* ಈ ವ್ಯಕ್ತಿಗೆ ಇದೆ ಅಪರೂಪದ ಕಾಯಿಲೆ* ವರ್ಷದ 300 ದಿನ ನಿದ್ರೆಗೆ ಜಾರುವ ಆಧುನಿಕ ಕುಂಭಕರ್ಣ!* ಈ ಕಾರಣಕ್ಕೇ ಬರೀ ನಿದ್ದೆಯಲ್ಲೇ ಕಾಲಹರಣ* ತಿಂಗಳಿಗೆ 25 ದಿನ ನಿದ್ದೆ, 5 ದಿನ ಎಚ್ಚರ* ಮಲಗಿದಲ್ಲೇ ಊಟ, ತಿಂಡಿ ಮಾಡಿಸುವ ಕುಟುಂಬಸ್ಥರು

ಜೈಪುರ(ಜು.18): ವರ್ಷದಲ್ಲಿ 6 ತಿಂಗಳು ನಿದ್ರೆಯಲ್ಲಿಯೇ ಕಳೆಯುತ್ತಿದ್ದ ಪೌರಾಣಿಕ ರಾಮಾಯಣ ಪಾತ್ರದಾರಿ ‘ಕುಂಭಕರ್ಣ’ನ ಹೆಸರನ್ನು ಕೇಳಿರುತ್ತೀರಿ. ಆದರೆ ರಾಜಸ್ಥಾನದ ನಾಗೌರ್‌ ಜಿಲ್ಲೆಯ ವ್ಯಕ್ತಿಯೋರ್ವರು ವರ್ಷದ 300 ದಿನವೂ ನಿದ್ದೆಯಲ್ಲಿದ್ದು, ಆಧುನಿಕ ಜಗತ್ತಿನ ಕುಂಭಕರ್ಣ ಎಂದು ಸುದ್ದಿಯಾಗುತ್ತಿದ್ದಾರೆ.

ಹೌದು ಇಲ್ಲಿನ ನಿವಾಸಿ, 42 ವರ್ಷದ ಪುರ್ಖರಂ ಎಂಬರಿಗೆ ಅಪರೂಪದ ನಿದ್ದೆ ಕಾಯಿಲೆ ‘ಆ್ಯಕ್ಸಿಸ್‌ ಹೈಪರ್‌ಸೋಮ್ನಿಯಾ’ ಇದೆ. ಸಾಮಾನ್ಯ ಜನರು 6-8 ಅಥವಾ 9 ಗಂಟೆ ವರೆಗೆ ನಿದ್ದೆ ಮಾಡಿದರೆ, ಪೂರ್ಖರಂ ಒಮ್ಮೆ ಹಾಸಿಗೆ ಹಿಡಿದರೆ 20-25 ದಿನ ನಿದ್ದೆ ಹೋಗುತ್ತಾರೆ. ಮಲಗಿದಾಗಲೇ ಆತನ ಊಟ-ತಿಂಡಿ ಹಾಗೂ ನಿತ್ಯಕರ್ಮಗಳನ್ನು ಕುಟುಂಬಸ್ಥರು ಮಾಡಿಸುತ್ತಾರೆ.

ಉಪಜೀವನಕ್ಕಾಗಿ ಇವರು ಅಂಗಡಿ ಹೊಂದಿದ್ದು, ತಿಂಗಳಲ್ಲಿ ಎಚ್ಚರ ಇರುವ 5 ದಿನ ಮಾತ್ರ ಅಂಗಡಿ ತೆರೆಯುತ್ತಾರೆ.

ಮೆದುಳಿನಲ್ಲಿ ಟಿಎನ್‌ಎಫ್‌-ಆಲ್ಪಾ ಹೆಸರಿನ ಪ್ರೊಟೀನ್‌ ಕೊರತೆ ಉಂಟಾದಾಗ ಈ ನಿದ್ರೆ ಕಾಯಿಲೆ ಬರುತ್ತದೆ ಎನ್ನಲಾಗಿದೆ. 23 ವರ್ಷಗಳ ಹಿಂದೆ ಪುರ್ಖರಂ ಅವರಲ್ಲಿ ಮೊದಲಿಗೆ ಈ ಕಾಯಿಲೆ ಕಾಣಿಸಿಕೊಂಡಿತ್ತು. ಅಲ್ಲಿಂದಲೂ ಈ ಕಾಯಿಲೆ ಇವರನ್ನು ಬಿಟ್ಟೂಬಿಡದೆ ಕಾಡುತ್ತಿದೆ. ಒಮ್ಮೆ ನಿದ್ದೆ ಹೋದರೆ ಎಚ್ಚರವಾಗುವುದೇ ಕಷ್ಟವಾಗಿದೆ. ಈ ಮುನ್ನ 15 ದಿನ ನಿದ್ರಿಸುತ್ತಿದ್ದವರು ಈಗ 25 ದಿನ ನಿದ್ದೆ ಮಾಡುತ್ತಾರೆ.