ಅಯೋಧ್ಯೆ ರಾಮಮಂದಿರ ನಿರ್ಮಾಣ ಹೊಣೆ ಕನ್ನಡಿಗನಿಗೆ, ಶಿರಸಿ ಗೋಪಾಲ್ ಸಾರಥ್ಯ!
ಮಂದಿರ ನಿರ್ಮಾಣ ಹೊಣೆ ಕನ್ನಡಿಗನಿಗೆ| ಅಯೋಧ್ಯೆ ರಾಮಮಂದಿರಕ್ಕೆ ಶಿರಸಿ ಗೋಪಾಲ್ ಸಾರಥ್ಯ| 3 ವರ್ಷ ಅಲ್ಲೇ ಠಿಕಾಣಿ ಹೂಡಲಿದ್ದಾರೆ ಸಂಘ ಪ್ರಚಾರಕ
ಪ್ರಶಾಂತ್ ನಾತು
ನವದೆಹಲಿ(ಫೆ.26): ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣದ ಹೊಣೆಯನ್ನು ಸಂಘ ಪರಿವಾರ ಕನ್ನಡಿಗರೊಬ್ಬರಿಗೆ ನೀಡಿದೆ. ಶಿರಸಿ ಹತ್ತಿರದ ನಾಗರಕಟ್ಟೆಯವರಾದ ಹಿರಿಯ ಸಂಘ ಪ್ರಚಾರಕ ಗೋಪಾಲ್ ನಾಗರಕಟ್ಟೆಅವರಿಗೆ ಮಂದಿರ ನಿರ್ಮಾಣದ ಮೇಲುಸ್ತುವಾರಿ ಜವಾಬ್ದಾರಿ ನೀಡಲಾಗಿದೆ.
ಮುಂದಿನ ಮೂರು ವರ್ಷ ಅಯೋಧ್ಯೆಯಲ್ಲಿ ಇದ್ದು ಮಂದಿರ ನಿರ್ಮಾಣದ ಕಾರ್ಯ ನೋಡಿಕೊಳ್ಳುವಂತೆ ಸಂಘ ಪರಿವಾರ ಮತ್ತು ವಿಶ್ವ ಹಿಂದೂ ಪರಿಷತ್ತಿನ ಹಿರಿಯ ನಾಯಕರು ಸೂಚಿಸಿದ್ದು, ರವಿವಾರದಿಂದ ಗೋಪಾಲ… ಅವರು ಅಯೋಧ್ಯೆಯಲ್ಲಿ ಠಿಕಾಣಿ ಹೂಡಲಿದ್ದಾರೆ.
ಈಗಾಗಲೇ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಸಂಘ ಪರಿವಾರ ನಡೆಸುತ್ತಿರುವ ಶ್ರೀರಾಮ ಮಂದಿರ ನಿಧಿ ಸಂಗ್ರಹಣಾ ಅಭಿಯಾನದಲ್ಲಿ 1500 ಕೋಟಿ ರು.ಗೂ ಹೆಚ್ಚು ಹಣ ಸಂಗ್ರಹವಾಗಿದ್ದು, ಮಾಚ್‌ರ್ ಮೊದಲ ವಾರ ಪೂರ್ಣ ಪ್ರಮಾಣದಲ್ಲಿ ಮಂದಿರ ನಿರ್ಮಾಣ ಕಾಮಗಾರಿ ಶುರು ಆಗಲಿದೆ.
ಕೇಂದ್ರ ಸರ್ಕಾರ ನೇಮಿಸಿರುವ ಶ್ರೀರಾಮ ಮಂದಿರ ತೀರ್ಥ ಟ್ರಸ್ವ್ ಮಂದಿರ ನಿರ್ಮಾಣದ ಕಾಮಗಾರಿಯನ್ನು ಖಾಸಗಿ ಕಂಪನಿಗೆ ನೀಡಿದ್ದು, ಜಾಗ ಸಮತಟ್ಟು ಮಾಡುವ ಕಾರ್ಯ ಪೂರ್ಣಗೊಂಡಿದೆ. ಬಹು ಅಂತಸ್ತಿನ ಮಂದಿರದ ವಿನ್ಯಾಸ ಕೂಡ ತಯಾರಾಗಿದೆ.
ಈಗಾಗಲೇ ಕರಸೇವಕ ಪುರಂನಲ್ಲಿ ನಿರ್ಮಿಸಲಾಗಿರುವ ಕಂಬಗಳನ್ನು ಉಪಯೋಗಿಸಿ ನಿರ್ಮಾಣ ಕಾರ್ಯದ ಸಮನ್ವಯವನ್ನು ಖಾಸಗಿ ಕಂಪನಿ ಜೊತೆಗೆ ನಡೆಸುವ ಉಸ್ತುವಾರಿಯನ್ನು ಗೋಪಾಲ್ ಅವರಿಗೆ ನೀಡಲಾಗಿದೆ.
ಚಿನ್ನದ ಪದಕ ವಿಜೇತ ಗೋಪಾಲ್:
ಗೋಪಾಲ್ ಅವರು ಸ್ನಾತಕೋತ್ತರ ಪದವಿಯಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಚಿನ್ನದ ಪದಕ ವಿಜೇತರು. ಅಮೆರಿಕದಲ್ಲಿ ಕೆಲಸ, ಹಣ ಕೈ ಬೀಸಿ ಕರೆದರೂ ಸಂಘದ ಕಾರ್ಯಕ್ಕಾಗಿ 1984ರಲ್ಲಿ ಮನೆ ಬಿಟ್ಟು ಬಂದು ಆರ್‌ಎಸ್‌ಎಸ್ ಪ್ರಚಾರಕರಾದರು. ವಿಜಯಪುರ, ಕಲಬುರಗಿಗಳಲ್ಲಿ ವಿಭಾಗ ಪ್ರಚಾರಕರಾದ ನಂತರ ಉತ್ತರ ಕರ್ನಾಟಕಕ್ಕೆ ಸಂಘದ ಪ್ರಾಂತ ಪ್ರಚಾರಕರಾಗಿದ್ದರು. ಆದರೆ ಪ್ರವೀಣ್ ಭಾಯಿ ತೊಗಾಡಿಯಾ ವಿಶ್ವ ಹಿಂದೂ ಪರಿಷತ್ತು ಬಿಟ್ಟನಂತರ ಗುಜರಾತ್ ಮತ್ತು ರಾಜಸ್ಥಾನಕ್ಕೆ ವಿಶ್ವ ಹಿಂದೂ ಪರಿಷತ್ತಿನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಜೈಪುರಕ್ಕೆ ನಿಯುಕ್ತಿಗೊಂಡಿದ್ದರು. ಈಗ ಅಯೋಧ್ಯೆ ಮಂದಿರ ನಿರ್ಮಾಣದ ಉಸ್ತುವಾರಿಗೆ ಗೋಪಾಲ್ ಅವರನ್ನು ಕಳುಹಿಸಲಾಗುತ್ತಿದೆ.
ಗೋಪಾಲ್ ಅವರನ್ನು ‘ಕನ್ನಡಪ್ರಭ’ ಸಂಪರ್ಕಿಸಿದಾಗ ಮೂರು ವರ್ಷ ಅಯೋಧ್ಯೆಯಲ್ಲಿ ಇದ್ದು ಮಂದಿರ ನಿರ್ಮಾಣ ಕೆಲಸ ನೋಡಿಕೊಳ್ಳಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ರವಿವಾರ ಸಂಜೆ ಅಯೋಧ್ಯೆ ತಲುಪುತ್ತೇನೆ ಎಂದು ಹೇಳಿದರು.
2024ರ ಲೋಕಸಭೆ ಚುನಾವಣೆಗೆ ಮುನ್ನ ಮಂದಿರ ನಿರ್ಮಾಣ ಪೂರ್ಣ
ಈಗಿನ ಮಾಹಿತಿ ಪ್ರಕಾರ, 2024ರ ಲೋಕಸಭಾ ಚುನಾವಣೆಯ ಸ್ವಲ್ಪ ಮುಂಚೆ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಲಿದ್ದು ಪ್ರಧಾನಿ ನರೇಂದ್ರ ಮೋದಿ ಮುಂದಿನ ಸಲ ಇದೇ ವಿಷಯ ಇಟ್ಟುಕೊಂಡು ಜನರ ಎದುರು ಹೋಗಲಿದ್ದಾರೆ. ಶ್ರೀರಾಮ ಜನ್ಮ ಭೂಮಿ ತೀರ್ಥ ಟ್ರಸ್ವ್ ಮಂದಿರ ನಿರ್ಮಾಣ ಮಾಡಲಿದ್ದು ಇದರ ಜೊತೆಗೆ ಮೋದಿ ಮತ್ತು ಯೋಗಿ ಆದಿತ್ಯನಾಥ್ ಸರ್ಕಾರಗಳು ಪ್ರಭು ಶ್ರೀ ರಾಮಚಂದ್ರ ವಿಮಾನ ನಿಲ್ದಾಣ, ರೈಲು ನಿಲ್ದಾಣಗಳನ್ನು ನಿರ್ಮಿಸಲಿವೆ. ಖಾಸಗಿ ಕಂಪನಿಗಳಿಗೆ ಪಂಚತಾರಾ ಹೋಟೆಲ… ನಿರ್ಮಿಸಲು ಜಾಗ ನೀಡಲಾಗುತ್ತಿದೆ. ಸರಯೂ ನದಿ ದಂಡೆಯನ್ನು ಸಾಬರಮತಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕೂಡ ಯೋಜನೆ ರೂಪಿತವಾಗಿದೆ ಎನ್ನಲಾಗಿದೆ.