‘ಸೋಮನಾಥ ಮಂದಿರದ ಪುನರುತ್ಥಾನ ಕಾರ್ಯದಲ್ಲಿ ನನ್ನನ್ನು ಗುರುತಿಸಿಕೊಳ್ಳಲು ಹೆಮ್ಮೆಪಡುತ್ತೇನೆ. ಆದರೆ ದೇವಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಪಡೆಯುವಂತಿಲ್ಲ.’ ಗಾಂಧೀಜಿಯವರು ಭಾರತದ ಉಕ್ಕಿನ ಮನುಷ್ಯ ಸರ್ದಾರ್‌ ಪಟೇಲರಿಗೆ ವಿಧಿಸಿದ್ದ ನಿಬಂಧನೆ ಇದು. ಈಗಿನ ಗುಜರಾತಿನ ಪಶ್ಚಿಮ ಕರಾವಳಿಯ ವೇರಾವಲ್‌ನಲ್ಲಿರುವ ಜ್ಯೋತಿರ್ಲಿಂಗ ಶಿವನ ಸೋಮನಾಥ ದೇವಸ್ಥಾನದ ಕಥೆ ಏಳು-ಬೀಳುಗಳದ್ದು. ಪದೇಪದೇ ಪರಕೀಯರ ಆಕ್ರಮಣದಿಂದ ನಾಶವಾಗಿ, ಅವಮಾನಕ್ಕೊಳಗಾಗಿ  ಮತ್ತೆ ತಲೆಯೆತ್ತಿ ನಿಂತಿರುವ ಮಂದಿರವದು.

ಸೋಮನಾಥ ದೇಗುಲದ ಕತೆ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ, ದೇಶ ವಿಭಜನೆಯ ವೇಳೆ ಸೌರಾಷ್ಟ್ರದ ಕಡಲ ಬದಿಯಲ್ಲಿರುವ ಜುನಾಗಢದಲ್ಲಿ ಆಳ್ವಿಕೆ ನಡೆಸುತ್ತಿದ ್ದಮೊಹಮ್ಮದ್‌ ಮಹಾಬತ್‌ ಖಾನ್‌ಜಿ ಪಾಕಿಸ್ತಾನಕ್ಕೆ ಸೇರುವುದಾಗಿ ಹೇಳಿದರು. ತನ್ನ ಸಂಸ್ಥಾನದಲ್ಲಿ ಶೇ.80 ಹಿಂದುಗಳಿದ್ದಾರೆ ಎಂಬುದು ತಿಳಿದಿದ್ದರೂ ಆತ ಭಾರತಕ್ಕೆ ಸೇರಲು ಒಪ್ಪಲಿಲ್ಲ. ಪಾಕ್‌ ಪ್ರಧಾನಿ ಮೊಹಮ್ಮದ್‌ ಆಲಿ ಜಿನ್ನಾ ಕೂಡ ಜುನಾಗಢವನ್ನು ಪಾಕ್‌ಗೆ ಸೇರಿಸಿಕೊಳ್ಳುವ ನಿರ್ಣಯ ಅಂಗೀಕರಿಸಿದರು.

ಇದರಿಂದ ಕ್ರುದ್ಧರಾದ ಸರ್ದಾರ್‌ ಪಟೇಲರು, ಈ ವಿಲೀನ ಪ್ರಕ್ರಿಯೆ ಪೂರ್ಣಗೊಂಡಲ್ಲಿ ಮತ್ತಷ್ಟುಕೋಮು ಗಲಭೆಗಳು ಸಂಭವಿಸುತ್ತವೆ ಎಂದರಿತು, ವಿಲೀನ ಪ್ರಕ್ರಿಯೆಯನ್ನು ರದ್ದು ಪಡಿಸುವಂತೆ ಪಾಕಿಸ್ತಾನಕ್ಕೆ ಗಡುವು ನೀಡಿದರು. ಪಾಕಿಸ್ತಾನ ಮಾತು ಕೇಳದಿದ್ದಾಗ, ಸ್ವಾತಂತ್ರ್ಯ ಹೋರಾಟಗಾರ ಸಮಲ್‌ ದಾಸ್‌ ಗಾಂಧಿ ನೇತೃತ್ವದಲ್ಲಿ ಜುನಾಗಢದಲ್ಲಿ ತಾತ್ಕಾಲಿಕ ಸರ್ಕಾರ ರಚನೆ ಮಾಡಿಸಿದರು. ಭಾರತದ ಸೈನ್ಯವನ್ನು ಎದುರಿಸುವ ಶಕ್ತಿಯಿಲ್ಲದೆ, ಸಂಸ್ಥಾನವನ್ನು ಭಾರತಕ್ಕೆ ಸೇರ್ಪಡೆ ಮಾಡಲು ಒಪ್ಪಲಾಯಿತು.

ಈ ಪ್ರದೇಶವನ್ನು ಸಂಪೂರ್ಣ ನಿಯಂತ್ರಣಕ್ಕೆ ಪಡೆಯುವ ನಿಟ್ಟಿನಲ್ಲಿ 1947ರ ನವೆಂಬರ್‌ನಲ್ಲಿ ಸರ್ದಾರ್‌ ಪಟೇಲರು ಜುನಾಗಢಕ್ಕೆ ಭೇಟಿ ನೀಡಿದರು. ಇದೇ ಸಮಯದಲ್ಲಿ, ಸೋಮನಾಥ ದೇವಸ್ಥಾನವನ್ನು ಪುನರ್‌ ನಿರ್ಮಿಸುವ ಐತಿಹಾಸಿಕ ಘೋಷಣೆಯನ್ನೂ ಮಾಡಿದರು. ಘೋಷಣೆ ಮಾಡಿದ ಕೂಡಲೇ ನವಾನಗರದ ಜಾಮ್‌ ಸಾಹೇಬರು ಒಂದು ಲಕ್ಷ ರು. ದೇಣಿಗೆ ನೀಡಿದರು. ಸಮಲ್‌ ದಾಸ್‌ ಗಾಂಧಿ 51 ಸಾವಿರ ರು. ನೀಡಿದರು.

ನೇರವಾಗಿ ದೆಹಲಿಗೆ ಬಂದವರೇ ಸೋಮನಾಥ ದೇವಸ್ಥಾನ ನಿರ್ಮಾಣಕ್ಕೆ ಸರ್ಕಾರದಿಂದ ಒಪ್ಪಿಗೆ ಪಡೆದರು. ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂಬ ನಿರ್ಧಾರವನ್ನೂ ಕೈಗೊಳ್ಳಲಾಯಿತು. ಸರ್ಕಾರದ ನಿರ್ಧಾರವನ್ನು ತಿಳಿಸಲು ಸರ್ದಾರ್‌ ಪಟೇಲರು ಕೆ.ಎಂ.ಮುನ್ಷಿ, ಎನ್‌.ವಿ.ಗಾಡ್ಗೀಳ್‌ ಮುಂತಾದವರನ್ನು ಭೇಟಿಯಾದಾಗ, ಗಾಂಧೀಜಿ ದೇವಸ್ಥಾನ ಸಂಪೂರ್ಣವಾಗಿ ಜನರ ಹಣದಿಂದಲೇ ನಿರ್ಮಾಣ ಆಗಬೇಕು ಎಂದು ಹೇಳಿದರು. ಸೋಮನಾಥ ಮಂದಿರ ನಿರ್ಮಾಣ, ನಿರ್ವಹಣೆಗೆ ಟ್ರಸ್ಟ್‌ ರಚಿಸಲಾಯಿತು. ಜಾಮಾ ಸಾಹೇಬರ ಹಣವನ್ನು ಹಿಂದಿರುಗಿಸಿದ ಪಟೇಲರು, ಟ್ರಸ್ಟ್‌ಗೆ ಹಣ ನೀಡಬಹುದು ಎಂದರು. 1949ರ ವೇಳೆಗೆ ಟ್ರಸ್ಟ್‌ಗೆ 25 ಲಕ್ಷ ರು. ದೇಣಿಗೆ ಸಂಗ್ರಹವಾಗಿತ್ತು. ಇದು ಸೋಮನಾಥ ಮಂದಿರ ನಿರ್ಮಾಣವಾದ ಬಗೆ.

ವಿವೇಕಾನಂದ ಶಿಲಾಸ್ಮಾರಕ

ಇಂತಹದ್ದೇ ಇನ್ನೊಂದು ಉದಾಹರಣೆ ಎಂದರೆ ಕನ್ಯಾಕುಮಾರಿಯಲ್ಲಿರುವ ಸ್ವಾಮಿ ವಿವೇಕಾನಂದ ಶಿಲಾಸ್ಮಾರಕ. ಸ್ವಾಮಿ ವಿವೇಕಾನಂದರಿಗೆ ತಮ್ಮ ಜೀವನದ ಸಾಕ್ಷಾತ್ಕಾರ ಒದಗಿಸಿದ ಬೃಹತ್‌ ಬಂಡೆಯ ಮೇಲೆ 1962ರಲ್ಲಿ ಸ್ವಾಮಿ ವಿವೇಕಾನಂದರ ಜನ್ಮಶತಮಾನೋತ್ಸವ ವರ್ಷದಂದು ವಿವೇಕಾನಂದರ ಸ್ಮಾರಕ ನಿರ್ಮಿಸುವ ನಿರ್ಧಾರವನ್ನು ವಿವೇಕಾನಂದರಿಂದ ಪ್ರೇರಿತರಾದವರು ಮಾಡಿದರು. ಆದರೆ ಬಂಡೆಯ ಸುತ್ತಮುತ್ತ ಇದ್ದ ಕ್ರೈಸ್ತ ಮೀನುಗಾರರ ಗುಂಪು ಇದನ್ನು ವಿರೋಧಿಸಿತು. ಕೊನೆಗೆ ಈ ವಿಚಾರ ಮದ್ರಾಸ್‌ ಹೈಕೋರ್ಟ್‌ವರೆಗೂ ಹೋಗಿ, ಇದು ವಿವೇಕಾನಂದ ಶಿಲೆ ಅಲ್ಲದೆ ಮತ್ತೇನೂ ಅಲ್ಲ ಎಂಬ ಸ್ಪಷ್ಟಆದೇಶ ಲಭಿಸಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ 2ನೇ ಸರಸಂಘಚಾಲಕ ಮಾಧವ ಸದಾಶಿವ ರಾವ್‌ ಗೋಳ್ವಲ್ಕರ್‌ (ಗುರೂಜಿ) ಅವರ ಪ್ರೇರಣೆ ಮೇರೆಗೆ ಸ್ವಾಮಿ ವಿವೇಕಾನಂದ ಶಿಲಾ ಸ್ಮಾರಕ ಟ್ರಸ್ಟ್‌ ಸ್ಥಾಪನೆ ಮಾಡಲಾಯಿತು.

ಆರೆಸ್ಸೆಸ್ಸಿನ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಏಕನಾಥ ರಾನಡೆ ಈ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದರು. ಆದರೆ, ಮದ್ರಾಸಿನ ಮುಖ್ಯಮಂತ್ರಿಯಾಗಿದ್ದ ಭಕ್ತವತ್ಸಲಂ ಅವರು ಸ್ಮಾರಕಕ್ಕೆ ಒಪ್ಪಿಗೆ ನೀಡಲಿಲ್ಲ. ಬೇಕಿದ್ದರೆ ಇದು ವಿವೇಕಾನಂದ ಶಿಲೆ ಎಂದು ಸಣ್ಣ ಫಲಕ ಅಳವಡಿಸಲು ಅನುಮತಿ ನೀಡುತ್ತೇನೆ ಎಂದರು. ಅಂದಿನ ಕೇಂದ್ರ ಸಂಸ್ಕೃತಿ ಸಚಿವರಾಗಿದ್ದ ಹುಮಾಯೂನ್‌ ಕಬೀರ್‌ ಸ್ಮಾರಕ ನಿರ್ಮಾಣದಿಂದ ಬಂಡೆಯ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆ ಆಗುತ್ತದೆ ಎಂದರು.

ಪಶ್ಚಿಮ ಬಂಗಾಳದವರೇ ಆದ ಹುಮಾಯೂನ್‌ ಕಬೀರ್‌, ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ವಿಚಾರ ಪಶ್ಚಿಮ ಬಂಗಾಳದಲ್ಲಿ ಹಬ್ಬಿ, ಕಬೀರ್‌ ಮೌನವಾದರು. ಆದರೆ ಭಕ್ತವತ್ಸಲಂ ಒಪ್ಪಲಿಲ್ಲ. ಕೊನೆಗೆ, ಲಾಲ್‌ಬಹದ್ದೂರ್‌ ಶಾಸ್ತ್ರಿ ಅವರ ಸಲಹೆ ಮೇರೆಗೆ ಏಕನಾಥ ರಾನಡೆ ಶಿಲಾಸ್ಮಾರಕ ನಿರ್ಮಾಣಕ್ಕೆ 323 ಸಂಸದರ ಸಹಿ ಪಡೆದರು. ಬಹುತೇಕ ಕಾಂಗ್ರೆಸ್‌ ಸಂಸದರೇ ಇದ್ದದ್ದರಿಂದ, ತಮ್ಮ ಪಕ್ಷದವರೇ ಒಪ್ಪಿಗೆ ನೀಡಿದ ಯೋಜನೆಯನ್ನು ವಿರೋಧಿಸಲು ಭಕ್ತವತ್ಸಲಂ ಅವರಿಂದ ಸಾಧ್ಯವಾಗಲಿಲ್ಲ.

1 ರುಪಾಯಿಯ ಕೂಪನ್‌

ಈಗ ಸ್ಮಾರಕಕ್ಕೆ ಹಣ ಸಂಗ್ರಹಿಸುವ ಸವಾಲು. ಇಲ್ಲಿಯೂ ಏಕನಾಥ ರಾನಡೆ ಅವರ ಕ್ರಿಯಾಶೀಲತೆ ಕೆಲಸ ಮಾಡಿತು. ಆರೆಸ್ಸೆಸ್ಸನ್ನು ವಿರೋಧಿಸುತ್ತಿದ್ದ ಮುಖ್ಯಮಂತ್ರಿಗಳನ್ನೂ ಭೇಟಿ ಮಾಡಿ, ಈಶಾನ್ಯ ರಾಜ್ಯಗಳೂ ಸೇರಿದಂತೆ ಪ್ರತಿ ರಾಜ್ಯದಿಂದ ಸ್ಮಾರಕಕ್ಕೆ ದೇಣಿಗೆ ಪಡೆದರು. ಅದಕ್ಕಿಂತಲೂ ಹೆಚ್ಚಾಗಿ, ಕೇವಲ 1 ರು. ಕೂಪನ್‌ ಮೂಲಕ ದೇಶದ ಎಲ್ಲ ಜನರೂ ಸ್ಮಾರಕ ನಿರ್ಮಾಣದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದರು. ಒಟ್ಟು ಸಂಗ್ರಹವಾದ ಹಣದಲ್ಲಿ ಹೆಚ್ಚಿನ ಭಾಗವನ್ನು ಭಾರತದ ಸಾಮಾನ್ಯ ನಾಗರಿಕರೇ ನೀಡಿದ್ದರು.

ಆರು ವರ್ಷದ ನಿರಂತರ ಪರಿಶ್ರಮದ ನಂತರ 1970ರಲ್ಲಿ ಭವ್ಯವಾದ ಶಿಲಾಸ್ಮಾರಕ ತಲೆಯೆತ್ತಿ ನಿಂತಿತು. ಶಿಲಾಸ್ಮಾರಕ ಉದ್ಘಾಟನೆಯಾಗಿ ಕೆಲವೇ ದಿನಗಳ ನಂತರ ಅಂದಿನ ಪ್ರಧಾನಿ ಇಂದಿರಾಗಾಂಧಿ ಭೇಟಿ ನೀಡಿದರು. ದೇಶಕ್ಕೆ ಇಂಥದ್ದೊಂದು ಸ್ಮಾರಕವನ್ನು ನೀಡಿದ ಸಮಿತಿಗೆ ತುಂಬು ಹೃದಯದ ಧನ್ಯವಾದ ಎಂದರು. 2014ರಲ್ಲಿ ಏಕನಾಥ ರಾನಡೆ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನರ ಸಹಕಾರವನ್ನು ಯಾವ ರೀತಿ ಪಡೆಯಬೇಕು ಎಂಬುದಕ್ಕೆ ಏಕನಾಥ ರಾನಡೆ ಅವರು ಉದಾಹರಣೆ ಎಂದು ಸ್ಮರಿಸಿದರು.

ರಾಮ ಮಂದಿರಕ್ಕೂ ನಿಧಿ ಸಂಗ್ರಹ

ಇದೇ ಭವ್ಯ ಪರಂಪರೆಯನ್ನು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದಲ್ಲಿ ಮುಂದುವರಿಸಲಾಗುತ್ತಿದೆ. ಇದೀಗ ಅಯೋಧ್ಯೆಯಲ್ಲಿ ಸುಮಾರು 490 ವರ್ಷಗಳ ಸಂಘರ್ಷದ ನಂತರ ನಿರ್ಮಾಣವಾಗುತ್ತಿರುವ ಭವ್ಯ ಮಂದಿರಕ್ಕೆ ಸರ್ಕಾರದಿಂದ ಒಂದು ಬಿಡಿಗಾಸೂ ಪಡೆಯಬಾರದು ಎಂಬ ನಿರ್ಧಾರವನ್ನು ಮಹಂತ ನೃತ್ಯಗೋಪಾಲದಾಸ್‌ ಮಹಾರಾಜರ ನೇತೃತ್ವದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ತೆಗೆದುಕೊಂಡಿದೆ. ಕರ್ನಾಟಕದ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರೂ ಈ ಟ್ರಸ್ಟ್‌ ಸದಸ್ಯರಾಗಿರುವುದು ಕನ್ನಡಿಗರಿಗೆ ಹೆಮ್ಮೆ. ಇದೇ ಜನವರಿ 15ರಿಂದ ಫೆಬ್ರವರಿ 27ರ ವರೆಗೆ ದೇಶಾದ್ಯಂತ ಪ್ರತಿ ಮನೆಮನೆಗೆ ತೆರಳಿ ಜನರಿಂದ ದೇಣಿಗೆ ಸಂಗ್ರಹಿಸುವ ‘ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ’ ಹಮ್ಮಿಕೊಳ್ಳಲಾಗಿದೆ. ಕನಿಷ್ಠ 10 ರು.ನಿಂದ ರಾಮಮಂದಿರ ನಿರ್ಮಾಣಕ್ಕೆ ಹಣ ನೀಡಲು ಅವಕಾಶವಿದೆ. ಹಣ ಸಂಗ್ರಹಿಸಿಕೊಡುವ ಹೊಣೆಯನ್ನು ವಿಶ್ವ ಹಿಂದು ಪರಿಷತ್‌ ವಹಿಸಿಕೊಂಡಿದೆ.

ದೇಗುಲ ದಾಳಿಗೆ ಒಳಗಾಗುವುದೇಕೆ?

ಸ್ವಾಮಿ ವಿವೇಕಾನಂದ ಶಿಲಾಸ್ಮಾರಕಕ್ಕೆ ಇಂದಿರಾ ಗಾಂಧಿಯವರ ಭೇಟಿ ಸಮಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ಮಿಷನ್‌ನ ಸ್ವಾಮಿ ರಂಗನಾಥಾನಂದರು ‘ನಮ್ಮ ಸಂಸ್ಕೃತಿಯಲ್ಲಿ ಎಲ್ಲ ಹಿರಿಮೆಗಳು ಇದ್ದರೂ, ವಿಶ್ವದ ಕೆಲವು ಅತ್ಯುನ್ನತ ಅಧ್ಯಾತ್ಮಿಕ ವ್ಯಕ್ತಿತ್ವಗಳನ್ನು ನಾವು ಸೃಷ್ಟಿಸಿದರೂ, ಜನಸಾಮಾನ್ಯರನ್ನು ನಿರ್ಲಕ್ಷಿಸಿದೆವು. ಶತಮಾನಗಳವರೆಗೆ ಈ ತಪ್ಪು ನಡೆಯಿತು ಎಂಬುದನ್ನು ಸ್ವಾಮಿ ವಿವೇಕಾನಂದರು ಕಂಡುಕೊಂಡಿದ್ದರು’ ಎಂದು ಹೇಳಿದ್ದರು. ಸೋಮನಾಥ ಮಂದಿರ ಪದೇಪದೆ ಏಕೆ ದಾಳಿಗೊಳಗಾಗುತ್ತದೆ ಎಂದರೆ ಇಲ್ಲಿನ ಸಮಾಜಕ್ಕೆ ಆ ದೇವಸ್ಥಾನ ತಮ್ಮಿಂದ ನಿರ್ಮಾಣವಾಗಿದೆ ಎಂಬ ಭಾವನೆ ಇಲ್ಲ.

ಹಾಗೆಯೇ, ಉನ್ನತ ಸಿದ್ಧಾಂತಗಳನ್ನು ಬೋಧಿಸುವ ಹಿಂದು ಸಮಾಜದಲ್ಲಿ ಈಗಲೂ ಮೇಲು-ಕೀಳೆಂಬ ಹೀನ ಪದ್ಧತಿಗಳಿವೆ. ಇದೇ ಕಾರಣಕ್ಕೆ ಬಹುಶಃ ಗಾಂಧೀಜಿಯವರು ಸರ್ಕಾರದಿಂದ ಹಣ ಪಡೆಯದೆ ಜನರಿಂದ ಪಡೆಯಿರಿ ಎಂದು ತಿಳಿಸಿದ್ದರು. ಇದೇ ಕಾರಣಕ್ಕೆ ಏಕನಾಥ ರಾನಡೆ ಅವರು ಜನರಿಂದಲೇ ಹಣ ಪಡೆದು ವಿವೇಕಾನಂದರ ಶಿಲಾಸ್ಮಾರಕ ನಿರ್ಮಿಸಿದರು. ಶ್ರೀರಾಮ ಮಂದಿರ ನಿರ್ಮಾಣ ಆಗುವುದೆಷ್ಟುಮುಖ್ಯವೋ, ಮತ್ತೊಮ್ಮೆ ದಾಸ್ಯದತ್ತ ಮನಸ್ಸು ಹೊರಳದಂತೆ ಕಾಪಾಡುವುದೂ ಅಷ್ಟೇ ಮುಖ್ಯ. ಅಲ್ಲೆಲ್ಲೋ ಉತ್ತರ ಪ್ರದೇಶದಲ್ಲಿ, ಯಾವುದೋ ಕೆಲವು ಶ್ರೀಮಂತರ ಹಣದಲ್ಲಿ ರಾಮಮಂದಿರ ನಿರ್ಮಾಣವಾಗಿದೆ ಎನ್ನುವಂತಾಗಬಾರದು. ಶ್ರೀರಾಮ ಹೇಗೆ ಪ್ರತಿ ಭಾರತೀಯನ ಆದರ್ಶ ಪುರುಷನೋ ಅದೇ ರೀತಿ ಮಂದಿರವೂ ಪ್ರತಿ ಭಾರತೀಯನ ಸ್ವಂತದ್ದಾಗಬೇಕು.

ಯಾವ ರೀತಿ ಸೋಮನಾಥ ಮಂದಿರದ ಟ್ರಸ್ಟ್‌ ಮೂಲಕ ಸುತ್ತಲಿನ ಜಿಲ್ಲೆಯ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಗುತ್ತಿದೆಯೋ, ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿ ನೀಡುವುದೂ ಸೇರಿ ಅನೇಕ ಸಾಮಾಜಿಕ ಸೇವಾ ಚಟುವಟಿಕೆ ನಡೆಸಲಾಗುತ್ತಿದೆಯೋ, ಸೋಮನಾಥ ಮಂದಿರ ಟ್ರಸ್ಟ್‌ ಮಾದರಿಯಲ್ಲೇ ಸ್ಥಾಪನೆಯಾಗಿರುವ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ ಮೂಲಕವೂ ಇಂಥದ್ದೇ ಸಮಾಜಮುಖಿ ಸಂದೇಶಗಳು ಲಭಿಸುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ರಾಮನ ಕಾರ್ಯದಲ್ಲಿ ಅಳಿಲೂ ತನ್ನ ಸಂಪೂರ್ಣ ಶಕ್ತಿ ವ್ಯಯಿಸಿ ಸೇವೆ ಮಾಡಿದಂತೆ ನಾವೆಲ್ಲರೂ ರಾಮಮಂದಿರ ನಿರ್ಮಾಣದಲ್ಲಿ ಭಾಗಿಯಾಗೋಣ. ರಾಮಮಂದಿರ ಯಾರ ವಿರುದ್ಧವೂ ಅಲ್ಲ. ನಮ್ಮೆಲ್ಲ ಪರಸ್ಪರ ಭೇದಗಳನ್ನು ಬದಿಗಿಟ್ಟು ಮಂದಿರ ನಿರ್ಮಾಣದಲ್ಲಿ ಭಾಗಿಯಾಗೋಣ, ದೇಶವನ್ನು ಮತ್ತಷ್ಟುಒಗ್ಗೂಡಿಸೋಣ.

- ಎಂ.ಆರ್‌.ವೆಂಕಟೇಶ್‌, ಬೆಂ.ಮ.ಸಾ.ನಿ ಉಪಾಧ್ಯಕ್ಷ