ಎರಡು ದಿನಗಳ ಹಿಂದೆ ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್‌ ನೀಡಿದ್ದ ಟಾಟಾ ಗ್ರೂಪ್‌ನ ರತನ್‌ ಟಾಟಾ ಬುಧವಾರದ ವೇಳೆಗೆ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. 

ಮುಂಬೈ (ಅ.9): ಭಾರತದ ಅತಿದೊಡ್ಡ ಕೈಗಾರಿಕಾ ಸಮೂಹ ಟಾಟಾ ಸನ್ಸ್‌ನ ಚೇರ್ಮನ್‌ ರತನ್‌ ಟಾಟಾ ಅವರ ಪರಿಸ್ಥಿತಿ ಗಂಭೀರವಾಗಿದೆ. ಎರಡು ದಿನಗಳ ಹಿಂದೆ ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್‌ ನೀಡಿದ್ದ ರತನ್‌ ಟಾಟಾ ಎಂದಿನ ಚೆಕಪ್‌ಗಾಗಿ ಆಸ್ಪತ್ರೆಗೆ ಬಂದಿದ್ದೇನೆ ಎಂದು ತಿಳಿಸಿದ್ದರು. ಆದರೆ, ಈಗ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಈ ವಿಚಾರವಾಗಿ ತಿಳಿದಿರುವ ಮೂಲಗಳು ಹೇಳಿವೆ. ಈ ಬಗ್ಗೆ ರಾಯಿಟರ್ಸ್‌ ಬುಧವಾರ ವರದಿ ಮಾಡಿದೆ. 86ರ ಹರೆಯದ ರತನ್‌ ಟಾಟಾ ಅವರು ತಮ್ಮ ವಯಸ್ಸು ಮತ್ತು ಸಂಬಂಧಿತ ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ಎಂದಿನ ವೈದ್ಯಕೀಯ ತನಿಖೆಗೆ ಒಳಗಾಗುತ್ತಿದ್ದಾರೆ ಎಂದು ಸೋಮವಾರ ಹೇಳಿದ್ದರು. ಸೋಮವಾರ ಸ್ವತಃ ರತನ್‌ ಟಾಟಾ ಅವರ ಸೋಶಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಆರೋಗ್ಯದ ಬಗ್ಗೆ ಅಪ್‌ಡೇಟ್‌ ನೀಡಲಾಗಿತ್ತು. ಆಸ್ಪತ್ರೆಯಿಂದ ಉತ್ತಮ ಸ್ಫೂರ್ತಿಯಲ್ಲಿ ಹೊರಬಂದಿದ್ದೇನೆ. ಯಾರೂ ಕೂಡ ಆರೋಗ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದರು.

ಇದರ ಬೆನ್ನಲ್ಲಿಯೇ ಅವರು ಬುಧವಾರ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಆದರೆ, ಅವರ ಪರಿಸ್ಥಿತಿ ಹೇಗಿದೆ. ಯಾವ ರೀತಿಯ ಸಮಸ್ಯೆ ಅವರಿಗೆ ಕಾಡುತ್ತಿದೆ ಅನ್ನೋದು ಈವರೆಗೂ ಬಹಿರಂಗವಾಗಿಲ್ಲ.

1991ರಲ್ಲಿ ಟಾಟಾ ಸನ್ಸ್‌ನ ಚೇರ್ಮನ್‌ ಆಗಿದ್ದ ರತನ್‌ ಟಾಟಾ, 2012ರವರೆಗೂ ಈ ಹುದ್ದೆಯಲ್ಲಿದ್ದರು. ತಮ್ಮ ಮರಿ ಮುತ್ತಜ್ಜ ಸ್ಥಾಪನೆ ಮಾಡಿದ್ದ ಗ್ರೂಪ್‌ ಅನ್ನು ದೊಡ್ಡ ಮಟ್ಟದಲ್ಲಿ ಯಶಸ್ಸಿನ ಪಥದಲ್ಲಿ ಸಾಗಿಸಿದ್ದರು. 1996ರಲ್ಲಿ ಟಾಟಾ ಟೆಲಿಸರ್ವೀಸಸ್‌ ಕಂಪನಿ ಸ್ಥಾಪನೆ ಮಾಡಿದ್ದರೆ, 2004ರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ ಕಂಪನಿಯನ್ನು ಸಾರ್ವಜನಿಕ ಪಾಲುದಾರ ಕಂಪನಿಯನ್ನಾಗಿ ಮಾಡಿದ್ದರು. ಟಾಟಾ ಸನ್ಸ್‌ನಿಂದ ಕೆಳಗಿಳಿದ ಬಳಿಕ ಅವರನ್ನು ಟಾಟಾ ಸನ್ಸ್, ಟಾಟಾ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್ ಮತ್ತು ಟಾಟಾ ಕೆಮಿಕಲ್ಸ್‌ನ ಅಧ್ಯಕ್ಷ ಗೌರವ ಪ್ರಶಸ್ತಿಯನ್ನು ನೀಡಲಾಯಿತು ಎಂದು ಕಂಪನಿಯ ವೆಬ್‌ಸೈಟ್ ಹೇಳುತ್ತದೆ.