ರಜನಿ ರಾಜಕೀಯ ಪ್ರವೇಶ ಇಂದು ನಿರ್ಧಾರ ಸಂಭವ| ಮುಂದಿನ ಚುನಾವಣೆಗೆ ಸ್ಪರ್ಧಿಸ್ತಾರಾ?| ಮತ್ತೆ ತೆರೆಮರೆಗೆ ಸರೀತಾರಾ ಚಿತ್ರ ನಟ?
ಚೆನ್ನೈ(ನ.30): ಸಕ್ರಿಯ ರಾಜಕಾರಣಕ್ಕೆ ಧುಮುಕಲು ಮೀನಮೇಷ ಎಣಿಸುತ್ತಿರುವ ತಮಿಳು ಸೂಪರ್‌ಸ್ಟಾರ್ ರಜನೀಕಾಂತ್ ಕೊನೆಗೂ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಸೋಮವಾರ ಅವರು ತಮ್ಮ ‘ರಜನಿ ಮಕ್ಕಳ್ ಮಂದ್ರಂ’ (ಆರ್‌ಎಂಎಂ) ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳ ಸಭೆ ನಡೆಸಲಿದ್ದು, ಅದರಲ್ಲಿ ಮುಂದಿನ ವರ್ಷದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಥವಾ ಸ್ಪರ್ಧಿಸದಿರುವ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ 2017ರಲ್ಲೇ ಪ್ರಕಟಿಸಿದ್ದ ಅವರು ನಂತರ ನಾನಾ ಕಾರಣಗಳಿಂದ ಸಕ್ರಿಯ ರಾಜಕಾರಣದಿಂದ ದೂರವಿದ್ದರು. ಆದರೆ, ಇತ್ತೀಚೆಗೆ ಅವರು ಚುನಾವಣೆಗೆ ಸ್ಪರ್ಧಿಸುವಂತೆ ಆರ್‌ಎಂಎಂ ಹಾಗೂ ಅವರ ಅಭಿಮಾನಿಗಳ ವಲಯದಲ್ಲಿ ಒತ್ತಡ ಹೆಚ್ಚಾಗಿತ್ತು. ಹೀಗಾಗಿ ಅವರು ಪ್ರಮುಖರ ಸಭೆ ಕರೆದಿದ್ದಾರೆ.
ಕೋಡಂಬಾಕಂನಲ್ಲಿರುವ ರಜನಿ ಒಡೆತನದ ಕಲ್ಯಾಣ ಮಂಟಪದಲ್ಲಿ ಸಭೆ ಕರೆಯಲಾಗಿದೆ. 50 ಜನರು ಸಭೆ ನಡೆಸಲು ಪೊಲೀಸರಿಂದ ಅನುಮತಿ ಕೂಡ ಕೇಳಲಾಗಿದೆ. ಈ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಬಹುದೆಂದು ಹೇಳಲಾಗಿದೆ.
ಈ ವರ್ಷದ ಮಾಚ್‌ರ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ರಜನಿ, ತಮ್ಮ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿದರೂ ತಾವು ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳಿದ್ದರು. ನಂತರ, ಇತ್ತೀಚೆಗೆ ಕೊರೋನಾ ಕಾರಣದಿಂದ ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಅವರು ಬರೆದಿದ್ದರೆನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಆ ಪತ್ರ ಬರೆದಿದ್ದು ತಾವಲ್ಲವೆಂದು ರಜನಿ ಸ್ಪಷ್ಟನೆ ನೀಡಿದ್ದರು. ಆದರೂ, ಆ ಪತ್ರದಲ್ಲಿರುವಂತೆ ತಮಗೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಹಾಗೂ ಪ್ರಚಾರ ಸಮಾವೇಶಗಳನ್ನು ನಡೆಸದಿರಲು ವೈದ್ಯರು ಸಲಹೆ ನೀಡಿದ್ದು ನಿಜವೆಂದು ಒಪ್ಪಿಕೊಂಡಿದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 30, 2020, 9:47 AM IST