ನವದೆಹಲಿ(ಫೆ.08): ಇತ್ತೀಚೆಗಷ್ಟೇ ರೈತರ ಪ್ರತಿಭಟನಾನಿರತ ದಿಲ್ಲಿಯ ಗಾಜಿಪುರ ಗಡಿಯಲ್ಲಿ ಸಸಿ ನೆಡುವ ಮೂಲಕ ರೈತರ ಪ್ರತಿಭಟನೆ ತಡೆಗೆ ಮೊಳೆ ಹೊಡೆದ ದಿಲ್ಲಿ ಪೊಲೀಸರಿಗೆ ತಿರುಗೇಟು ನೀಡಿದ್ದ ರೈತ ಹೋರಾಟಗಾರ ರಾಕೇಶ್‌ ಟಿಕಾಯತ್‌ ಅವರು, ಇದೀಗ ಪೊಲೀಸ್‌ ಮತ್ತು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕುಟುಂಬ ಸದಸ್ಯರನ್ನು ಪ್ರತಿಭಟನಾ ಸ್ಥಳಕ್ಕೆ ಕರೆತರುವಂತೆ ರೈತ ಹೋರಾಟಗಾರರಿಗೆ ಬಹಿರಂಗ ಕರೆ ನೀಡಿದ್ದಾರೆ.

ಈ ಬಗ್ಗೆ ಭಾನುವಾರ ಮಾತನಾಡಿದ ಭಾರತೀಯ ಕಿಸಾನ್‌ ಮೋರ್ಚಾ ನಾಯಕ ರಾಕೇಶ್‌ ಟಿಕಾಯತ್‌ ಅವರು, ಕೇಂದ್ರ ಸರ್ಕಾರ ನಮ್ಮ ಬೇಡಿಕೆಯನ್ನು ಆಲಿಸಲೇಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪೊಲೀಸ್‌, ಸೇನೆ ಸೇರಿದಂತೆ ದೇಶದ ಭದ್ರತಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ರೈತ ಕುಟುಂಬದ ಸದಸ್ಯರು ಸಹ ತಮ್ಮ ಸಮವಸ್ತ್ರದಲ್ಲಿ ರೈತ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.

"

ಗಣರಾಜ್ಯೋತ್ಸವ ಟ್ರ್ಯಾಕ್ಟರ್‌ ಪರೇಡ್ ವೇಳೆ ನಡೆದ ಹಿಂಸಾಚಾರದ ಬಳಿಕ ರೈತರ ಹೋರಾಟ ಇನ್ನು ಮುಗಿದೇ ಹೋಯಿತು ಎಂಬಷ್ಟರಲ್ಲಿ, ತಮ್ಮ ಒಂದು ಭಾವನಾತ್ಮಕ ಕರೆಯ ಮೂಲಕ ರೈತರ ಹೋರಾಟದ ದಿಕ್ಕನ್ನೇ ರಾಕೇಶ್‌ ಟಿಕಾಯತ್‌ ಅವರು ಬದಲಿಸಿದ್ದರು. ಅಲ್ಲದೆ ತಮ್ಮನ್ನು ಬೆಂಬಲಿಸುವ ರೈತರು ತಾವಿರುವ ಪ್ರದೇಶದ ಒಂದಿಡಿ ಮಣ್ಣನ್ನು ಗಾಜಿಪುರಕ್ಕೆ ತರಬೇಕು. ಇದಕ್ಕೆ ಬದಲಿಯಾಗಿ ಗಾಜಿಪುರದ ಒಂದಿಡಿ ಮಣ್ಣನ್ನು ತಮ್ಮ ಜೊತೆ ಕೊಂಡೊಯ್ಯಬೇಕು ಎಂದು ಕರೆ ನೀಡಿದ್ದರು.