ನವದೆಹಲಿ(ಫೆ.01): ‘ರೈತರ ಜತೆಗೆ ಮಾತುಕತೆಗೆ ಈಗಲೂ ಬದ್ಧ’ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರೈತ ಮುಖಂಡ ನರೇಶ್‌ ಟಿಕಾಯತ್‌, ‘ಪ್ರಧಾನಿ ಹುದ್ದೆಗೆ ನಾವು ಗೌರವ ನೀಡುತ್ತೇವೆ. ಆದರೆ ಇದೇ ವೇಳೆ ರೈತರ ಆತ್ಮಗೌರವ ಕಾಯುವುದೂ ಅಷ್ಟೇ ಮುಖ್ಯ’ ಎಂದಿದ್ದಾರೆ.

ಪಿಟಿಐ ಸುದ್ದಿಸಂಸ್ಥೆ ಜತೆ ಭಾನುವಾರ ಮಾತನಾಡಿದ ಅವರು, ‘ರೈತ ಕಾಯ್ದೆ ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ನಮ್ಮವರನ್ನು ಬಿಡಬೇಕು ಹಾಗೂ ಮಾತುಕತೆಗೆ ಪೂರಕವಾದ ವಾತಾವರಣ ಸೃಷ್ಟಿಸಬೇಕು. ಒಂದು ಗೌರವಯುತ ಪರಿಹಾರ ಸಿಗಬೇಕು. ಒತ್ತಡಕ್ಕೆ ಒಳಗಾಗಿ ಯಾವುದಕ್ಕೂ ನಾವು ಒಪ್ಪಿಕೊಳ್ಳುವುದಿಲ್ಲ’ ಎಂದರು.

‘ಪ್ರಧಾನಿ ಹುದ್ದೆಗೆ ನಾವು ಗೌರವ ನೀಡುತ್ತೇವೆ. ಸಂಸತ್ತು ಅಥವಾ ಸರ್ಕಾರ ನಮ್ಮ ಮುಂದೆ ತಲೆಬಾಗಬೇಕು ಎಂದು ನಾವು ಬಯಸುವುದಿಲ್ಲ. ಆದರೆ ರೈತರ ಆತ್ಮಗೌರವದ ರಕ್ಷಣೆ ಕೂಡ ಏಗಬೇಕು. ಸಂಧಾನಕ್ಕೆ ಮಧ್ಯದ ಮಾರ್ಗ ಕಂಡುಕೊಳ್ಳಬೇಕು. ಮಾತುಕತೆ ನಡೆಯಬೇಕು’ ಎಂದರು.