ನವದೆಹಲಿ(ನ.22): ರಾಜ್ಯ ಸಭೆಯ ಮಾರ್ಷಲ್’ಗಳ ಸೇನಾ ಶೈಲಿಯ ಸಮವಸ್ತ್ರ ಹಾಗೂ ಟೋಪಿಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಹೊಸ ಸಮವಸ್ತ್ರವನ್ನು ಹಿಂಪಡಯಲಾಗಿದೆ.  

ಮಾರ್ಷಲ್’ಗಳ ಹೊಸ ಸಮವಸ್ತ್ರಕ್ಕೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೇ ಸರ್ಕಾರದ ಭಾಗವಾಗಿರುವ ಮಾಜಿ ಭೂ ಸೇನಾ ಮುಖ್ಯಸ್ಥ ಜನರಲ್(ನಿವೃತ್ತ) ವಿಕೆ ಸಿಂಗ್ ಕೂಡ ಹೊಸ ಸಮವಸ್ತ್ರ ಮತ್ತು ಟೋಪಿಗೆ ವಿರೋಧ ವ್ಯಕ್ತಪಡಿಸಿದ್ದರು.

ಇದೀಗ ಮಾರ್ಷಲ್’ಗಳಿಗೆ ಹೊಸ ಸಮವಸ್ತ್ರ ನೀಡಲು ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಆದೇಶಿಸಿದ್ದು,  ಸಮವಸ್ತ್ರ ಪರಿಶೀಲನೆಗಾಗಿ ಸಚಿವಾಲಯದ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ರಾಜ್ಯಸಭಾ ಮಾರ್ಷಲ್'ಗಳು ಟೋಪಿ ಧರಿಸದೇ ಕರ್ತವ್ಯಕ್ಕೆ ಹಾಜರಾಗಿದ್ದು, ವಿವಾದಕ್ಕೆ ತೆರೆ ಎಳೆದಂತಾಗಿದೆ.

250ನೇ ಐತಿಹಾಸಿಕ ಕಲಾಪ ನಡೆಸಿದ ರಾಜ್ಯಸಭೆಯಲ್ಲಿ ಮಾರ್ಷಲ್'ಗಳು ಧರಿಸಿದ್ದ ನೂತನ ಸಮವಸ್ತ್ರ ಎಲ್ಲರ ಗಮನವನ್ನು ಸೆಳೆದಿತ್ತು. 

ಮಾರ್ಷಲ್'ಗಳಿಗೆ ಸಾಂಪ್ರದಾಯಿಕ ಭಾರತೀಯ ಉಡುಗೆ ಮತ್ತು ಪೇಟಾದ ಬದಲು, ಕಪ್ಪು ನೇರಳೆ ಬಣ್ಣದ ಕೋಟು ಮತ್ತು ಮಿಲಿಟರಿ ಶೈಲಿಯ ಹಸಿರು ಟೋಪಿಯನ್ನು ನೀಡಲಾಗಿತ್ತು.