* ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಕಳೆದ 7 ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆ* ರೈತ ಹೋರಾಟ ತೀವ್ರಕ್ಕೆ ಟಿಕಾಯತ್ 3 ಟಿ ಸೂತ್ರ* ಟ್ಯಾಂಕ್ ಆನ್ ಬಾರ್ಡರ್, ಟ್ರ್ಯಾಕ್ಟರ್ ಆನ್ ಫೀಲ್ಡ್, ಟ್ವೀಟರ್ ಇನ್ ದ ಹ್ಯಾಂಡ್ಸ್ ಆಫ್ ಯೂಥ್
ನವದೆಹಲಿ(ಜೂ.23): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಕಳೆದ 7 ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಇನ್ನಷ್ಟುತೀವ್ರಗೊಳಿಸುವ ನಿಟ್ಟಿನಿಂದ ರೈತ ಮುಖಂಡ ರಾಕೇಶ್ ಟಿಕಾಯತ್, 3 ಟಿ ಸೂತ್ರವನ್ನು ಮುಂದಿಟ್ಟಿದ್ದಾರೆ.
ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಅವರು, ಟ್ಯಾಂಕ್ ಆನ್ ಬಾರ್ಡರ್ (ಗಡಿಯಲ್ಲಿ ಟ್ಯಾಂಕರ್ಗಳ ನಿಯೋಜನೆ), ಟ್ರ್ಯಾಕ್ಟರ್ ಆನ್ ಫೀಲ್ಡ್ (ಹೊಲದಲ್ಲಿ ಟ್ರ್ಯಾಕ್ಟರ್ಗಳ ಬಳಕೆ) ಮತ್ತು ಟ್ವೀಟರ್ ಇನ್ ದ ಹ್ಯಾಂಡ್ಸ್ ಆಫ್ ಯೂಥ್ (ಯುವಕರ ಕೈಯಲ್ಲಿ ಟ್ವಿಟರ್) 3 ಟಿ ಸೂತ್ರವಾಗಿದೆ. ದೇಶವನ್ನು ರಕ್ಷಿಸಲು ಈ ಮೂರು ಸಂಗತಿಗಳು ಮುಖ್ಯವಾಗಿವೆ ಎಂದು ಹೇಳಿದ್ದಾರೆ.
ರೈತ ಹೊಲದಲ್ಲಿ ದುಡಿಯುತ್ತಾನೆ ಮತ್ತು ಟ್ರ್ಯಾಕ್ಟರ್ಗಳನ್ನು ಓಡಿಸುತ್ತಾನೆ. ಅದೇ ರೈತ ಗಡಿಗಳಿಗೆ ತೆರಳಿ ಟ್ಯಾಂಕ್ಗಳನ್ನು ಚಲಾಯಿಸುತ್ತಾನೆ. ಹೊಲದಲ್ಲಿ ಟ್ರ್ಯಾಕ್ಟರ್ ಓಡಿಸುವ ಮತ್ತು ಗಡಿಯಲ್ಲಿ ಟ್ಯಾಂಕ್ಗಳನ್ನು ಬಳಸುವ ಹಲವಾರು ಯೋಧರನ್ನು ನಾವು ಹೊಂದಿದ್ದೇವೆ. ಅದೇ ರೈತ ಫೋನ್ನಲ್ಲಿ ಟ್ವಿಟರ್ ಅನ್ನು ಕೂಡ ಹೊಂದಿದ್ದಾನೆ. ಮೂರು ಟಿ ಸೂತ್ರ ಕೇವಲ ರೈತರ ಹೋರಾಟಕ್ಕಷ್ಟೇ ಅಲ್ಲ. ದೇಶಕ್ಕೂ ಪ್ರಯೋಜನಕಾರಿಯಾಗಿದೆ. ದೇಶದ ಎಲ್ಲಾ ಯೋಧರು ದೇಶದ ಮಕ್ಕಳಾಗಿದ್ದಾರೆ. ಈ ಸೂತ್ರ ಭವಿಷ್ಯದಲ್ಲಿ ನೆರವಾಗಲಿದೆ ಎಂದು ಟಿಕಾಯತ್ ವಿವರಿಸಿದ್ದಾರೆ.
