ನವದೆಹಲಿ[ಮಾ.12]: ಹಗರಣದಲ್ಲಿ ಸಿಲುಕಿರುವ ಯಸ್‌ ಬ್ಯಾಂಕ್‌ ಸಂಸ್ಥಾಪಕ ರಾಣಾ ಕಪೂರ್‌, ತಮ್ಮ ಹಾಗೂ ತಮ್ಮ ಪತ್ನಿಯ ಹೆಸರಿನಲ್ಲಿದ್ದ ಸುಮಾರು 1000 ಕೋಟಿ ರು. ಆಸ್ತಿಪಾಸ್ತಿ ಮಾರಾಟ ಮಾಡಿ ವಿದೇಶಕ್ಕೆ ಪರಾರಿಯಾಗಲು ಹುನ್ನಾರ ನಡಡಸಿದ್ದರು ಎಂದು ತಿಳಿದುಬಂದಿದೆ.

ಈ ಆಸ್ತಿಗಳು ದಿಲ್ಲಿಯಲ್ಲಿ ಇವೆ. ಇವುಗಳ ಮೇಲೆ ಈಗ ರಾಣಾ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ.) ಕಣ್ಣು ಬಿದ್ದಿದೆ.

ದಿಲ್ಲಿಯ ಅಮೃತಾ ಶೇರ್‌ಗಿಲ್‌ ಮಾರ್ಗದಲ್ಲಿ ಇಂಥ ಒಂದು ಬಂಗಲೆ ಇದೆ. ಯಸ್‌ ಬ್ಯಾಂಕ್‌ನಲ್ಲಿ 500 ಕೋಟಿ ರು. ಸಾಲ ಮಾಡಿ, ಇದನ್ನು ಮೊದಲು ಗೌತಮ್‌ ಥಾಪರ್‌ ಎಂಬುವರ ಅವಾಂತಾ ರಿಯಾಲ್ಟಿಕಂಪನಿ ಖರೀದಿಸಿತ್ತು. ಆದರೆ ಸಾಲ ಮರುಪಾವತಿ ಮಾಡಿರಲಿಲ್ಲ. ಈ ವೇಳೆ ಕಾನೂನು ಪ್ರಕಾರ ಇದನ್ನು ಯಸ್‌ ಬ್ಯಾಂಕ್‌ ಜಪ್ತಿ ಮಾಡಲಿಲ್ಲ. ಬದಲು ಕೇವಲ 380 ಕೋಟಿ ರು. ನೀಡಿ, ಈ ಬಂಗಲೆಯನ್ನು ರಾಣಾ ಕಪೂರ್‌ ಅವರ ಪತ್ನಿ ಬಿಂದು ಕಪೂರ್‌ರ ಬ್ಲಿಸ್‌ ಅಬೋಡ್‌ ಕಂಪನಿ ಖರೀದಿಸಿತ್ತು. ನಂತರ ಈ ಬಂಗಲೆಯನ್ನೂ ಮಾರಲು ರಾಣಾ ಕಪೂರ್‌ ಮುಂದಾಗಿದ್ದರು ಎಂದು ಮೂಲಗಳು ಹೇಳಿವೆ.