ್ಣ ನಿರ್ದೋಷಿ ಎನ್ನುವ ತೀರ್ಪು ಬಂತು. ಆದರೆ, ಸಾವರ್ಕರ್‌ ಬಹಳ ನೊಂದಿದ್ದರು. ಎಲ್ಲಾ ನೋವುಗಳನ್ನು ನುಂಗಿಕೊಂಡು ಸ್ಥಿತಪ್ರಜ್ಞತೆಯ ಪ್ರತೀಕವಾಗಿ 1966ರ ಫೆಬ್ರವರಿ 26ರಂದು ಇಹಲೋಕ ತ್ಯಜಿಸಿದರು.

ಇಂತಹ ಅಪ್ರತಿಮ ದೇಶಭಕ್ತನನ್ನು ನಾವು ಸಂಶಯದಿಂದ ನೋಡಬೇಕೇ? ಯಾರೇನೇ ಅಂದರೂ ಸಾವರ್ಕರ್‌ ಯಾವತ್ತಿಗೂ ಭಾರತದ ಅನಘ್ರ್ಯ ರತ್ನವಲ್ಲವೇ?

- ನರೇಂದ್ರ ಎಸ್ ಗಂಗೊಳ್ಳಿ 

Follow Us:
Download App:
  • android
  • ios