ನವ​ದೆ​ಹ​ಲಿ(ಸೆ.20): ಕೊರೋನಾ ವಿರುದ್ಧ ಹೋರಾಟ ನಡೆ​ಸು​ತ್ತಿ​ರುವ ವೈದ್ಯರು ಹಾಗೂ ವೈದ್ಯ​ಕೀಯ ಸಿಬ್ಬಂದಿಗೆ ಬಲ ತುಂಬುವ ವಿಧೇ​ಯ​ಕ​ವನ್ನು ರಾಜ್ಯ​ಸಭೆ ಶನಿ​ವಾರ ಅಂಗೀ​ಕ​ರಿ​ಸಿದೆ. ಈ ಪ್ರಕಾರ, ಕೊರೋನಾ ಕರ್ತ​ವ್ಯ​ದಲ್ಲಿ ನಿರ​ತ​ರಾ​ಗಿ​ರುವ ಅಥವಾ ಇತರ ಆರೋಗ್ಯ ಸೇವೆ​ಗ​ಳಲ್ಲಿ ತೊಡ​ಗಿರುವ ವೈದ್ಯರು ಹಾಗೂ ವೈದ್ಯ​ಕೀಯ ಸಿಬ್ಬಂದಿ ಮೇಲೆ ದಾಳಿ ಮಾಡಿ​ದರೆ 7 ವರ್ಷದವ​ರೆ​ಗೆ ಜೈಲು ಶಿಕ್ಷೆ​ಯಾ​ಗ​ಲಿ​ದೆ.

ಈ ಕುರಿ​ತಾದ ‘ಸಾಂಕ್ರಾ​ಮಿಕ ರೋಗ​ಗಳ (ತಿ​ದ್ದು​ಪ​ಡಿ) ಕಾಯ್ದೆ ಮಸೂ​ದೆ-2020’ ವಿಧೇ​ಯ​ಕ​ವನ್ನು ಸರ್ವಾ​ನು​ಮ​ತ​ದಿಂದ ಸದನ ಅಂಗೀ​ಕ​ರಿ​ಸಿತು. ಕಳೆದ ಏಪ್ರಿ​ಲ್‌​ನಲ್ಲೇ ಈ ಕುರಿತ ಸುಗ್ರೀ​ವಾ​ಜ್ಞೆ​ಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಈಗ ಅಂಗೀ​ಕಾ​ರ​ವಾ​ಗಿ​ರುವ ಮಸೂ​ದೆಯು ಸುಗ್ರೀ​ವಾ​ಜ್ಞೆಯ ಸ್ಥಾನ​ವನ್ನು ಅಲಂಕ​ರಿ​ಸ​ಲಿ​ದೆ.

‘ಕೊರೋನಾ ಆರಂಭ​ವಾದ ಬಳಿಕ ದೇಶದ ಹಲವು ಭಾಗ​ಗ​ಳಲ್ಲಿ ವೈದ್ಯರು ಹಾಗೂ ವೈದ್ಯ​ಕೀಯ ಸಿಬ್ಬಂದಿ ಮೇಲೆ ದೌರ್ಜನ್ಯ ನಡೆ​ದಿವೆ. ಇದು ನೋವಿನ ವಿಚಾರ. ಈ ಕಾರ​ಣಕ್ಕೆ ಇವರ ರಕ್ಷಣೆಗೆ ಇಡೀ ದೇಶಕ್ಕೆ ಅನ್ವ​ಯ​ವಾಗುವ ಬಲ​ವಾದ ಕಾನೂನು ಅಗತ್ಯ ಎಂದು ಭಾವಿಸಿ ಈ ಕಠಿಣ ಕಾನೂನು ತರ​ಲಾ​ಗಿದೆ’ ಎಂದು ಆರೋಗ್ಯ ಸಚಿವ ಡಾ| ಹರ್ಷ​ವ​ರ್ಧನ್‌ ಹೇಳಿ​ದ​ರು.

ಈ ಕುರಿತು ನಡೆದ ಚರ್ಚೆಯ ವೇಳೆ, ಆಸ್ಪ​ತ್ರೆಯ ಸ್ವಚ್ಛತಾ ಸಿಬ್ಬಂದಿ, ಆಶಾ ಕಾರ್ಯ​ಕ​ರ್ತೆ​ಯ​ರು, ತುರ್ತು ಸೇವೆ​ಗ​ಳಲ್ಲಿ ನಿರ​ತ​ರಾ​ಗಿ​ರುವ ಪೊಲೀ​ಸರು ಹಾಗೂ ಇತರ ಸಿಬ್ಬಂದಿ​ಗ​ಳ​ನ್ನೂ ಕಾಯಿ​ದೆಯ ವ್ಯಾಪ್ತಿಗೆ ತರ​ಬೇಕು ಎಂಬ ಆಗ್ರಹ ಸದ​ಸ್ಯ​ರಿಂದ ಕೇಳಿ​ಬಂತು. ಇನ್ನೂ ಕೆಲ​ವರು ಖಾಸಗಿ ಆಸ್ಪ​ತ್ರೆ​ಗಳು ಕೊರೋನಾ ಸಂದ​ರ್ಭ​ವನ್ನು ದುರ್ಬ​ಳಕೆ ಮಾಡಿ​ಕೊಂಡು ವಸೂಲಿ ದಂಧೆ​ಯಲ್ಲಿ ನಿರ​ತ​ವಾ​ಗಿವೆ ಎಂದೂ ಆರೋ​ಪಿ​ಸಿ​ದ​ರು.

ಕಾಯ್ದೆ​ಯ​ಲ್ಲೇ​ನಿ​ದೆ?

- ವೈದ್ಯರು, ವೈದ್ಯ ಸಿಬ್ಬಂದಿಗೆ ಹಿಂಸಿಸಿದರೆ 3 ತಿಂಗಳಿನಿಂದ 5 ವರ್ಷದವರೆಗೆ ಜೈಲು. 50 ಸಾವಿರ​ದಿಂದ 2 ಲಕ್ಷ ರು.ವರೆಗೆ ದಂಡ

- ಗಂಭೀರ ಸ್ವರೂಪದ ಗಾಯ ಮಾಡಿದರೆ 6 ತಿಂಗಳಿನಿಂದ 7 ವರ್ಷಗಳವರೆಗೆ ಜೈಲು. 1 ಲಕ್ಷ ರು.ನಿಂದ 5 ಲಕ್ಷ ರು.ವರೆಗೆ ದಂಡ

- ಮನೆ ಮಾಲೀಕರು ಅಥವಾ ನೆರೆಹೊರೆಯ​ವರು ವೈದ್ಯಕೀಯ ಸಿಬ್ಬಂದಿಗೆ ಕಿರು​ಕುಳ ಕೊಟ್ಟರೆ ಅವ​ರಿಗೂ ಶಿಕ್ಷೆ

- ಗಂಭೀರ, ಜಾಮೀನುರಹಿತ ಅಪರಾಧ ಎಂದು ಪರಿಗಣನೆ. ಪೊಲೀಸರು ಬಂಧಿಸಿದರೆ ಠಾಣಾ ಜಾಮೀನಿಲ್ಲ

- ಹಿಂಸೆ ವೇಳೆ ಆಸ್ತಿಪಾಸ್ತಿ ಹಾನಿ ಮಾಡಿದರೆ ನಷ್ಟವಸೂಲಿ. ಮಾರುಕಟ್ಟೆಯ ದುಪ್ಪಟ್ಟು ಮೌಲ್ಯದಂತೆ ಬೆಲೆ ತೆರಬೇಕು