ಶಹಜಹಾನ್‌ಪುರ್(ಮಾ.07)‌: 27 ವರ್ಷಗಳ ಹಿಂದೆ ಇಬ್ಬರು ಕಾಮುಕರಿಂದ ಹಲವು ಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದಾಗಿ ಮಹಿಳೆಯೊಬ್ಬರು ಈಗ ದೂರು ದಾಖಲಿಸಿರುವ ಘಟನೆ ಉತ್ತರಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ.

27 ವರ್ಷದ ಹಿಂದೆ ಸಂತ್ರಸ್ತೆಯು ತನ್ನ ಸೋದರಿ ಮತ್ತು ಭಾವನ ಜೊತೆ ಇಲ್ಲಿ ವಾಸಿಸುತ್ತಿದ್ದರು. ಆಗ ಸಂತ್ರಸ್ತೆಗೆ 12 ವರ್ಷ ವಯಸ್ಸು. ಈ ವೇಳೆ ಸಂತ್ರಸ್ತೆ ಒಬ್ಬಳೇ ಇದ್ದಾಗ ಮನೆಗೆ ಧಾವಿಸಿದ್ದ ನಕಿ ಹಸನ್‌ ಮತ್ತು ಈತನ ಕಿರಿಯ ಸಹೋದರ ಗುಡ್ಡು ಎಂಬುವರು ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು. 14ನೇ ವಯಸ್ಸಲ್ಲೇ (1994ರಲ್ಲಿ) ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಸಮಾಜಕ್ಕೆ ಹೆದರಿ ಆ ಮಗುವನ್ನು ಉಧಾಂಪುರದ ಸಂಬಂಧಿಕರೊಬ್ಬರಿಗೆ ನೀಡಿದ್ದಳು ಹಾಗೂ ಮತ್ತೊಬ್ಬರೊಂದಿಗೆ ವಿವಾಹವಾಗಿದ್ದಳು. ಅದಾದ 10 ವರ್ಷದ ಬಳಿಕ ಮಹಿಳೆ ಅತ್ಯಾಚಾರಕ್ಕೆ ಒಳಗಾದ ವಿಷಯ ತಿಳಿದು ಪತಿ ವಿಚ್ಛೇದನ ನೀಡಿದ್ದ.

ಇದೀಗ ಹೀಗಾಗಿ ಮತ್ತೆ ಉಧಾಂಪುರಕ್ಕೆ ಮಹಿಳೆ ಹಿಂದಿರುಗಿದಾಗ ಮಗ ಬೆಳೆದು ದೊಡ್ಡವನಾಗಿದ್ದ. ಆಗ ಆತ ‘ನನ್ನ ಅಪ್ಪ ಯಾರು’ ಎಂದು ಸಂತ್ರಸ್ತೆಗೆ ಕೇಳಿದ್ದಾನೆ. ಹೀಗಾಗಿ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇದರ ಬೆನ್ನಲ್ಲೇ, ‘ಡಿಎನ್‌ಎ ಪರೀಕ್ಷೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದ್ದಾರೆ.