ಏಪ್ರಿಲ್ 2ಕ್ಕೆ ರಾಮಮಂದಿರಕ್ಕೆ ಶಂಕುಸ್ಥಾಪನೆ
ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ಶ್ರೀರಾಮಚಂದ್ರನ ಜನ್ಮದಿನವಾದ ರಾಮನವಮಿಯ ದಿನದಂದೇ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.
ಲಖನೌ (ನ.12) : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ಶ್ರೀರಾಮಚಂದ್ರನ ಜನ್ಮದಿನವಾದ ರಾಮನವಮಿಯ ದಿನದಂದೇ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗುವ ಲಕ್ಷಣಗಳು ಕಂಡುಬರುತ್ತಿವೆ.
ರಾಮನವಮಿ 2020 ರ ಏಪ್ರಿಲ್ 2ರಂದು ಇದೆ. ದೇಗುಲ ನಿರ್ಮಾಣ ಕೆಲಸ ಅಂದೇ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಈ ಬೆಳವಣಿಗೆಗಳ ಕುರಿತು ಹೆಚ್ಚಿನ ಮಾಹಿತಿ ಇರುವ ವ್ಯಕ್ತಿಗಳು ತಿಳಿಸಿದ್ದಾರೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ. ಅಯೋಧ್ಯೆ ಕುರಿತು ಶನಿವಾರ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ದೇಗುಲ ನಿರ್ಮಾಣಕ್ಕೆ 3 ತಿಂಗಳಿನಲ್ಲಿ ಟ್ರಸ್ಟ್ ಸ್ಥಾಪನೆ ಮಾಡುವಂತೆ ಸೂಚನೆ ನೀಡಿತ್ತು. ಈ ಮೂರು ತಿಂಗಳ ವಾಯಿದೆ ಮುಗಿದ ಕೆಲವು ವಾರಗಳ ಬಳಿಕ ರಾಮನವಮಿ ಬರುತ್ತದೆ. ಹೀಗಾಗಿ ಅಂದೇ ದೇಗುಲಕ್ಕೆ ಚಾಲನೆ ನೀಡಲಾಗುತ್ತದೆ. ಆದರೆ ಶಿಲಾನ್ಯಾಸ ಮಾಡಲಾಗುತ್ತದೋ ಅಥವಾ 1989 ರಂತೆ ಬುನಾದಿ ಹಾಕಲಾಗುತ್ತದೋ ಎಂಬುದು ಸ್ಪಷ್ಟವಾಗಿಲ್ಲ.
ದೇಗುಲದ ವಿನ್ಯಾಸ ಈಗಾಗಲೇ ಸಿದ್ಧವಾಗಿದೆ. ಒಮ್ಮೆ ಕಾಮಗಾರಿ ಆರಂಭವಾದರೆ, ಮುಕ್ತಾಯಗೊಳ್ಳಲು ಎರಡರಿಂದ ಮೂರು ವರ್ಷಗಳು ಬೇಕಾಗುತ್ತವೆ ಎಂದು ಮೂಲಗಳು ತಿಳಿಸಿವೆ.
ಸೋಮನಾಥ ರೀತಿ ಟ್ರಸ್ಟ್?: ಈ ನಡುವೆ, ಸುಪ್ರೀಂಕೋರ್ಟ್ ರಚಿಸಲು ಸೂಚಿಸಿರುವ ಟ್ರಸ್ಟ್ ಸೋಮನಾಥ ದೇಗುಲ, ಅಮರನಾಥ ದೇಗುಲ ಮಂಡಳಿ ಅಥವಾ ಮಾತಾ ವೈಷ್ಣೋದೇವಿ ದೇಗುಲ ಮಂಡಳಿಯ ರೀತಿ ಇರುತ್ತದೆ ಎಂದು ಹೇಳಿವೆ. ಇದೇ ವೇಳೆ, ವಿವಾದಿತ ಜಾಗದ ಸುತ್ತಲಿನ ಜಾಗವನ್ನು ಬಹಳ ಹಿಂದೆಯೇ ವಶಪಡಿಸಿಕೊಂಡಿರುವ ಕೇಂದ್ರ ಸರ್ಕಾರ ಅದನ್ನು ಉದ್ದೇಶಿತ ಟ್ರಸ್ಟ್‌ಗೆ ವರ್ಗಾವಣೆ ಮಾಡಲಿದೆ. ಈ ಪೈಕಿ ೪೩ ಎಕರೆ ಜಾಗ ರಾಮಜನ್ಮಭೂಮಿ ನ್ಯಾಸಕ್ಕೆ ಸೇರಬೇಕು. ಆ ಜಾಗವನ್ನು ಸರ್ಕಾರ ವಶಪಡಿಸಿಕೊಂಡಾಗ ನ್ಯಾಸ ಯಾವುದೇ ಪರಿಹಾರ ಪಡೆದಿರಲಿಲ್ಲ.
ರಾಮ ಮಂದಿರ ಕಿಚ್ಚು ಹಚ್ಚಿಸಿದ್ದೇ ಸಿಂಘಾಲ್, ಅಡ್ವಾಣಿ..
ಹೊಸದಾಗಿ ರಚನೆಯಾಗಲಿರುವ ಟ್ರಸ್ಟ್‌ನಲ್ಲಿ ನ್ಯಾಸದ ಪ್ರತಿನಿಧಿಯೊಬ್ಬರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ, ನ್ಯಾಸದ ಬಳಿ 1.80 ಲಕ್ಷ ಕಲ್ಲಿನ ಸ್ಲ್ಯಾಬ್‌ಗಳು ಇವೆ. ದೇಗುಲ ನಿರ್ಮಾಣಕ್ಕಾಗಿ ಇವನ್ನು ದಾಸ್ತಾನು ಮಾಡಲಾಗಿದೆ. ಇದೆಲ್ಲವನ್ನೂ ನ್ಯಾಸ ಸರ್ಕಾರ ರಚಿಸಲಿರುವ ಟ್ರಸ್ಟ್ ವಶಕ್ಕೆ ನೀಡಲಿದೆ ಎನ್ನಲಾಗಿದೆ. ರಾಮಜನ್ಮಭೂಮಿ ನ್ಯಾಸದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ಸದಸ್ಯರಾಗಿದ್ದಾರೆ. ಅವರು ಆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಪತ್ರಿಕೆಯ ವರದಿ ಹೇಳಿದೆ.
ಟ್ರಸ್ಟ್ ಜತೆಗೆ ಮುಸ್ಲಿಮರಿಗೆ 5 ಎಕರೆ ಜಾಗ ಮಂಜೂರು ಮಾಡಬೇಕು ಎಂದು ನ್ಯಾಯಾಲಯ ಸೂಚಿಸಿರುವ ಹಿನ್ನೆಲೆಯಲ್ಲಿ, 3ರಿಂದ 4 ಜಾಗ ಗಳನ್ನು ಗುರುತಿಸುವಂತೆ ಉತ್ತರಪ್ರದೇಶ ಮುಖ್ಯಮಂತ್ರಿಗಳ ಕಚೇರಿ ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಸೂಚನೆ ನೀಡಿದೆ.
ನವೆಂಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ