ಚೆನ್ನೈ(ಡಿ.16): ದಶಕಗಳ ಹಿಂದೆ ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡಕ್ಟರ್‌ ಆಗಿ, ಹಾಲಿ ಸೂಪರ್‌ಸ್ಟಾರ್‌ ಪಟ್ಟದೊಂದಿಗೆ ರಾಜಕೀಯ ಪ್ರವೇಶಕ್ಕೆ ಸಜ್ಜಾಗಿರುವ ನಟ ರಜನೀಕಾಂತ್‌, ತಮ್ಮ ಪಕ್ಷಕ್ಕೆ ಮಕ್ಕಳ್‌ ಸೆವಾಯ್‌ ಕಟ್ಚಿ ಎಂದು ಹೆಸರಿಡುವ ಮತ್ತು ತಕ್ಷಣಕ್ಕೆ ಆಟೋರಿಕ್ಷಾ ಚಿಹ್ನೆಯೊಂದಿಗೆ ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ಈ ಹಿಂದೆ ರಾಜಕೀಯ ಪ್ರವೇಶದ ಉದ್ದೇಶದಿಂದಲೇ ‘ರಜನಿ ಮಕ್ಕಳ್‌ ಮಂದ್ರಂ’ ಎಂಬ ವೇದಿಕೆಯೊಂದನ್ನು ರಜನಿ ಸ್ಥಾಪಿಸಿದ್ದರು. ಈ ನಡುವೆ ಇತ್ತೀಚೆಗಷ್ಟೇ ರಜನಿ ಹೇಳಿಕೆಯೊಂದನ್ನು ನೀಡಿ ಡಿ.31ಕ್ಕೆ ತಮ್ಮ ರಾಜಕೀಯ ಪ್ರವೇಶ, ಪಕ್ಷದ ಹೆಸರು, ಚಿಹ್ನೆಯ ಘೋಷಣೆ ಮಾಡುವುದಾಗಿ ತಿಳಿಸಿದ್ದರು.

ಈ ನಡುವೆ ರಜನಿ ಅವರ ವೇದಿಕೆಯ ತೂತ್ತುಕುಡಿ ಘಟಕದ ಕಾರ್ಯದರ್ಶಿ ಆ್ಯಂಟೋನಿ ಸ್ಟಾಲಿನ್‌ ಎಂಬುವವರು ಮಕ್ಕಳ್‌ ಸೆವಾಯ್‌ ಕಟ್ಚಿ ಎಂಬ ಹೆಸರಿನಲ್ಲಿ ಪಕ್ಷ ಸ್ಥಾಪನೆಗೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ರಜನೀಕಾಂತ್‌ ಎಂಬ ಹೆಸರು ಸೇರಿಸಿ ಚೆನ್ನೈನ ವಿಳಾಸ ನೀಡಿದ್ದರು. ಜೊತೆಗೆ ರಜನಿ ಅವರ ‘ರಜನಿ ಮಕ್ಕಳ್‌ ಮಂದ್ರಂ’ ವೇದಿಕೆಯ ಚಿಹ್ನೆಯನ್ನೇ ಪಕ್ಷಕ್ಕೂ ಚಿಹ್ನೆಯಾಗಿ ನೀಡುವಂತೆ ಕೇಳಿದ್ದರು. ಇದೀಗ ಆಯೋಗ ಪಕ್ಷವನ್ನು ನೊಂದಾಯಿಸಿಕೊಂಡಿದ್ದು, ಆಟೋ ರಿಕ್ಷಾವನ್ನು ಚಿಹ್ನೆಯಾಗಿ ನೀಡಿದೆ.

ಕೆಲ ಸಮಯದ ಹಿಂದೆ ರಜನಿ ನೊಂದಾವಣಿ ಮಾಡಿರುವ, ಆದರೆ ಇನ್ನೂ ಅಧಿಕೃತವಾಗಿ ಪಕ್ಷವಾಗಿ ಘೋಷಣೆಯಾಗಿರದ ಮಕ್ಕಳ್‌ ಸೆವಾಯ್‌ ಕಟ್ಚಿ (ಎಂಎಸ್‌ಕೆ)ಗೆ ಚುನಾವಣಾ ಆಯೋಗ ತಕ್ಷಣಕ್ಕೆ ಆಟೋ ರಿಕ್ಷಾವನ್ನು ಚಿಹ್ನೆಯಾಗಿ ಒದಗಿಸಿದೆ ಎನ್ನಲಾಗಿದೆ. ಡಿ.31ರಂದು ರಜನಿ ತಮ್ಮ ರಾಜಕೀಯ ಪಕ್ಷದ ಹೆಸರು ಸೇರಿದಂತೆ ಎಲ್ಲಾ ವಿಷಯಗಳನ್ನು ಅಧಿಕೃತವಾಗಿ ಘೋಷಿಸುವುದಾಗಿ ಈಗಾಗಲೇ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಅಂದೇ ಈ ವಿಷಯ ಕೂಡಾ ಬಹಿರಂಗಪಡಿಸುವ ಸಾಧ್ಯತೆ ಇದೆ.

ವಿಶೇಷವೆಂದರೆ 1995ರಲ್ಲಿ ಬಿಡುಗಡೆಯಾದ ಸೂಪರ್‌ಹಿಟ್‌ ಚಿತ್ರ ಬಾಷಾದಲ್ಲಿ ರಜನಿ ಆಟೋ ಚಾಲಕನ ಪಾತ್ರದಲ್ಲೇ ಕಾಣಿಸಿಕೊಂಡಿದ್ದರು.