ಈ ರಾಜ್ಯದಲ್ಲಿನ್ನು ಹಸು ಸಾಕಲು ಲೈಸನ್ಸ್ ಕಡ್ಡಾಯ, ಬಿಡಾಡಿ ಹಸುಗಳ ಹಾವಳಿ ತಪ್ಪಿಸಲು ನಿಯಮ!
* ಬಿಡಾಡಿ ಹಸುಗಳ ಹಾವಳಿ ತಪ್ಪಿಸಲು ಹಾಗೂ ನೈರ್ಮಲ್ಯ ಕಾಪಾಡಲು ಹೊಸ ನಿಯಮ
* ರಾಜಸ್ಥಾನದ ನಗರಗಳಲ್ಲಿ ಹಸು ಸಾಕಲು ಲೈಸನ್ಸ್ ಕಡ್ಡಾಯ
* 900 ಚದರಡಿ ಜಾಗ ಇರಬೇಕು, ವರ್ಷಕ್ಕೆ 1000 ಶುಲ್ಕ ಕಟ್ಟಬೇಕು
ಜೈಪುರ(ಏ.20): ಬಿಡಾಡಿ ಹಸುಗಳ ಹಾವಳಿ ತಪ್ಪಿಸಲು ಹಾಗೂ ನೈರ್ಮಲ್ಯ ಕಾಪಾಡಲು ರಾಜ್ಯದ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹಸು ಅಥವಾ ಎಮ್ಮೆಗಳನ್ನು ಸಾಕಲು ಪರವಾನಗಿ ಕಡ್ಡಾಯಗೊಳಿಸಿ ರಾಜಸ್ಥಾನ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ ಜಾನುವಾರುಗಳನ್ನು ರಸ್ತೆಗೆ ಬಿಟ್ಟರೆ 10,000 ರು. ದಂಡ ವಿಧಿಸಲು ನಿರ್ಧರಿಸಿದೆ.
ಇತ್ತೀಚೆಗಷ್ಟೆಗುಜರಾತ್ ಸರ್ಕಾರ ಕೂಡ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹಸುಗಳನ್ನು ಸಾಕಲು ಲೈಸನ್ಸ್ ಕಡ್ಡಾಯಗೊಳಿಸಿತ್ತು. ಅದರ ಬೆನ್ನಲ್ಲೇ ಅಂತಹುದೇ ಕ್ರಮಗಳಿಗೆ ರಾಜಸ್ಥಾನ ಸರ್ಕಾರ ಮುಂದಾಗಿದೆ.
‘ನಗರ ಹಾಗೂ ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಒಂದು ಮನೆಯಲ್ಲಿ ಒಂದು ಹಸು ಮತ್ತು ಕರುವನ್ನು ಸಾಕಲು ಪರವಾನಗಿ ಅಗತ್ಯವಿಲ್ಲ. ಅದಕ್ಕಿಂತ ಹೆಚ್ಚು ಹಸು ಹಾಗೂ ಎಮ್ಮೆಗಳನ್ನು ಸಾಕಲು ಕನಿಷ್ಠ 900 ಚದರಡಿಯ ಪ್ರತ್ಯೇಕ ಜಾಗ ಹೊಂದಿರಬೇಕು. ಆ ಬಗ್ಗೆ ದಾಖಲೆ ಸಲ್ಲಿಸಿ, 1000 ರು. ಪಾವತಿಸಿ ಒಂದು ವರ್ಷದ ಪರವಾನಗಿ ಪಡೆಯಬೇಕು. ಸಗಣಿಯನ್ನು ನಗರದ ಹೊರಗೆ ವಿಲೇವಾರಿ ಮಾಡಬೇಕು. ಕೊಟ್ಟಿಗೆಯಲ್ಲಿ ಸರಿಯಾದ ನೈರ್ಮಲ್ಯ ವ್ಯವಸ್ಥೆ ಇರಬೇಕು.
ಇದನ್ನು ಉಲ್ಲಂಘಿಸಿದರೆ 500 ರು. ದಂಡ ವಿಧಿಸಲಾಗುತ್ತದೆ. ಹಸುಗಳನ್ನು ರಸ್ತೆಗೆ ಬಿಟ್ಟರೆ 10,000 ರು. ದಂಡ ವಿಧಿಸಲಾಗುತ್ತದೆ. ಎಲ್ಲ ಜಾನುವಾರುಗಳನ್ನು ಅದರ ಮಾಲಿಕರ ಹೆಸರು ಹಾಗೂ ಫೋನ್ ನಂಬರ್ ಜೊತೆ ಜೋಡಿಸಬೇಕು. ಅನುಮತಿಯಿಲ್ಲದೆ ಪಶು ಆಹಾರ ಮಾರಿದರೂ 500 ರು. ದಂಡ ವಿಧಿಸಲಾಗುವುದು’ ಎಂದು ಆದೇಶದಲ್ಲಿ ಹೇಳಲಾಗಿದೆ.